Asianet Suvarna News Asianet Suvarna News

ನಿರುದ್ಯೋಗ ಸಮಸ್ಯೆಗೆ ಪಿಪಿಪಿ ಸೂತ್ರವೇ ಮದ್ದು

ದೇಶದ ಅತಿದೊಡ್ಡ ಉದ್ಯೋಗದಾತ ಕಂಪನಿ ಎನಿಸಿರುವ ಬೆಂಗಳೂರು ಮೂಲದ ಕ್ವೆಸ್‌ ಕಾರ್ಪ್ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಗುರುಪ್ರಸಾದ್‌ ಶ್ರೀನಿವಾಸನ್‌ ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ

PPP formula is the cure for unemployment problem Guruprasad Srinivasan CEO of Ques Corp akb
Author
First Published Oct 30, 2022, 9:28 AM IST

ಸಂದರ್ಶನ: ಭಾವನಾ ನಾಗಯ್ಯ
ದೇಶದ ಅತಿದೊಡ್ಡ ಉದ್ಯೋಗದಾತ ಕಂಪನಿ ಎನಿಸಿರುವ ಬೆಂಗಳೂರು ಮೂಲದ ಕ್ವೆಸ್‌ ಕಾರ್ಪ್ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಗುರುಪ್ರಸಾದ್‌ ಶ್ರೀನಿವಾಸನ್‌ ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಕೇವಲ 14 ವರ್ಷಗಳಲ್ಲೇ ಕಂಪನಿ ಸಾಧಿಸಿದ ಯಶಸ್ಸು, ನಿರುದ್ಯೋಗ ತಗ್ಗಿಸುವ ನಿಟ್ಟಿನಲ್ಲಿ ತಮ್ಮ ಕೊಡುಗೆ, ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.


ಭಾರತದ ಅತಿದೊಡ್ಡ ಉದ್ಯೋಗದಾತ ಕಂಪನಿ ಎನಿಸಿದ ಕ್ವೆಸ್‌ ಕಾರ್ಪ್ ಸ್ಥಾಪನೆಯ ಹಿಂದೆ ಎಷ್ಟು ಶ್ರಮವಿದೆ?

ಕ್ವೆಸ್‌ ಕಾಪ್‌ರ್‍ (Ques Corp) ಸ್ಥಾಪನೆಯಾಗಿ 14 ವರ್ಷಗಳು ಕಳೆದು 15ನೇ ವರ್ಷಕ್ಕೆ ನಾವು ಕಾಲಿಡುತ್ತಿದ್ದೇವೆ. 2007ರಲ್ಲಿ ಬೆಂಗಳೂರಿನಲ್ಲಿ (Bangalore) ನಾವು ಸಣ್ಣ ಮೂರು ಬೆಡ್‌ರೂಮ್‌ ಮನೆಯಿಂದ ಈ ಕಂಪನಿಯನ್ನು ಆರಂಭಿಸಿದ್ದೆವು. 8 ಜನರು ಸೇರಿ ಸ್ಥಾಪನೆ ಮಾಡಿದ ಈ ಕಂಪನಿ ಆರಂಭದಲ್ಲಿ ಮಾನವ ಸಂಪನ್ಮೂಲ (human resource provider)ಒದಗಿಸುವ ಕಂಪನಿಯಾಗಿತ್ತು. 2007-08ನೇ ಸಾಲಿನಲ್ಲಿ ಆರ್ಥಿಕ ಹಿಂಜರಿತದ ವೇಳೆ ನಾವು ಕಂಪನಿಯ ಸೇವೆಗಳ ವಿಸ್ತರಣೆ ಮಾಡಲು ಮುಂದಾದೆವು. ಸೌಲಭ್ಯಗಳ ನಿರ್ವಹಣೆ, ಐಟಿ ಸಿಬ್ಬಂದಿ ಪೂರೈಕೆ ಮೊದಲಾದ ಸೇವೆ ಒದಗಿಸಲು ಆರಂಭಿಸಿದೆವು. ಈ ವೇಳೆ ದೇಶದ ಜನರು ಕೂಡಾ ಕಾಯಂ ಉದ್ಯೋಗದ (permanent employment) ಮನಸ್ಥಿತಿಯಿಂದ ಹೊರಬಂದು ತಾತ್ಕಾಲಿಕ, ಅರೆಕಾಲಿಕ ಉದ್ಯೋಗಗಳಿಗಾಗಿಯೂ ತೆರೆದುಕೊಳ್ಳಲು ಆರಂಭಿಸಿದರು. 2012ರಲ್ಲಿ ಫೈರ್‌ಫಾಕ್ಸ್‌ ಕಂಪನಿ ನಮ್ಮ ಕಂಪನಿಯಲ್ಲಿ ಹೂಡಿಕೆಗೆ ಮುಂದಾಯಿತು. ಇಂದು ನಾವು ದೇಶಾದ್ಯಂತ 65ಕ್ಕೂ ಅಧಿಕ ಕಚೇರಿಗಳನ್ನು ಹೊಂದಿದ್ದೇವೆ. ಭಾರತದ ಖಾಸಗಿ ಕಂಪನಿಯಲ್ಲಿ ಅತಿದೊಡ್ಡ ಉದ್ಯೋಗದಾತ ಕಂಪನಿ ಎನಿಸಿಕೊಂಡಿದ್ದೇವೆ. 4.7 ಲಕ್ಷ ಜನರು ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರವೇ 5 ಲಕ್ಷ ಉದ್ಯೋಗಿಗಳನ್ನು ಹೊಂದುವತ್ತ ನಾವು ಸಾಗುತ್ತಿದ್ದೇವೆ.

