Karnataka Budget 2022-23: ಸಿಎಂ ಚೊಚ್ಚಲ ಬಜೆಟ್ ಬಗ್ಗೆ ಹಲವು ನಿರೀಕ್ಷೆ
* ಜನಪ್ರಿಯ ಬಜೆಟ್ ಮಂಡಿಸಬೇಕಾದ ಒತ್ತಡದಲ್ಲಿ ಸಿಎಂ
* 7ನೇ ವೇತನ ಆಯೋಗ, ವಿವಿಧ ವರ್ಗ ಸೆಳೆಯಲು ಯೋಜನೆ ಸಂಭವ
* ಮತ್ತಷ್ಟು ಸಾಲ ಮಾಡುವ ಅನಿವಾರ್ಯತೆ
ಬೆಂಗಳೂರು(ಮಾ.02): ದೊಡ್ಡ ಪ್ರಮಾಣದ ಸಾಲದ ಹೊರೆ, ಕೇಂದ್ರದಿಂದ ಬರಬೇಕಾದ ಸಹಾಯ ಧನದಲ್ಲಿ ಖೋತಾ, ಮತ್ತೊಂದು ಕಡೆ ಮುಂದಿನ ವರ್ಷ ಎದುರಾಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಮನ ಗೆಲ್ಲಲು ಜನಪ್ರಿಯ ಕಾರ್ಯಕ್ರಮಗಳಿರುವ ಬಜೆಟ್(Budget) ಮಂಡಿಸಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಇದ್ದಾರೆ.
ರಾಜ್ಯದಲ್ಲಿ(Karnataka) ಆರ್ಥಿಕ ಚಟುವಟಿಕೆಗಳು ಬಹುತೇಕ ಸಾಮಾನ್ಯ ಸ್ಥಿತಿಗೆ ಬಂದಿವೆ. ತೆರಿಗೆ ಸಂಗ್ರಹ ಸಹ ಕೂಡ ನಿಧಾನವಾಗಿ ಏರಿಕೆಯಾಗುತ್ತಿದೆ. ಆದರೆ ಕೋವಿಡ್(Covid-19) ಕಾರಣದಿಂದ ಜಾರಿಗೆ ತಂದ ಲಾಕ್‌ಡೌನ್, ನಿರ್ಬಂಧಗಳು ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ಹಾನಿ ಮಾಡಿವೆ. ಹೀಗಾಗಿ ಸಹಜವಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಈ ಹಿಂದಿನ ಬಜೆಟ್‌ಗಳಲ್ಲಿ ಘೋಷಿಸಿದ ಅನೇಕ ಯೋಜನೆ, ಕಾರ್ಯಕ್ರಮಗಳಿಗೆ ಈಗ ಹಣ ಬಿಡುಗಡೆ ಮಾಡುವಂತಹ ಪರಿಸ್ಥಿತಿ ಇದೆ.
Karnataka Budget 2022-23: ವನ್ಯಜೀವಿ ಸಂಪತ್ತಿನ ರಕ್ಷಣೆಗೆ ಬೇಕು ಒತ್ತು
ಇಂತಹ ಸ್ಥಿತಿ ನಡುವೆ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಲಿರುವ ಆಯವ್ಯಯದಲ್ಲಿ ಪ್ರಮುಖವಾಗಿ ನೀರಾವರಿ, ಕೃಷಿ ಹಾಗೂ ಕೃಷಿಗೆ ಪೂರಕವಾದ ವಲಯ, ಶಿಕ್ಷಣ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕಾರ್ಮಿಕ ಇಲಾಖೆಗೆ ಹೆಚ್ಚಿನ ಹಣ ಒದಗಿಸುವ ಜೊತೆಗೆ ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ. ಆ ಮೂಲಕ ರೈತರು, ಪರಿಶಿಷ್ಟರು, ಹಿಂದುಳಿದ ವರ್ಗ, ಮಹಿಳೆಯರು, ಕಾರ್ಮಿಕರನ್ನು ಸೆಳೆಯುವ ಉದ್ದೇಶವನ್ನು ಹೊಂದಿದ್ದಾರೆ.
