ಮುಂಬೈ(ಡಿ.18): ಶೇ.99 ರಷ್ಟು ಪದಾರ್ಥಗಳನ್ನು ಶೇ.18ರ  ಜಿಎಸ್‌ಟಿ ವ್ಯಾಪ್ತಿಗೆ ತರುವುದು ತಮ್ಮ ಸರ್ಕಾರದ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಜಿಎಸ್‌ಟಿ ತೆರಿಗೆ ಜಾರಿ ಮುನ್ನ 55 ಲಕ್ಷ ಉದ್ಯಮಗಳು ನೋಂದಾಯಿತವಾಗಿದ್ದವು. ಈಗ ಅವುಗಳ ಸಂಖ್ಯೆ 65 ಲಕ್ಷ ಆಗಿದೆ.  ಶೇ, 99 ರಷ್ಟು ಪದಾರ್ಥಗಳನ್ನು ಶೇ. 18 ಜಿಎಸ್‌ಟಿ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮೋದಿ ಭರವಸೆ ನೀಡಿದರು. 

ತಮ್ಮ ಆಡಳಿತ ಅವಧಿಯಲ್ಲಿನ  ದೇಶದ ಪ್ರಗತಿ ಬಗ್ಗೆ ಸಮಗ್ರ ಮಾಹಿತಿ ನೀಡಿದ ಪ್ರಧಾನಿ ಮೋದಿ, ದೇಶದ ಆರ್ಥಿಕ ಕ್ಲಬ್‌ಗೆ 5 ಟ್ರಿಲಿಯನ್ ಡಾಲರ್ ಸೇರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು. 

ದೇಶದ ಆರ್ಥಿಕ ಬೆಳವಣಿಗೆ ದರ ತ್ವರಿತಗತಿಯಲ್ಲಿ ಮುಂದುವರೆಯುತ್ತಿದ್ದು, ವಿಶ್ವದ ರಾಷ್ಟ್ರಗಳ ಮುಂದೆ ಭಾರತದ ವರ್ಚಸ್ಸು ವೃದ್ದಿಸಿದೆ. ಸುಲಭ ವ್ಯವಹಾರ ಮಾಡುವ ರಾಷ್ಟ್ರಗಳ ಪೈಕಿ ಭಾರತ 142 ನೇ ಸ್ಥಾನದಿಂದ 77ಕ್ಕೆ ಸ್ಥಾನಕ್ಕೆ ಜಿಗಿತ ಕಂಡಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. 

ಇದೇ ವೇಳೆ ಬ್ಯಾಂಕುಗಳಿಗೆ ಸಾಲ ಮರುಪಾವತಿಸದೆ ವಿದೇಶದಲ್ಲಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದರು.