-ಸಂಪತ್‌ ತರೀಕೆರೆ

ಬೆಂಗಳೂರು[ಜು.23]: ಮಳೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಈರುಳ್ಳಿ ಬಿತ್ತನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಲಿದ್ದು, ಗ್ರಾಹಕನ ಕಣ್ಣಲ್ಲಿ ನೀರು ತರಿಸುವ ಸಾಧ್ಯತೆ ಇದೆ.

ಮಳೆ ಕೊರತೆಯಿಂದ ರಾಜ್ಯದಲ್ಲಿ ಈವರೆಗೆ ಕೇವಲ ಶೇ.30ರಷ್ಟುಈರುಳ್ಳಿ ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಇದೇ ಅವಧಿಗೆ ಸುಮಾರು 1.75 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಆಗಿತ್ತು. ಆದರೆ ಈ ಬಾರಿ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬಿತ್ತನೆ ಕೇವಲ 65ರಿಂದ 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಆಗಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಸುಮಾರು 25 ಲಕ್ಷ ಮೆಟ್ರಿಕ್‌ ಟನ್‌ ಈರುಳ್ಳಿ ಕೊರತೆ ಕಂಡುಬರಲಿದೆ ಎಂದು ತೋಟಗಾರಿಕೆ ಇಲಾಖೆ ಅಂದಾಜಿಸಿದೆ.

ಈರುಳ್ಳಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಚಿತ್ರದುರ್ಗ, ವಿಜಯಪುರ, ಧಾರವಾಡ, ಹಾವೇರಿ, ಗದಗ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಶೇ.70ರಷ್ಟು ಈರುಳ್ಳಿ ಬಿತ್ತನೆಯೇ ಆಗಿಲ್ಲ. ಸಾಮಾನ್ಯವಾಗಿ ಜುಲೈ ತಿಂಗಳ ಅಂತ್ಯದೊಳಗೆ ಬಿತ್ತನೆ ಪೂರ್ಣಗೊಳ್ಳಬೇಕು. ನಂತರದಲ್ಲಿ ಮಳೆ ಬಂದರೂ ಬಿತ್ತನೆ ಅಸಾಧ್ಯ. ಒಂದು ವೇಳೆ ಬಿತ್ತನೆಯಾದರೂ ಎಷ್ಟುಪ್ರಮಾಣದ ಫಸಲು ಕೈಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ಇರುತ್ತದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಬೆಳೆಯುವ ಬಹುತೇಕ ಈರುಳ್ಳಿ ತಳಿಗಳು ಸಂಗ್ರಹಣೆಗೆ ಯೋಗ್ಯವಲ್ಲದ ತಳಿಗಳಾಗಿದ್ದು, ಎರಡ್ಮೂರು ತಿಂಗಳಲ್ಲಿ ಖಾಲಿ ಮಾಡದಿದ್ದರೆ ಕೊಳೆತು ಹೋಗುತ್ತದೆ. ಆದರೂ ಮಾರುಕಟ್ಟೆಯಲ್ಲಿ ಸ್ಥಳೀಯ ಈರುಳ್ಳಿಗೆ ಒಳ್ಳೆಯ ಬೇಡಿಕೆ ಇದೆ. ಆದರೆ ಉತ್ಪಾದನೆ ಕಡಿಮೆಯಾಗಿರುವ ಕಾರಣ ಮುಂಬೈನಿಂದ ಈರುಳ್ಳಿಯನ್ನು ತರಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಯಶವಂತಪುರ ಈರುಳ್ಳಿ ವರ್ತಕ ಸೋಮಶೇಖರ್‌ ಅಭಿಪ್ರಾಯ ವಕ್ತಪಡಿಸಿದ್ದಾರೆ.

ಬೆಲೆ ಏರಿಕೆ ಸಾಧ್ಯತೆ:

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಸ್ವಲ್ಪ ಗ್ರಾಹಕಸ್ನೇಹಿಯಾಗಿದೆ. ಆದರೆ ಮುಂದಿನ 15ರಿಂದ 20 ದಿನಗಳಲ್ಲಿ ಈರುಳ್ಳಿ ಗ್ರಾಹಕರಿಗೆ ಹೊರೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಮಾರುಕಟ್ಟೆಗೆ ವಿಜಯಪುರ ಮತ್ತು ಮಹಾರಾಷ್ಟ್ರದಿಂದ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ವಿಜಯಪುರದಿಂದ ದಿನಕ್ಕೆ ಒಂದು ಸಾವಿರ ಟನ್‌ ಮತ್ತು ಮಹಾರಾಷ್ಟ್ರದಿಂದ 1400 ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತದೆ. ಹೋಲ್‌ಸೇಲ್‌ನಲ್ಲಿ ಗುಣಮಟ್ಟದ ಈರುಳ್ಳಿಗೆ 50 ಕೆ.ಜಿ.ಗೆ 700ರಿಂದ 800 ರು.ಗಳಿವೆ. ಸಾಮಾನ್ಯ ಈರುಳ್ಳಿಗೆ 400ರಿಂದ 500 ರು.ಗಳಿವೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 25 ರು. (ಗುಣಮಟ್ಟ) ಇದ್ದು, ಸಾಮಾನ್ಯ ಈರುಳ್ಳಿಗೆ 5 ಕೆ.ಜಿ.ಗೆ 100 ರು.ಗಳು ಇವೆ.

ಯಶವಂತಪುರ ಈರುಳ್ಳಿ ವರ್ತಕರ ಮಾಹಿತಿ ಪ್ರಕಾರ ಇನ್ನು 15 ದಿನಗಳಲ್ಲಿ ವಿಜಯಪುರದಲ್ಲಿನ ಈರುಳ್ಳಿ ಖಾಲಿಯಾಗಲಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿಗಾಗಿ ಮಹಾರಾಷ್ಟ್ರವನ್ನೇ ಆವಲಂಬಿಸಬೇಕಾಗುತ್ತದೆ. ಆದ್ದರಿಂದ ಬೆಂಗಳೂರು ಸೇರಿದಂತೆ ಇತರ ಕಡೆಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಲಿದೆ. ಜತೆಗೆ ಮಹಾರಾಷ್ಟ್ರದಲ್ಲೂ ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ಈರುಳ್ಳಿ ಖಾಲಿಯಾಗಲಿದ್ದು, ಈಗ ರಾಜ್ಯದಲ್ಲಿ ಬಿತ್ತನೆಯಾಗಿರುವ ಈರುಳ್ಳಿ ಫಸಲು ಈ ಎರಡು ತಿಂಗಳ ಅವಧಿಯಲ್ಲಿ ಮಾರುಕಟ್ಟೆಪ್ರವೇಶ ಮಾಡಲಿದೆ. ಬಿತ್ತನೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಉತ್ಪಾದನೆ ನಿರೀಕ್ಷೆ ಸಾಧ್ಯವಿಲ್ಲ. ಈ ಎಲ್ಲ ಕಾರಣದಿಂದ ಈರುಳ್ಳಿ ಗ್ರಾಹಕನ ಜೇಬಿಗೆ ಕತ್ತರಿ ಹಾಕುವುದು ಖಚಿತ ಎನ್ನಲಾಗಿದೆ.

ರಾಜ್ಯದಲ್ಲಿ ಈರುಳ್ಳಿ ಬಿತ್ತನೆ ಅತ್ಯಂತ ಕಡಿಮೆ ಆಗಿದ್ದು, ಮಾರುಕಟ್ಟೆಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಳೆದ ವರ್ಷ ಉತ್ತಮ ಬೆಳೆಯಾಗಿದ್ದರಿಂದ ಈಗ ಕಡಿಮೆ ಬೆಲೆಗೆ ಈರುಳ್ಳಿ ಸಿಗುತ್ತಿದೆ. ಆದರೆ 20 ದಿನಗಳ ನಂತರ ಮಾರುಕಟ್ಟೆದರದಲ್ಲಿಯೇ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಸಹಜವಾಗಿಯೇ ಹೆಚ್ಚಲಿದೆ.

- ಕೆ.ಲೋಕೇಶ್‌, ಅಧ್ಯಕ್ಷ, ಬೆಂಗಳೂರು ಈರುಳ್ಳಿ-ಆಲೂಗಡ್ಡೆ ವರ್ತಕರ ಸಂಘ