Asianet Suvarna News Asianet Suvarna News

ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ವಿರುದ್ಧ ತನಿಖೆಗೆ ಪಿಎಸಿ ನಿರ್ಧಾರ?

ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ. 

PAC decision to investigate against stock market regulator SEBI chief Madhabi Puri Buch akb
Author
First Published Sep 6, 2024, 1:06 PM IST | Last Updated Sep 6, 2024, 1:06 PM IST

ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ  ಸರ್ಕಾರ ತನಿಖೆ ನಡೆಸಲಿದೆ ಎಂದು ವರದಿಯಾಗಿದೆ. ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ಮಾಧವಿ ಬುಚ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಗಮನಹರಿಸಿದ್ದು, ಅವರಿಗೆ  ಈ ತಿಂಗಳಲ್ಲಿ ಸಮನ್ಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಅಂಗ್ಲ ಮಾಧ್ಯಮ ಇಕನಾಮಿಕ್‌ ಟೈಮ್ಸ್ ವರದಿ ಮಾಡಿದೆ. ಸೆಬಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್‌ನಲ್ಲಿ ಬೇನಾಮಿ ಹೂಡಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 

ಆಗಸ್ಟ್ 29ರಂದು ನಡೆದ ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮೊದಲ ಸಭೆಯಲ್ಲಿ ಅನೇಕ ಸದಸ್ಯರು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ ಬೆನ್ನಲೇ  ಪಿಎಸಿ ತನ್ನ ಅಜೆಂಡಾಕ್ಕೆ ಈ ವಿಚಾರವನ್ನು ಸೇರಿಸಿದೆ ಎಂದು ವರದಿ ಆಗಿದೆ. ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಸಂಸದೀಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯಸ್ಥರಾಗಿದ್ದು, ಆಡಳಿತರೂಢ ಎನ್‌ಡಿಎ ಹಾಗೂ ವಿರೋಧ ಪಕ್ಷ ಇಂಡಿಯಾ ಈ ಎರಡು ಮೈತ್ರಿಕೂಟದ ಸದಸ್ಯರು  ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿದ್ದಾರೆ.  ಆದರೆ ಪಿಸಿಎ ಅಜೆಂಡಾವೂ ಷೇರುಪೇಟೆ  ನಿಯಂತ್ರಕ ಅಥವಾ ಸೆಬಿ ಮುಖ್ಯಸ್ಥರ ಹೆಸರನ್ನ ತನ್ನ ಅಜೆಂಡಾದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ.  ಅದು ಸಂಸತ್ತಿನ ಕಾಯಿದೆಯಿಂದ ಸ್ಥಾಪಿಸಲಾದ ನಿಯಂತ್ರಕ ಸಂಸ್ಥೆಗಳ ಕಾರ್ಯಕ್ಷಮತೆ ಪರಿಶೀಲನೆ ಎಂದು ಈ ವಿಚಾರವನ್ನು ತನ್ನ ಅಜೆಂಡಾ ಪಟ್ಟಿಯಲ್ಲಿ ಸೇರಿಸಿದೆ ಎಂದು ವರದಿಯಾಗಿದೆ.

ಮತ್ತೆ ತಪ್ಪು ದಾರಿ ಹಿಡಿದ ಅನಿಲ್ ಅಂಬಾನಿ, ಷೇರು ಮಾರುಕಟ್ಟೆಯಿಂದ 5 ವರ್ಷ ಬ್ಯಾನ್ ಮಾಡಿದ ಸೆಬಿ!

