ರಿಟೇಲ್ ಹೂಡಿಕೆದಾರರು ಷೇರು ಮಾರುಕಟ್ಟೆಗಳತ್ತ ಮುಖ ಮಾಡುತ್ತಿರುವ ಈ ಸಮಯದಲ್ಲಿ ಜಿಯೋ ಬ್ಲ್ಯಾಕ್‌ರಾಕ್ ಬ್ರೋಕಿಂಗ್ ಉದ್ಯಮಕ್ಕೆ ಪ್ರವೇಶ ಪಡೆದಿದೆ. ಜಿಯೋ ಮತ್ತು ಬ್ಲ್ಯಾಕ್‌ರಾಕ್‌ನ ಈ ಸಂಯೋಜನೆಯು ಜೆರೋಧಾ, ಅಪ್‌ಸ್ಟಾಕ್ಸ್‌ನಂತಹ ಡಿಸ್ಕೌಂಟ್ ಬ್ರೋಕರ್‌ಗಳಿಗೆ ಪೈಪೋಟಿ ನೀಡಲಿದೆಯೇ?
ಬೆಂಗಳೂರು (ಜೂ.30): ದೇಶ ಡಿಜಿಟಲ್ ರೂಪದಲ್ಲಿ ಭಾರೀ ಬೆಳವಣಿಗೆ ಕಾಣುತ್ತಿರುವ ಹೊತ್ತಿನಲ್ಲಿ ರಿಟೇಲ್ ಹೂಡಿಕೆದಾರರು ಷೇರು ಮಾರುಕಟ್ಟೆಗಳತ್ತ ನಿರೀಕ್ಷೆಯಿಟ್ಟು ಮುಖ ಮಾಡಿದ್ದಾರೆ. ಅದರಲ್ಲೂ ಕೋವಿಡ್-19 ನಂತರ ಭಾರತದ ಬ್ರೋಕರೇಷನ್ ಉದ್ಯಮವು ದೊಡ್ಡ ಮಟ್ಟದ ಬೆಳವಣಿಗೆ ಕಂಡಿದೆ.
ಸಾಂಕ್ರಾಮಿಕ ವೈರಸ್ ಆನ್‌ಲೈನ್ ವ್ಯಾಪಾರ ವೇದಿಕೆಗಳತ್ತ ಬದಲಾವಣೆಯನ್ನು ವೇಗಗೊಳಿಸಿತು. ಹೂಡಿಕೆದಾರರು ಮಾರುಕಟ್ಟೆಗಳಿಗೆ ಅತ್ಯಂತ ಸುಲಭವಾಗಿ ಹೂಡಿಕೆ ಮಾಡುವ ಅವಕಾಶವನ್ನು ನೋಡುತ್ತಿದ್ದರು. ಈ ಹೊತ್ತಿನಲ್ಲಿಯೇ ಡಿಸ್ಕೌಂಟ್ ಬ್ರೋಕರ್‌ಗಳ ಕಡಿಮೆ ವೆಚ್ಚದ ಟ್ರೇಡಿಂಗ್ ಭಾರೀ ಜನಪ್ರಿಯವಾಯಿತು. ಜೆರೋಧಾ, ಏಂಜೆಲ್ ಒನ್, ಅಪ್‌ಸ್ಟಾಕ್ಸ್ ಮತ್ತು 5 ಪೈಸಾದಂತಹ ಪ್ರಮುಖ ಡಿಸ್ಕೌಂಟ್ ಬ್ರೋಕರ್‌ಗಳು ಸದ್ಯ ಇದ್ದು, ಈಗ ಈ ಉದ್ಯಮಕ್ಕೆ ಮುಕೇಶ್ ಅಂಬಾನಿ ಕೂಡ ಪ್ರವೇಶ ಪಡೆದಿದ್ದಾರೆ.
ಬ್ರೋಕಿಂಗ್ ವ್ಯವಹಾರ ಆರಂಭಿಸಲು ಜಿಯೋ ಬ್ಲ್ಯಾಕ್‌ರಾಕ್‌ಗೆ ಇತ್ತೀಚೆಗೆ ಸೆಬಿ ಅನುಮೋದನೆ ಸಿಕ್ಕಿದೆ. ಇದನ್ನು ನೇರಾನೇರ ಭಾರತದ ಅತಿದೊಡ್ಡ ಡಿಸ್ಕೌಂಟ್ ಬ್ರೋಕರ್ ಆಗಿರುವ ನಿತಿನ್ ಹಾಗೂ ನಿಖಿಲ್ ಕಾಮತ್ ಅವರ ಜೀರೋಧಾಗೆ ನೀಡಿರುವ ಪೈಪೋಟಿ ಎಂದೇ ಬಿಂಬಿಸಲಾಗುತ್ತಿದೆ.
