ನ್ಯೂಯಾರ್ಕ್(ಡಿ.10): ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದೇ ಬಂತು. ಅಮೆರಿಕ ದಿನಬೆಳಗಾದರೆ ಪಾಕಿಸ್ತಾನವನ್ನು ಬಾಯಿಗೆ ಬಂದಂತೆ ಬೈಯುತ್ತಿದೆ.

ಇಷ್ಟು ವರ್ಷ ಭಯೋತ್ಪಾದನೆ ಮಟ್ಟ ಹಾಕುವ ಹೆಸರಲ್ಲಿ ಪಾಕಿಸ್ತಾನಕ್ಕೆ ಕೋಟ್ಯಾಂತರ ಡಾಲರ್ ಹಣವನ್ನು ಬಗೆದು ಬಗೆದು ಕೊಡುತ್ತಿದ್ದ ಅಮೆರಿಕ, ಇದೀಗ ಒಂದು ಡಾಲರ್ ಕೂಡ ನೆರವು ಕೊಡಲ್ಲ ಎಂದು ಬೈದು ಕಳುಹಿಸುತ್ತಿದೆ.

ಭಯೋತ್ಪಾದಕ ದಾಳಿಯ ಮೂಲಕ ಅಮೆರಿಕ ಸೈನಿಕರನ್ನು ಕೊಲ್ಲುವ ತನ್ನ ನೀಚ ಕೃತ್ಯ ಮುಂದುವರಿಸಿರುವ ಪಾಕಿಸ್ತಾನ ತನ್ನ ಕೃತ್ಯದ ಕುರಿತು ಸ್ಪಷ್ಟನೆ ನೀಡುವವರೆಗೂ, ಅಮೆರಿಕ ಆ ದೇಶಕ್ಕೆ ಒಂದೇ ಒಂದು ಡಾಲರ್ ನೆರವನ್ನೂ ನೀಡಬಾರದು ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಒತ್ತಾಯಿಸಿದ್ದಾರೆ.

ಅಮೆರಿಕಕ್ಕೆ ಹಾನಿಯನ್ನುಂಟುಮಾಡುವ ಯಾವ ದೇಶಕ್ಕೂ ಆರ್ಥಿಕ ನೆರವು ನೀಡುವ ಅಗತ್ಯವಿಲ್ಲ ಎಂದು ನಿಕ್ಕಿ ಹ್ಯಾಲೆ ಹೇಳಿದ್ದು, ಭಯೋತ್ಪಾದನೆ ಹೆಸರಲ್ಲಿ ಇಷ್ಟು ದಿನ ನಾವು ಪಾಕಿಸ್ತಾನದಿಂದ ಮೋಸ ಹೋಗಿದ್ದು ಸಾಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿ ನೆಲೆಗೊಂಡ ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಅಲ್ಲಿನ ಸರ್ಕಾರ ಸಾಕಷ್ಟು ಪ್ರಯತ್ನ ನಡೆಸದ ಕಾರಣ ಟ್ರಂಪ್ ಸರ್ಕಾರ ಕಳೆದ ಸೆಪ್ಟೆಂಬರ್ ನಲ್ಲಿ 300 ಮಿಲಿಯನ್ ಯುಎಸ್ ಡಾಲರ್ ಸಹಾಯವನ್ನು ರದ್ದುಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.