ವರದಿಯ ಪ್ರಕಾರ ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ಹೇಳುವಂತೆ, ಸೆಬಿ ಮುಖ್ಯಸ್ಥರ ವಿರುದ್ಧ ಕೇಳಿ ಬಂದ ಇತ್ತೀಚಿನ ಆರೋಪಗಳಿಂದ ವಿಚಾರಣೆಯ ಆಗ್ರಹ ಕೇಳಿ ಬಂದಿದೆ. ಷೇರು ಮಾರುಕಟ್ಟೆಯ ಬಂಡವಾಳ ಮಾರುಕಟ್ಟೆ ನಿಯಂತ್ರಕ ಮತ್ತು ಕಂಪನಿಯ ವಿರುದ್ಧದ ಗಂಭೀರ ಆರೋಪಗಳ ಬಗ್ಗೆ ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದ್ದರಿಂದ ಆಗಸ್ಟ್ 29 ರ ಸಭೆಯಲ್ಲಿ ಸ್ವಯಂಪ್ರೇರಿತವಾಗಿ ಈ ವಿಚಾರವನ್ನು ಸೇರಿಸಲಾಯ್ತು ಹೀಗಾಗಿ ಮುಂದಿನ ದಿನಗಳಲ್ಲಿ ಸೆಬಿ ಮುಖ್ಯಸ್ಥರನ್ನು ವಿಚಾರಣೆಗೆ ಕರೆಯಬಹುದು ಎಂದು ಹೇಳಿದ್ದಾರೆ. 

ಆದರೆ  ಮಾಧವಿ ಪುರಿ ಬುಚ್ ಅವರು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ್ದರು. ಅದಾನಿ ಗ್ರೂಪ್‌ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸಿಬ್ಬಂದಿಯನ್ನು ಬಾಹ್ಯ ಶಕ್ತಿಗಳಿಂದ ದಾರಿತಪ್ಪಿಸಲಾಗುತ್ತಿದೆ ಎಂದು ಅವರು ದೂರಿದ್ದರು.

ಸೆಬಿ ಮುಖ್ಯಸ್ಥೆ ರಾಜೀನಾಮೆಗೆ ಆಗ್ರಹಿಸಿ ಸೆಬಿ ಸಿಬ್ಬಂದಿಯಿಂದಲೇ ಪ್ರತಿಭಟನೆ

ಅದಾನಿ ಗ್ರೂಪ್‌ನಲ್ಲಿ ಬೇನಾಮಿ ಹೂಡಿಕೆ ಮಾಡಿದ ಆರೋಪ ಎದುರಿಸುತ್ತಿರುವ ಷೇರುಪೇಟೆ ನಿಯಂತ್ರಕ ಸೆಬಿ ಮುಖ್ಯಸ್ಥೆ ಮಾಧವಿ ಬುಚ್‌ ಅವರ ವಿರುದ್ಧ ಸೆಬಿ ನೌಕರರೇ ತಿರುಗಿಬಿದ್ದಿದ್ದಾರೆ. ಮಾಧವಿ ರಾಜೀನಾಮೆಗೆ ಆಗ್ರಹಿಸಿ ಸೆಬಿ ಕಚೇರಿ ಹೊರಗೆ ನಿನ್ನೆ ಉದ್ಯೋಗಿಗಳು ಪ್ರತಿಭಟನೆ ನಡೆಸಿದರು. ಅದಾನಿ ಗ್ರೂಪ್‌ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸಿಬ್ಬಂದಿಯನ್ನು ಬಾಹ್ಯ ಶಕ್ತಿಗಳಿಂದ ದಾರಿತಪ್ಪಿಸಲಾಗುತ್ತಿದೆ ಎಂದು ಇತ್ತೀಚೆಗೆ ಸೆಬಿ ಸಮರ್ಥನೆ ನೀಡಿತ್ತು. ಇದರಿಂದ ಅಸಮಾಧಾನಗೊಂಡ ನೌಕರರು ಕಚೇರಿಯ ಹೊರಗೆ ಮೌನ ಪ್ರತಿಭಟನೆ ನಡೆಸಿದರು.

