Asianet Suvarna News Asianet Suvarna News

Aero india 2023: ಸುಖೋಯ್‌ ರಕ್ಷಿಸುವ ಸಾಧನ ಬೆಂಗಳೂರು ಕಂಪನಿಯಿಂದ ಪೂರೈಕೆ

ಎದುರಾಳಿಯನ್ನು ಹಿಮ್ಮೆಟ್ಟಿಸುವುದರೊಂದಿಗೆ ಶತ್ರುಗಳ ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ವಾಪಾಸ್‌ ಆಗಲು ನೆರವಾಗಬಲ್ಲ ‘ಎಲೆಕ್ಟ್ರಾನಿಕ್‌ ವಾರ್‌ ಪಾಡ್‌’ ಉಪಕರಣ ಏರೋ ಇಂಡಿಯಾದಲ್ಲಿ ಪ್ರದರ್ಶಿಸಲ್ಪಟ್ಟಿತು.

Production of electronic war pod equipment by Rangsons Aerospace attracted people in Aero india exhibition akb
Author
First Published Feb 16, 2023, 8:51 AM IST

ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ ವಾರ್ತೆ 

ಬೆಂಗಳೂರು: ಯುದ್ಧ ಹಾಗೂ ಇತರೆ ಸಂದರ್ಭದಲ್ಲಿ ಎದುರಾಳಿಯನ್ನು ಹಿಮ್ಮೆಟ್ಟಿಸುವುದರೊಂದಿಗೆ ಶತ್ರುಗಳ ಕ್ಷಿಪಣಿ ದಾಳಿಯಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳು ವಾಪಾಸ್‌ ಆಗಲು ನೆರವಾಗಬಲ್ಲ ‘ಎಲೆಕ್ಟ್ರಾನಿಕ್‌ ವಾರ್‌ ಪಾಡ್‌’ ಉಪಕರಣವನ್ನು ಮೈಸೂರು ಮೂಲದ ಸೈಕಲ್‌ ಪ್ಯೂರ್‌ ಸಂಸ್ಥೆಯ ಸಹೋದರ ಸಂಸ್ಥೆಯಾಗಿರುವ ‘ರಂಗ್‌ಸನ್ಸ್‌ ಏರೋಸ್ಪೇಸ್‌’ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು, ಈಗಾಗಲೇ ಭಾರತೀಯ ವಾಯುಪಡೆಗೆ (Indian Air Force) ಪೂರೈಕೆ ಮಾಡುತ್ತಿದೆ.

‘ಎಲೆಕ್ಟ್ರಾನಿಕ್‌ ವಾರ್‌ ಪಾಡ್‌’(Electronic War Pod) ಕ್ಷಿಪಣಿ ಮಾದರಿಯಲ್ಲಿ ಇರಲಿದ್ದು, ಯುದ್ಧ ವಿಮಾನದ ರೆಕ್ಕೆಗಳ ಕೆಳಭಾಗದಲ್ಲಿ ಹೆಚ್ಚುವರಿಯಾಗಿ ಅಳವಡಿಕೆ ಮಾಡಲಾಗುತ್ತದೆ. ಇದು ಯುದ್ಧ ಸಂದರ್ಭದಲ್ಲಿ ಶತ್ರುಪಡೆಗಳ ಕ್ಷಿಪಣಿ ದಾಳಿ ತಡೆಗಟ್ಟಲು ನೆರವಾಗಲಿದೆ. ಉಪಕರಣದಲ್ಲಿ ಪ್ರೋಗಾಂ ಮಾಡಲಾದ ‘ಹೈಪವರ್‌ ಜಾಮಿಂಗ್‌ ಅಪ್ಲಿಕೇಶನ್‌’ ಶತ್ರು ದೇಶದ ಕ್ಷಿಪಣಿ ರಾಡಾರ್‌ ಸಿಸ್ಟಂ ಜಾಮ್‌ ಮಾಡುವ ಮೂಲಕ ಕ್ಷಿಪಣಿಯ ಗುರಿ ತಪ್ಪಿಸಿ ವಿಮಾನಕ್ಕೆ ಆಗುವ ಅಪಾಯ ತಪ್ಪುವಂತೆ ಮಾಡಲಿದೆ. ಈ ರೀತಿಯ ಉಪಕರಣವನ್ನು ತಯಾರಿಸಿ ಭಾರತೀಯ ವಾಯುಪಡೆಗೆ ಪೂರೈಕೆಗೆ ಅರ್ಹತೆ ಹೊಂದಿರುವ ದೇಶದ ಏಕೈಕ ಕಂಪನಿ ಆಗಿದೆ.

Aero India 2023 ಬೆಂಗಳೂರಲ್ಲಿ ಸ್ವದೇಶಿ ನಿರ್ಮಿತ ಪ್ರಚಂಡ, ಸೂರ್ಯಕಿರಣ್ ಯುದ್ಧವಿಮಾನದ ಅಬ್ಬರ!

ಸೂಖೋಯ್‌-30ಗೆ ಬಳಕೆ:

ಭಾರತೀಯ ವಾಯುಪಡೆಯ ಶಕ್ತಿ ಎಂದು ಕರೆಸಿಕೊಳ್ಳುವ ಸೂಖೋಯ್‌-30 (Sukhoi-30 aircraft) ಯುದ್ಧ ವಿಮಾನಕ್ಕೆ ಈ ಉಪಕರಣವನ್ನು ಅಳವಡಿಕೆ ಮಾಡಲಾಗುತ್ತಿದೆ. ಒಟ್ಟು 200 ಸೂಖೋಯ್‌-30 ವಿಮಾನಗಳಿಗೆ ತಲಾ ಎರಡರಂತೆ ಒಟ್ಟು 400 ‘ಎಲೆಕ್ಟ್ರಾನಿಕ್‌ ವಾರ್‌ ಪಾಡ್‌’ಗಳನ್ನು ಪೂರೈಕೆ ಮಾಡುವ ಅನುಮತಿ ರಂಗ್‌ಸನ್ಸ್‌ ಸಂಸ್ಥೆಗೆ ಸಿಕ್ಕಿದೆ. ಮುಂದಿನ ಐದು ವರ್ಷದಲ್ಲಿ 400 ಉಪಕರಣಗಳನ್ನು ಭಾರತೀಯ ವಾಯು ಪಡೆಗೆ ಪೂರೈಕೆ ಮಾಡಬೇಕಿದೆ.

ಬೆಂಗಳೂರಿನಲ್ಲಿ ಸಿದ್ಧ:

ಸೂಖೋಯ್‌ ಯುದ್ಧ ವಿಮಾನಕ್ಕೆ ಬಳಕೆ ಮಾಡುವ ಈ ‘ಎಲೆಕ್ಟ್ರಾನಿಕ್‌ ವಾರ್‌ ಪಾಡ್‌’ ಉಪಕರಣವನ್ನು ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ರಂಗ್‌ಸನ್ಸ್‌ ಉತ್ಪಾದನಾ ಘಟಕದಲ್ಲಿ ಸಿದ್ಧಪಡಿಸಲಾಗುತ್ತಿದೆ. ಸುಮಾರು 400 ಕೋಟಿ ರು. ವಹಿವಾಟು ನಡೆಯುವ ಗುರಿಯಿದೆ. ಈ ಉಪಕರಣವು 28.5 ಕೆ.ಜಿ ತೂಕ ಹೊಂದಿದೆ.

ಏರೋ ಇಂಡಿಯಾದಲ್ಲಿ ದಾಖಲೆಯ 80 ಸಾವಿರ ಕೋಟಿ ಒಪ್ಪಂದಕ್ಕೆ ಸಹಿ

ಎಲೆಕ್ಟ್ರಾನಿಕ್‌ ಆಪ್ಟಿಕಲ್‌ ಪಾಡ್‌ ಸಂಶೋಧನೆ

‘ಎಲೆಕ್ಟ್ರಾನಿಕ್‌ ವಾರ್‌ ಪಾಡ್‌’ ಕ್ಷಿಪಣಿ ದಾಳಿಯಿಂದ ರಕ್ಷಣೆ ನೀಡಿದರೆ, ಎಲೆಕ್ಟ್ರಾನಿಕ್‌ ಆಪ್ಟಿಕಲ್‌ ಪಾಡ್‌ಗಳು ಗಡಿ ಪ್ರದೇಶದಲ್ಲಿ ನಿಗಾ ವಹಿಸುವುದಕ್ಕೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಳಕೆ ಆಗಲಿದೆ. ಈ ಉಪಕರಣ ಅಭಿವೃದ್ಧಿ ಮತ್ತು ತಯಾರಿಕೆಗೆ ಇಸ್ರೇಲ್‌ ಮತ್ತು ಅಮೆರಿಕಾ ಕಂಪನಿಗಳೊಂದಿಗೆ ಒಪ್ಪಂದವನ್ನು ರಂಗ ಸನ್ಸ್‌ ಮಾಡಿಕೊಂಡಿದೆ. ಇದಲ್ಲದೇ ಹೆಲಿಕಾಪ್ಟರ್‌ ಮತ್ತು ಯುದ್ಧ ವಿಮಾನದಲ್ಲಿನ ತಾಪಮಾನ ಕಡಿಮೆ ಮಾಡುವುದಕ್ಕೆ ಬೇಕಾದ ವಿವಿಧ ಸಾಧನೆಗಳನ್ನು ಪರಿಚಯಿಸಿದೆ. ಅದರಲ್ಲಿ ಏರ್‌ ಟು ಏರ್‌ ಹಿಟ್‌ ಎಕ್ಸ್‌ಚೇಂಜ್‌ ಹಾಗೂ ಎಲ್‌-ಎಲ್‌-ಎಲ್‌ ಹಿಟ್‌ ಎಕ್ಸ್‌ಚೇಂಜ್‌ ಎಂಬ ಉಪಕರಣಗಳನ್ನು ಈಗಾಗಲೇ ವಾಯು ಸೇನೆಯ ವಿವಿಧ ಹೆಲಿಕಾಪ್ಟರ್‌, ಯುಎವಿಗಳಲ್ಲಿ ಬಳಕೆ ಮಾಡಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ್‌ ನಿರ್ಮಾಣಕ್ಕೆ ಕೈಜೋಡಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಖರೀದಿಸಿದ ಸ್ವದೇಶಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ರಕ್ಷಣಾ ಇಲಾಖೆಯ ಅಗತ್ಯತೆ ಪೂರೈಕೆ ಮಾಡಲಾಗುತ್ತಿದೆ. -ಪವನ್‌ ಜಿ ರಂಗ, ಸಿಇಒ, ರಂಗ್‌ ಸನ್ಸ್‌ ಏರೋಸ್ಪೇಸ್‌.
 

Follow Us:
Download App:
  • android
  • ios