ಬೆಂಗಳೂರು ಮೂಲದ ಕ್ವೆಸ್‌ ಕಾರ್ಪ್ ಅತಿ ಕಡಿಮೆ ಸಮಯದಲ್ಲಿ ಯಶಸ್ವಿಯಾಗಿದ್ದು ಹೇಗೆ?

ಮಾರುಕಟ್ಟೆಅಗತ್ಯಕ್ಕೆ ತಕ್ಕಂತೆ ಬದಲಾಗುವುದು ಮುಖ್ಯ. ಇದೇ ನಮ್ಮ ಯಶಸ್ಸಿಗೆ ಕಾರಣ ಎನ್ನಬಹುದು. ನಾವು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ನಮ್ಮ ಸೇವೆಗಳನ್ನು ವಿಸ್ತರಿಸಿದ್ದೇವೆ. ಪ್ರಸ್ತುತ ವರ್ಕ್ಫೋರ್ಸ್‌ ವಿಭಾಗದಲ್ಲಿ ನಾವು ಜನರನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿದ ಬಳಿಕ ಬೇರೆ ಕಂಪನಿಗಳಲ್ಲಿ ಉದ್ಯೋಗ ಒದಗಿಸಿಕೊಡುತ್ತೇವೆ. ಈ ಸೇವೆ ಒದಗಿಸುವ ಭಾರತದ ಅತಿದೊಡ್ಡ ಕಂಪನಿ ಎಂಬ ಖ್ಯಾತಿ ನಮಗಿದೆ. ವರ್ಕ್ಫೋರ್ಸ್‌ನಲ್ಲಿ 3.6 ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಐಟಿ ಕ್ಷೇತ್ರದಲ್ಲಿರುವ ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡುವ ನುರಿತ ಸಿಬ್ಬಂದಿಯನ್ನು ನಮ್ಮಲ್ಲಿ ನೇಮಿಸಿಕೊಳ್ಳುತ್ತೇವೆ. ಅವರು ನಮ್ಮ ಗ್ರಾಹಕರಿಗಾಗಿ ಹೊಸ ಆಪ್‌ಗಳನ್ನು ವಿನ್ಯಾಸಗೊಳಿಸುತ್ತಾರೆ. 10,000ಕ್ಕೂ ಹೆಚ್ಚು ಸಿಬ್ಬಂದಿ ಈ ನಿಟ್ಟಿನಲ್ಲಿ ನಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ನಮ್ಮಲ್ಲಿ ತರಬೇತಿ ಹಾಗೂ ಕೌಶಲ್ಯಾಭಿವೃದ್ಧಿ (skill development) ವಿಭಾಗವಿದೆ. ಸರ್ಕಾರದ ಜತೆಯೂ ನಾವು ಕೌಶಲ್ಯಾಭಿವೃದ್ಧಿ ಕುರಿತ ಕೆಲಸ ಮಾಡುತ್ತಿದ್ದೇವೆ.

ಗ್ರಾಹಕರಿಗೆ ಅಗತ್ಯಕ್ಕೆ ತಕ್ಕಂತೆ ನೀವು ಒದಗಿಸುತ್ತಿರುವ ವಿನೂತನ ಸೇವೆಗಳ ಬಗ್ಗೆ ಮಾಹಿತಿ ನೀಡಿ.