ಈ ಬಗ್ಗೆ ಬರೆದುಕೊಂಡಿರುವ ಸ್ಟಾಕ್ ಬಗ್ಗೆ ಮಾಹಿತಿ ನೀಡುವ ವ್ಯಕ್ತಿಯಾಗಿರುವ ಅಮರನಾಥ್ ಶಿವಶಂಕರ್ (@Amara_Bengaluru), 'ಜಿಯೋ ಫೈನಾನ್ಷಿಯಲ್ಸ್‌ಗೆ ಅಭಿನಂದನೆಗಳು. ಕೆಲವರು ಇದು ಜೆರೋಧಾ ಮತ್ತು ಅಪ್‌ಸ್ಟಾಕ್ಸ್‌ನ ಮಾರುಕಟ್ಟೆಯನ್ನು ಹಾಳುಮಾಡಬಹುದು ಎಂದು ಊಹಿಸುತ್ತಿದ್ದಾರೆ. ನಾನು ಇತರರ ಪರವಾಗಿ ಮಾತನಾಡಲು ಸಾಧ್ಯವಿಲ್ಲ ಆದರೆ ನಾನು ಜೀರೋಧಾ ಜೊತೆ ಶಾಶ್ವತವಾಗಿ ಉಳಿಯುತ್ತೇನೆ. ನನಗೆ ಜೆರೋಧಾ ಪ್ಲಾಟ್‌ಫಾರ್ಮ್ ಇಷ್ಟ ಅದರೊಂದಿಗೆ ಜೆರೋಧಾ ತಂಡದಲ್ಲಿರುವ ಜನರೊಂದಿಗೆ ಸಹವಾಸ ಮಾಡಲು ನಾನು ಬಯಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಇನ್ನು ಜಿಯೋ ಬ್ಲ್ಯಾಕ್‌ರಾಕ್, ಬ್ರೋಕಿಂಗ್ ಉದ್ಯಮಕ್ಕೆ ಬಂದರೆ ಏನೆಲ್ಲಾ ಬದಲಾವಣೆಗಳು ಆಗಬಹುದು? ಮಾರುಕಟ್ಟೆಯಲ್ಲಿ ಅವರಿಗೆ ಸಹಾಯವಾಗುವಂಥ ಅಂಶಗಳು ಯಾವವು ಅನ್ನೋದರ ವಿವರ ಇಲ್ಲಿದೆ.
ಜಿಯೋ ಬ್ಲ್ಯಾಕ್‌ರಾಕ್ ಬ್ರೋಕಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಸ್ಟಾಕ್ ಬ್ರೋಕರ್ ಮತ್ತು ಕ್ಲಿಯರಿಂಗ್ ಮೆಂಬರ್ ಆಗಿ ಕೆಲಸ ಮಾಡಲು ಸೆಬಿ ಹಸಿರು ನಿಶಾನೆ ತೋರಿಸಿದೆ. ಡಿಸ್ಕೌಂಟ್ ಬ್ರೋಕಿಂಗ್ ಹುಟ್ಟಿದಾಗಿನಿಂದ ಭಾರತದ ಬ್ರೋಕರೇಜ್ ಉದ್ಯಮಕ್ಕೆ ಎದುರಾದ ಅತಿದೊಡ್ಡ ಬೆದರಿಕೆ ಇದು ಎನ್ನಲಾಗಿದೆ. ಅದಕ್ಕೆ ಕಾರಣೂ ಇದೆ.
