ಇಂದು ಬಿಡುಗಡೆಯಾಗಲಿದೆ ಪಿಎಂ ಕಿಸಾನ್ ಸಮ್ಮಾನ್ ನಿಧಿ!
ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಲಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ಸೂರ್ಯ ಪ್ರತಾಪ್ ಸಾಹಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಸೆ.28): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 18ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ವಾಶಿಮ್‌ನಿಂದ ಪಿಎಂ ಕಿಸಾನ್‌ನ ಹಣವನ್ನು (PM Kisan 18th Installment 2024) ರೈತರ ಖಾತೆಗೆ ಕಳಿಸಲಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಒಟ್ಟಾರೆ 9.5 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟಾರೆಯಾಗಿ 20 ಸಾವಿರ ಕೋಟಿ ರೂಪಾಯಿ ಹಣ ವರ್ಗಾವಣೆ ಆಗಲಿದೆ ಎನ್ನಲಾಗಿದೆ. ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ಮೂರು ಕಂತುಗಳಲ್ಲಿ ನೀಡುತ್ತದೆ. ಇಲ್ಲಿಯವರೆಗೂ 17 ಕಂತುಗಳಲ್ಲಿ ಹಣ ನೀಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಟ್ಟು 74, 492.71 ಕೋಟಿ ರೂಪಾಯಿಯನ್ನು ರೈತರ ಖಾತೆಗಳಿಗೆ ಹಾಕಲಾಗಿದೆ. ಇಂದು ಒಟ್ಟಾರೆ ದೇಶದ 9.51 ಕೋಟಿ ರೈತರ ಖಾತೆಗಳಿಗೆ 20, 552 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಲಿದೆ ಎನ್ನಲಾಗಿದೆ.
PM ಕಿಸಾನ್‌ನಲ್ಲಿ eKYC ಕಡ್ಡಾಯ: ಪಿಎಂ ಕಿಸಾನ್ ಯೋಜನೆಯಡಿ ರೈತರು ತಮ್ಮ ಕೆಲವು ದಾಖಲೆಗಳನ್ನು ನೀಡುವುದರ ಜೊತೆಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ನೀವು ಕೂಡ ಈ ಯೋಜನೆಯ ಮುಂದಿನ ಕಂತಿಗಾಗಿ ಕಾಯುತ್ತಿದ್ದರೆ, ನಿಮ್ಮ ನೋಂದಣಿ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಇ-ಕೆವೈಸಿ ವಿವರಗಳನ್ನು ತಕ್ಷಣವೇ ನವೀಕರಿಸಿ. ಪಿಎಂ ಕಿಸಾನ್ ಯೋಜನೆಯಲ್ಲಿ ಇ-ಕೆವೈಸಿ ಕಡ್ಡಾಯ ಪ್ರಕ್ರಿಯೆಯಾಗಿದೆ.
ಇದರಲ್ಲಿ ಆಧಾರ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಅಥವಾ ಸಿಎಸ್‌ಸಿ ಕೇಂದ್ರದಿಂದ ಬಯೋಮೆಟ್ರಿಕ್ ಮೂಲಕ ಪೂರ್ಣಗೊಳಿಸಲಾಗುತ್ತದೆ. ನೀವು ಈ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸದಿದ್ದರೆ ಅಥವಾ ಏನಾದರೂ ತಪ್ಪಾಗಿದ್ದರೆ, ತಕ್ಷಣ ಅದನ್ನು ಸರಿಪಡಿಸಿ, ಇಲ್ಲದಿದ್ದರೆ ಹಣ ಬರೋದಿಲ್ಲ. ಈ ಮಾಹಿತಿಯನ್ನು ನೀವು ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಕೇವಲ ಒಂದು ನಿಮಿಷದಲ್ಲಿ ಮಾಡಬಹುದು. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸಂಪೂರ್ಣ ಪಟ್ಟಿ (PM Kisan Beneficiary List) ಆನ್‌ಲೈನ್‌ನಲ್ಲಿ ಲಭ್ಯವಿದೆ, ನೀವು ಒಂದು ನಿಮಿಷ ಸಮಯ ತೆಗೆದುಕೊಂಡು ನಿಮಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 18 ನೇ ಕಂತು ಸಿಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು.
PM ಕಿಸಾನ್ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ವಿಧಾನ
- ಪಿಎಂ ಕಿಸಾನ್ ಯೋಜನೆಯ ಲಿಂಕ್ https://pmkisan.gov.in/ ಗೆ ಭೇಟಿ ನೀಡಿ.
- farmer corner ಮೇಲೆ ಕ್ಲಿಕ್ ಮಾಡಿ ಹೊಸ ಪುಟ ತೆರೆಯಲು ಬಿಡಿ.
- ಈಗ Beneficiary List ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಒಂದು ಫಾರ್ಮ್ ತೆರೆಯುತ್ತದೆ.
- ಈ ಫಾರ್ಮ್‌ನಲ್ಲಿ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ Get Report ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಗ್ರಾಮದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.
- ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ, ಹೆಸರಿದ್ದರೆ ನಿಮಗೆ ಹಣ ಬರುತ್ತದೆ, ಇಲ್ಲದಿದ್ದರೆ ತಕ್ಷಣ ತಪ್ಪನ್ನು ಸರಿಪಡಿಸಿ.
- ಪಿಎಂ ಕಿಸಾನ್ ಯೋಜನೆಗೆ ರಿಜಿಸ್ಟರ್ ಮಾಡೋದು ಹೇಗೆ?
ಪಿಎಂ ಕಿಸಾನ್ ಕಂತಿನ ಹಣದ ಸಹಾಯವಾಣಿ ಸಂಖ್ಯೆ: ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಮಸ್ಯೆ ಇದ್ದರೆ, pmkisan-ict@gov.in ಇಮೇಲ್ ಐಡಿಗೆ ಬರೆದು ಸಹಾಯ ಪಡೆಯಬಹುದು. ಇದಲ್ಲದೆ, 155261, 1800115526 ಅಥವಾ 011-23381092 ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಗಳಲ್ಲಿ ಸಹ ನೀವು ಸಹಾಯ ಪಡೆಯಬಹುದು.