ನಾವು ಸಮಗ್ರ ಆಸ್ತಿ ನಿರ್ವಹಣೆ ವಿಭಾಗ (property management division) ಹೊಂದಿದ್ದೇವೆ. ಈ ವಿಭಾಗದಲ್ಲಿ ನಾವು ಗ್ರಾಹಕರ ಎಲ್ಲ ಆಸ್ತಿ ವ್ಯವಹಾರಗಳ ನಿರ್ವಹಣೆ ಮಾಡುತ್ತೇವೆ. ನಾವು ವಾಣಿಜ್ಯ ಉದ್ದಿಮೆಗಳಿಗೆ ವಿಶೇಷವಾಗಿ ಈ ಸೇವೆಯನ್ನು ಒದಗಿಸುತ್ತೇವೆ. ಇನ್ನು ಗ್ಲೋಬಲ್‌ ಟೆಕ್ನಾಲಜಿಯಲ್ಲಿ (Global Technology) 2 ಬಗೆಯ ಸೇವೆಯನ್ನು ಒದಗಿಸುತ್ತೇವೆ. ಇನ್‌ಬೌಂಡ್‌ ಹಾಗೂ ಔಟ್‌ಬೌಂಡ್‌ ಸಪೋರ್ಟ್ (outbound support) ಸೆಂಟರ್‌ ನಡೆಸುತ್ತೇವೆ. ನೀವು ಯಾವುದೇ ಸಮಸ್ಯೆ ಬಗ್ಗೆ ಕೇಳಿದಾಗ ನಾವು ಅದಕ್ಕೆ ಉತ್ತರಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ಕೆಲಸವನ್ನು ಮಾಡುತ್ತೇವೆ. ಇದರೊಂದಿಗೆ ನಾವು ಪೇರೋಲ್‌ ಪೂರೈಕೆದಾರರಾಗಿಯೂ ಕೆಲಸ ಮಾಡುತ್ತೇವೆ. ಮಿಲಿಯನ್‌ಗಟ್ಟಲೇ ಪೇಸ್ಲಿಪ್‌ಗಳ ಪ್ರೊಸೆಸಿಂಗ್‌ ಕೆಲಸವನ್ನು ಮಾಡುತ್ತೇವೆ. ಇಂತಹ ಕಾರ್ಯಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತದೆ. ಇದಲ್ಲದೇ ನಾವು ನಮ್ಮ ಕೆಲಸ ನಿರ್ವಹಿಸಲು ಅನುಕೂಲವಾಗುವ ಆಪ್ಲಿಕೇಶನ್‌ ಅಭಿವೃದ್ಧಿ ಪಡಿಸುತ್ತೇವೆ. ನಾವು ಮಾನ್‌ಸ್ಟರ್‌ ಡಾಟ್‌ಕಾಂ ಒಡೆತನ ಹೊಂದಿದ್ದೇವೆ. ಇದು 2ನೇ ಅತಿದೊಡ್ಡ ಉದ್ಯೋಗದ ಪೋರ್ಟಲ್‌ (job portal) ಆಗಿದೆ. ಇದರಲ್ಲಿ ನಾವು ಉದ್ಯೋಗ ಅರಸುತ್ತಿರುವವರನ್ನು ಉದ್ಯೋಗದಾತರೊಡನೆ ಸಂಪರ್ಕಿಸಲು ನೆರವಾಗುತ್ತೇವೆ. ಇದರೊಂದಿಗೆ ಹೊಸದಾಗಿ ಕ್ಯುಜಾಬ್ಸ್‌ ಎಂಬ ಮತ್ತೊಂದು ಆನ್ಲೈನ್‌ ವೇದಿಕೆಯನ್ನು ಆರಂಭಿಸಿದ್ದೇವೆ. ಜನರ ಪಿನ್‌ಕೋಡ್‌ ಬಳಸಿ ಆಯಾ ಸ್ಥಳದಲ್ಲೇ ಅವರಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಪಟ್ಟಿಯನ್ನು ಇದು ಒದಗಿಸುತ್ತದೆ.

ನಿಮ್ಮ ಕಂಪನಿಯ ಯಶಸ್ಸಿನ ಹಿಂದಿನ ರಹಸ್ಯವೇನು?