ಜಿಯೋಗಿರುವ ಪವರ್ ಕಾಂಬೋ: ಜಿಯೋ ಈಗಾಗೇ ದೇಶದಲ್ಲಿ ಅಗ್ಗದ ದರದಲ್ಲಿ ಡೇಟಾ ನೀಡುವ ಮೂಲಕ ದೊಡ್ಡ ಟೆಲಿಕಾಂ ಆಪರೇಟರ್ ಆಗಿದ್ದು, ಜನರ ನಂಬಿಕೆಯನ್ನೂ ಗಳಿಸಿಕೊಂಡಿದೆ. ಇನ್ನೊಂದೆಡೆ ಬ್ಲ್ಯಾಕ್‌ರಾಕ್, ಜಾಗತಿಕ ಆಸ್ತಿ ನಿರ್ವಹಣಾ ದೈತ್ಯ ಕಂಪನಿಯಾಗಿದೆ. ಇವೆರೆಡ ಸಂಯೋಜನೆಯಲ್ಲಿ ಬರಲಿರುವ ಜಿಯೋ ಬ್ಲ್ಯಾಕ್‌ರಾಕ್ ಬ್ರೋಕಿಂಗ್, ವಿಶ್ವ ದರ್ಜೆಯ ಫೈನಾನ್ಶಿಯಲ್ ಉತ್ಪನ್ನವಾಗುವ ಸಾಧ್ಯತೆ ಇದು ಇದು ಸಾಮಾನ್ಯ ಬ್ರೋಕಿಂಗ್ ಲೈಸೆನ್ಸ್ ಆಗಿರುವ ಸಾಧ್ಯತೆಯೂ ಕಡಿಮೆ ಎನ್ನಲಾಗಿದೆ.
ಟೆಲಿಕಾಂನಲ್ಲಿ ಮಾಡಿದಂತೆ ಈಗಾಗಲೇ ಇರುವ ಮಾರುಕಟ್ಟೆ ಬೆಲೆಯಲ್ಲಿ ಕಲಕುವುದು ಜಿಯೋ ಉದ್ದೇಶವಾಗಿರಬಹುದು. ಅದರೊಂದಿಗೆ ದೊಡ್ಡ ಮಟ್ಟದಲ್ಲಿ ಹೂಡಿಕೆದಾರರನ್ನು ಸೆಳೆಯುವುದು, ಜೀರೋ ಅಥವಾ ಅದರ ಸನಿಹದ ಬ್ರೋಕರೇಜ್ ರೇಟ್ ನೀಡಿ ಲಕ್ಷಾಂತರ ಹೂಡಿಕೆದಾರರನ್ನು ಒಮ್ಮೆಗೆ ಸೆಲೆಯುವ ಗುರಿಯೂ ತಂಡಕ್ಕಿದೆ. ಅದಲ್ಲದೆ, ದೇಶದಲ್ಲಿ ಜಿಯೋ ಈಗಾಗಲೇ 450 ಮಿಲಿಯನ್‌ಗಿಂತ ಹೆಚ್ಚು ಮೊಬೈಲ್ ಗ್ರಾಹಕರನ್ನು ಹೊಂದಿದೆ. ಇದರಲ್ಲಿ ಶೇ. 5 ರಷ್ಟು ಮಂದಿ ಟ್ರೇಡಿಂಗ್ ಅಕೌಂಟ್ ತೆರೆದರೂ 20 ಮಿಲಿಯನ್ ಆಗುತ್ತದೆ.
ಜಿಯೋ ಬ್ಲ್ಯಾಕ್‌ರಾಕ್ ಬ್ರೋಕಿಂಗ್ ಆಗಮನದಿಂದಾಗಿ ಜೀರೋಧಾ, ಅಪ್‌ಸ್ಟಾಕ್, ಏಂಜೆಲ್ ಒನ್, ಐಸಿಐಸಿಐ ಡೈರೆಕ್ಟ್, ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ಗೆ ಸಮಸ್ಯೆ ಎದುರಾಗಬಹುದು. ಹಲವು ವಿಧಧ ಟ್ರೇಡಿಂಗ್‌ನಲ್ಲಿ ಮಾರ್ಜಿನ್‌ಗಳು ಕಡಿಮೆ ಆಗಬಹುದು. ಪ್ರೈಸ್ ವಾರ್ ಆರಂಭವಾಗುವ ಸಾಧ್ಯತೆ ಇದೆ.
ಮುಖೇಶ್ ಅಂಬಾನಿ ತಮ್ಮ ಡೇಟಾ ಸಾಮ್ರಾಜ್ಯವನ್ನು ನೇರವಾಗಿ ದಲಾಲ್ ಸ್ಟ್ರೀಟ್‌ಗೆ ಕೊಂಡೊಯ್ಯುವ ತೀರ್ಮಾನ ಮಾಡಿದ್ದು, ಭಾರತದ ಬ್ರೋಕಿಂಗ್ ಕ್ಷೇತ್ರವು ಇದುವರೆಗಿನ ಅತಿದೊಡ್ಡ ಬದಲಾವಣೆಯನ್ನು ಎದುರಿಸಲು ಸಜ್ಜಾಗಿದೆ.