3 ಸಂಸ್ಥೆಗಳಿಂದ ಏಕಕಾಲಕ್ಕೆ ಸಂಬಳ
ಈ ಮಧ್ಯೆ ಹಿಂಡನ್‌ಬರ್ಗ್‌ ವರದಿಯ ಪ್ರಕಾರ ಅಕ್ರಮದ ಆರೋಪ ಹೊತ್ತು ವಿವಾದಕ್ಕೆ ಒಳಗಾಗಿದ್ದ ಸೆಬಿ ಅಧ್ಯಕ್ಷೆ ಮಾಧವಿ ಬುಚ್‌ ವಿರುದ್ಧ ಕಾಂಗ್ರೆಸ್‌ ಹೊಸ ಆರೋಪ ಹೊರಿಸಿದೆ. ಮಾಧವಿ ಅವರು 3 ಸಂಸ್ಥೆಗಳಿಂದ ಏಕಕಾಲಕ್ಕೆ ಸಂಬಳ ಪಡೆಯುತ್ತಿದ್ದಾರೆ. ಇದು ಹಿತಾಸಕ್ತಿಯ ವಿರುದ್ಧವಾಗಿದೆ ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಹಾಗೂ ವಕ್ತಾರ ಪವನ್‌ ಖೇರಾ ಆರೋಪಿಸಿದ್ದಾರೆ.

ಮತ್ತೆ ಕೋಲಾಹಲ ಸೃಷ್ಟಿಸಿದ ಹಿಂಡನ್‌ಬರ್ಗ್ ವರದಿ, ಸ್ಪಷ್ಟನೆ ನೀಡಿದ ಸೆಬಿ ಅಧ್ಯಕ್ಷೆ!

ಕಳೆದ ಸೋಮವಾರ ಈ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್‌ ಹಾಗೂ ಖೇರಾ, ಮಾಧವಿ 2017ರಲ್ಲಿ ಸೆಬಿಯಲ್ಲಿ ಸದಸ್ಯೆಯಾಗಿ ಸೇರಿಕೊಂಡಿದ್ದರು. 2022ರಲ್ಲಿ ಅಧ್ಯಕ್ಷೆ ಆಗಿದ್ದರು. 2017ರಲ್ಲಿ ಸೆಬಿ ಸೇರಿದ ಬಳಿಕ ಐಸಿಐಸಿಐ ಬ್ಯಾಂಕ್‌ ಹಾಗೂ ಐಸಿಐಸಿಐ ಪ್ರುಡೆನ್ಷಿಯಲ್‌ನಲ್ಲೂ ಹುದ್ದೆ ಹೊಂದಿದ್ದಾರೆ . 2017ರಿಂದ 24ರವರೆಗೆ ಸೆಬಿಯ ವೇತನವಲ್ಲದೆ ಐಸಿಐಸಿಐನ 2 ಕಂಪನಿಗಳಿಂದ 16.80 ಕೋಟಿ ರು. ವೇತನ ಪಡೆದಿದ್ದಾರೆ. ಹೀಗೆ 3 ಸಂಸ್ಥೆಗಳಿಂದ ಸಂಬಳ ಪಡೆಯುವುದು ಹಿತಾಸಕ್ತಿಗೆ ಪೂರಕವಲ್ಲ ಎಂದು ಆರೋಪಿಸಿದರು.

ಅಲ್ಲದೆ, ಮಾಧವಿ ಅವರನ್ನು ನೇಮಿಸಿದ ನೇಮಕಾತಿ ಸಮಿತಿಯ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ಹೀಗಾಗಿ ಸೆಬಿ ಅಧ್ಯಕ್ಷೆ ಆದ ಬಳಿಕವೂ ಇನ್ನೊಂದು ಕಂಪನಿಯಿಂದ ಕೋಟಿಗಟ್ಟಲೆ ಸಂಬಳ ಪಡೆದ ಮಾಧವಿ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಹಿಂಡನ್‌ಬರ್ಗ್‌ ವರದಿಯಲ್ಲಿ ಮಾಧವಿ ಅವರು ಅದಾನಿ ಕಂಪನಿ ಜತೆ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗ ಕೂಡ ಕಾಂಗ್ರೆಸ್ ಪಕ್ಷ ಅವರ ರಾಜೀನಾಮೆಗೆ ಒತ್ತಾಯಿಸಿತ್ತು. ಆದರೆ ಮಾಧವಿ ಈ ಆಗ್ರಹ ತಳ್ಳಿಹಾಕಿದ್ದರು.

Latest Videos
Follow Us:
Download App:
  • android
  • ios