ಕೆಲಸದ ಬಗ್ಗೆ ಶ್ರದ್ಧೆ, ಮಾರುಕಟ್ಟೆಅಗತ್ಯಗಳು, ಗ್ರಾಹಕರ ಅಗತ್ಯಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ಪೂರಕವಾದ ಸೇವೆ ಒದಗಿಸುವುದು ನಮ್ಮ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರೊಂದಿಗೆ ದೇಶದಲ್ಲಿ ಅತಿ ವೇಗದಲ್ಲಿ ತಾಂತ್ರಿಕ ಅಭಿವೃದ್ಧಿ ಆಗಿದ್ದು, ಇದು ಕೂಡಾ ನಮ್ಮ ಯಶಸ್ಸಿಗೆ ಕಾರಣವಾಗಿದೆ ಎನ್ನಬಹುದು.

ನಿರುದ್ಯೋಗ ತಗ್ಗಿಸುವ ನಿಟ್ಟಿನಲ್ಲಿ ನಿಮ್ಮ ಕಂಪನಿ ಹೇಗೆ ಕೊಡುಗೆ ನೀಡುತ್ತಿದೆ ಎನ್ನುವುದರ ಬಗ್ಗೆ ವಿವರಿಸುತ್ತೀರಾ?

ಸ್ಥಳೀಯ ಜನರಿಗೆ ನಾವು ಉದ್ಯೋಗವನ್ನು ಒದಗಿಸಿಕೊಡುತ್ತೇವೆ. ಪ್ರತಿವರ್ಷವೂ ಮಿಲಿಯನ್‌ಗಟ್ಟಲೆ ಜನರು ಉದ್ಯೋಗ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಇದರಲ್ಲಿ ಪದವೀಧರರು, 12ನೇ ಹಾಗೂ 10ನೇ ತರಗತಿ ಪಾಸಾದವರೂ ಸೇರಿದ್ದಾರೆ. ಬೃಹತ್‌ ಜನಸಂಖ್ಯೆಯಿರುವ ದೇಶದಲ್ಲಿ ನಾವು ಕಾರ್ಪೊರೆಟ್‌ ಕಂಪನಿಗಳಿಗೆ ಉದ್ಯೋಗಿಗಳನ್ನು ಒದಗಿಸಿಕೊಡುತ್ತೇವೆ. ಅವರಿಗೆ ಅಗತ್ಯ ಕೌಶಲ್ಯ ಹಾಗೂ ತರಬೇತಿ ಕೂಡಾ ನೀಡುತ್ತೇವೆ. ಅಸಂಘಟಿತ ವಲಯವನ್ನು ಸಂಘಟಿತ ವಲಯವಾಗಿ ಪರಿವರ್ತಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಹೇಳಬಹುದು.

ನಿಮ್ಮ ಪ್ರಕಾರ ಉದ್ಯೋಗಾವಕಾಶ ಹೆಚ್ಚಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೇಗೆ ಕಾರ್ಯನಿರ್ವಹಿಸಬಹುದು?

ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಗಾಗಲೇ ಸಾಕಷ್ಟುಯೋಜನೆಗಳನ್ನು ಹಮ್ಮಿಕೊಳ್ಳುತ್ತಿವೆ. ಇದು ಪ್ರಸ್ತುತ ನಿರುದ್ಯೋಗ ದರವನ್ನು ಕಡಿಮೆ ಮಾಡಲು ಅಗತ್ಯ. ಆದರೆ ಹೆಚ್ಚಾಗಿ ಇಂದು ಉದ್ಯೋಗಾವಕಾಶಗಳು ಮಹಾನಗರಗಳಲ್ಲಿ ಲಭ್ಯವಾಗುತ್ತಿದೆ. ಇದರಿಂದ ಹಳ್ಳಿಯ ಜನರು ಉದ್ಯೋಗವನ್ನು ಅರಸಿ ನಗರಗಳಿಗೆ ವಲಸೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಬದಲಾಗಬೇಕು. ಸರ್ಕಾರ ಸಮತೋಲಿತ ಅಭಿವೃದ್ಧಿಯ ನಿಟ್ಟಿನಲ್ಲಿ ನೀತಿ ಜಾರಿಗೆ ತಂದರೆ ಈ ಸಮಸ್ಯೆಯು ಸುಧಾರಿಸಬಹುದು. ಸದ್ಯದ ಮಾರುಕಟ್ಟೆಅಗತ್ಯತೆಯಂತೆ ಕೌಶಲ್ಯಗಳನ್ನು ಜನರಿಗೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ನೀತಿಗಳಲ್ಲಿ ಬದಲಾವಣೆ ತರಬೇಕು. ಕೇವಲ ಸಾಂಪ್ರದಾಯಿಕ ಶಿಕ್ಷಣದ ಬದಲಾಗಿ ಉದ್ಯೋಗಾಧಾರಿತ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಗತವಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಿಂದ ದೊಡ್ಡ ಮಟ್ಟದ ಬದಲಾವಣೆಗೆ ಸಾಧ್ಯ ಎಂಬುದು ನನ್ನ ಅಭಿಪ್ರಾಯ.

