ಮುಂದಿನ ಕೇಂದ್ರ ಬಜೆಟ್ ಲೇಖಾನುದಾನ ಮಾತ್ರ; ಅದ್ಭುತ ಘೋಷಣೆಗಳಿಗೆ ಜುಲೈವರೆಗೆ ಕಾಯಬೇಕು: ನಿರ್ಮಲಾ ಸೀತಾರಾಮನ್
ಲೇಖಾನುದಾನದ ಸಮಯದಲ್ಲಿ ಯಾವುದೇ ಅದ್ಭುತ ಘೋಷಣೆಗಳು ಇರುವುದಿಲ್ಲ. ಆದ್ದರಿಂದ ಹೊಸ ಸರ್ಕಾರವು ಬರುವವರೆಗೆ ಮತ್ತು ಜುಲೈ 2024 ರಲ್ಲಿ ಮುಂದಿನ ಪೂರ್ಣ ಬಜೆಟ್ ಅನ್ನು ಮಂಡಿಸುವವರೆಗೆ ನೀವು ಕಾಯಬೇಕಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿ (ಡಿಸೆಂಬರ್ 8, 2023): ಮುಂದಿನ ವರ್ಷ ಫೆಬ್ರವರಿ 1ರಂದು ಮಂಡಿಸಲಾಗುವ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇರುವುದಿಲ್ಲ, ಪ್ರಮುಖವಾಗಿ ಅದ್ಭುತ ಘೋಷಣೆಗಳಿರುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ಸಿಐಐ ಜಾಗತಿಕ ಆರ್ಥಿಕ ನೀತಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ಫೆಬ್ರವರಿ 1, 2024ರಂದು ಬಜೆಟ್ ಮಂಡಿಸಲಾಗುತ್ತದೆ. ಆದರೆ ಮುಂದಿನ ವರ್ಷ ಮೇನಲ್ಲಿ ಚುನಾವಣೆ ಇರುವುದರಿಂದ ಯಾವುದೇ ಹೊಸ ಘೋಷಣೆಗಳನ್ನು ಮಾಡದೇ ಕೇವಲ ಲೇಖಾನುದಾನಕ್ಕಷ್ಟೇ ಅನುಮೋದನೆ ಪಡೆಯಲಾಗುವುದು. ಇದು ಮಧ್ಯಂತರ ಆಯವ್ಯಯವಾಗಿದ್ದು, ಜುಲೈನಲ್ಲಿ ವಾರ್ಷಿಕ ಆಯವ್ಯಯ ಮಂಡಿಸಲಾಗುವುದು’ ಎಂದು ತಿಳಿಸಿದರು.
ಇದನ್ನು ಓದಿ: ರಾಜ್ಯಕ್ಕೆ ಬರಬೇಕಾದ ಕೇಂದ್ರದ ಹಣದಲ್ಲಿ 40000 ಕೋಟಿ ಇಳಿಕೆ
ಇನ್ನು, ಲೇಖಾನುದಾನದ ಸಮಯದಲ್ಲಿ ಯಾವುದೇ ಅದ್ಭುತ ಘೋಷಣೆಗಳು ಇರುವುದಿಲ್ಲ. ಆದ್ದರಿಂದ ಹೊಸ ಸರ್ಕಾರವು ಬರುವವರೆಗೆ ಮತ್ತು ಜುಲೈ 2024 ರಲ್ಲಿ ಮುಂದಿನ ಪೂರ್ಣ ಬಜೆಟ್ ಅನ್ನು ಮಂಡಿಸುವವರೆಗೆ ನೀವು ಕಾಯಬೇಕಾಗಿದೆ ಎಂದೂ ಕೇಂದ್ರ ಸಚಿವೆ ಹೇಳಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮೇ 31, 2019 ರಂದು ಹಣಕಾಸು ಸಚಿವರಾದರು. ಭಾರತದ ಮೊದಲ ಪೂರ್ಣ ಸಮಯದ ಮಹಿಳಾ ಹಣಕಾಸು ಸಚಿವರಾಗಿದ್ದು, ಜುಲೈ 5, 2019 ರಂದು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದರು.
ಮಧ್ಯಂತರ ಆಯವ್ಯಯವು ಲೇಖಾನುದಾನವೆಂಬ ಹೆಸರಿನಿಂದಲೂ ಕರೆಯಲ್ಪಟ್ಟಿದ್ದು, ಚುನಾವಣೆಯಂತಹ ತುರ್ತು ಸಂದರ್ಭಗಳಲ್ಲಿ ಕೇವಲ 1 ತ್ರೈಮಾಸಿಕದ ಆಯವ್ಯಯಕ್ಕೆ ಅನುಮೋದನೆ ಪಡೆದು ಹೊಸ ಸರ್ಕಾರ ರಚನೆಯಾದ ನಂತರ ಸಂಪೂರ್ಣ ವರ್ಷದ ಬಜೆಟ್ ಮಂಡಿಸಲಾಗುತ್ತದೆ. ಲೇಖಾನುದಾನ ಪಡೆಯುವುದು ಬ್ರಿಟಿಷರು ಹಾಕಿಕೊಟ್ಟ ಸಂಪ್ರದಾಯ.
ಇದನ್ನು ಓದಿ: ಬಜೆಟ್‌ನ ಎಷ್ಟು ಘೋಷಣೆಗಳು ಜಾರಿಗೆ ಬಂದಿವೆ?: ಸರ್ಕಾರಕ್ಕೆ ಬೊಮ್ಮಾಯಿ ಪ್ರಶ್ನೆ