ದೇಶದಲ್ಲಿ ಯಾವ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ?

ಸದ್ಯ ದೇಶದಲ್ಲಿ 50 ಕೋಟಿ ಜನರು ಉದ್ಯೋಗಿಗಳಾಗಿದ್ದಾರೆ. ಇದರಲ್ಲಿ ಶೇ.40ರಷ್ಟುಎಂದರೆ ಸುಮಾರು 20 ಕೋಟಿ ಜನರು ಸಂಘಟಿತ ವಲಯ ಕಾರ್ಮಿಕರಾಗಿದ್ದಾರೆ. ಉಳಿದ 30 ಕೋಟಿ ಜನರು ಕೃಷಿ ಸಂಬಂಧಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದು, ಇದು ಸಂಪೂರ್ಣ ಅಸಂಘಟಿತ ವಲಯವಾಗಿದೆ. ಈ 20 ಕೋಟಿ ಸಂಘಟಿತ ವಲಯದ ಉದ್ಯೋಗಿಗಳಲ್ಲಿ 10 ಕೋಟಿ ಜನರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಾರೆ. ಉಳಿದವರಲ್ಲಿ ಶೇ.3ರಷ್ಟುಜನರು ಮಾತ್ರ ಔಪಚಾರಿಕ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಅದೇ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಪ್ರಮಾಣ ಶೇ.10ರಷ್ಟಿರುತ್ತದೆ. ನಮ್ಮಲ್ಲಿ 4.5 ದಶಲಕ್ಷ ಜನರು ನಮ್ಮ ದೇಶದಲ್ಲಿ ತಾತ್ಕಾಲಿಕ ಅಥವಾ ಅರೆಕಾಲಿಕ ಉದ್ಯೋಗಿಗಳಾಗಿದ್ದಾರೆ. ಕಾಲಕಾಲಕ್ಕೆ ತಂತ್ರಜ್ಞಾನ ಬದಲಾಗುತ್ತಿದೆ. ಮೊದಲು ಉತ್ಪಾದನಾ ಘಟಕ ಅತಿ ಹೆಚ್ಚು ಉದ್ಯೋಗಾವಕಾಶ ಒದಗಿಸುತ್ತಿತ್ತು. ಬಳಿಕ ಆ ಸ್ಥಾನವನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರ ಪಡೆದುಕೊಂಡಿತು. ಟೆಲಿಕಾಂ ಕ್ರಾಂತಿಯ ಬಳಿಕ ಟೆಲಿಕಾಂನಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದವು. ಬಳಿಕ ಇ-ಕಾಮರ್ಸ್‌, ಲಾಜಿಸ್ಟಿಕ್‌ ಉದ್ಯಮಗಳು ಆರಂಭವಾದವು. ಆಹಾರ ಡೆಲಿವರಿ ಮೊದಲಾದ ಉದ್ಯಮಗಳು ಈಗ ಬಹಳಷ್ಟುಜನರಿಗೆ ಉದ್ಯೋಗಾವಕಾಶ ನೀಡುತ್ತಿರುವುದನ್ನು ನೋಡಬಹುದು. ಕಾಲಕ್ಕೆ ತಕ್ಕಂತೆ ಉದ್ಯೋಗಗಳು ಬದಲಾಗುತ್ತಿವೆ.

ಇಂದಿನ ಯುವಕರಿಗೆ ನೀವು ಯಾವ ಸಲಹೆ ನೀಡಲು ಬಯಸುತ್ತೀರಿ?

ಯುವಕರು ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು. ಸಾಧಿಸಬೇಕು ಎಂದು ನಿರ್ಧರಿಸಿದಾಗ ಯಾವುದೇ ತೊಡಕುಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಕಂಪನಿ ಶುರುವಾಗಿ 15 ವರ್ಷಗಳಾದರೂ ನಾನು ಸತತವಾಗಿ ದಿನಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ಪರಿಶ್ರಮ ಹಾಗೂ ಛಲದಿಂದ ಕೆಲಸ ಮಾಡಿದರೆ ನಿಮಗೆ ಖಂಡಿತವಾಗಿಯೂ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದು ನನ್ನ ಅಭಿಪ್ರಾಯ.
 

Follow Us:
Download App:
  • android
  • ios