ಬಿಜೆಪಿ(BJP) ಬಲಿಷ್ಠವಾಗಿರುವ ಜಿಲ್ಲೆಗಳಿಗೆ ಹೊಸ ಯೋಜನೆ, ವಿವಿಧ ಸಮುದಾಯಗಳ ಒಲವು ಗಳಿಸಲು ಮಠ-ಮಾನ್ಯಗಳಿಗೆ ಹೆಚ್ಚಿನ ನೆರವು, ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ, ಸರ್ಕಾರಿ ನೌಕರರ ಮೇಲೆ ಕಣ್ಣಿಟ್ಟು 7ನೇ ವೇತನ ಆಯೋಗ ರಚನೆ ಘೋಷಣೆ, ಭ್ರಷ್ಟಾಚಾರ, ಸರ್ಕಾರಿ ಕೆಲಸದಲ್ಲಿ ವಿಳಂಬ ತಪ್ಪಿಸಲು ತಂತ್ರಜ್ಞಾನ ಬಳಸುವ ವ್ಯವಸ್ಥೆ ಜಾರಿಗೆ ತರುವ ಸಂಭವವಿದೆ.
Karnataka Budget: ಎಸ್ಸಿ, ಎಸ್ಟಿಗೆ ಸೂಕ್ತ ಅನುದಾನ ಕೊಡದಿದ್ದರೆ ಹೋರಾಟ: ಸಿದ್ದು
ಉಳಿದಂತೆ ಕೇಂದ್ರ ಸರ್ಕಾರ(Central Government) ಇತ್ತೀಚೆಗೆ ಘೋಷಿಸಿದ ‘ಗತಿ ಶಕ್ತಿ’ ಕಾರ್ಯಕ್ರಮದ ಅಡಿ ರಾಜ್ಯಕ್ಕೆ ಸುಮಾರು 9000 ಕೋಟಿ ರು. ನಿಧಿ ಬರುವ ಸಂಭವವಿದೆ. ಈ ಮೊತ್ತವನ್ನು ಬೆಂಗಳೂರಿನ ಮೂಲಭೂತ ಸೌಕರ್ಯಗಳಿಗೆ ಬಳಸಿಕೊಂಡು ಪ್ರತಿ ವರ್ಷ ಬೆಂಗಳೂರಿಗೆ(Bengaluru) ವೆಚ್ಚ ಮಾಡುತ್ತಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ವೆಚ್ಚ ಮಾಡುವ ಸಾಧ್ಯತೆ ಇದೆ.
ಮತ್ತಷ್ಟು ಸಾಲ ಮಾಡುವ ಅನಿವಾರ್ಯತೆ:
ಕಳೆದ ಆರ್ಥಿಕ ವರ್ಷದ ಆಯವ್ಯಯದಲ್ಲಿ ವೆಚ್ಚದ ಒಟ್ಟು ಮೊತ್ತ 2.47 ಲಕ್ಷ ಕೋಟಿ ರು. ಇತ್ತು. ಸಾಮಾನ್ಯವಾಗಿ ವೆಚ್ಚವನ್ನು ಪ್ರತಿ ವರ್ಷ ಶೇ. 5ರಷ್ಟುಹೆಚ್ಚಿಸುವುದು ವಾಡಿಕೆ. ಆದರೆ ಈ ಬಾರಿ ಶೇ. 10ರವರೆಗೆ ಹೆಚ್ಚಿಸುವ ಲೆಕ್ಕಾಚಾರ ಹಾಕಲಾಗಿದೆ.
ಇದೇ ವೇಳೆ ಹೊಸ ಕಾರ್ಯಕ್ರಮ, ಹೊಸ ಯೋಜನೆ, ಅಭಿವೃದ್ಧಿ ಯೋಜನೆಗೆ ಹಣ ಹೊಂದಿಸಲು ಇನ್ನಷ್ಟುಸಾಲದ ಮೊರೆ ಹೋಗಲೇಬೇಕಾಗಿದೆ. 2021-22 ಸಾಲಿನಲ್ಲಿ ಸಾಲದ ಮೊತ್ತ 4.57 ಲಕ್ಷ ಕೋಟಿ ರು. ತಲುಪಿದೆ. ಸದ್ಯ ಎಲ್ಲ ಬಗೆಯ ತೆರಿಗೆಗಳ ಸಂಗ್ರಹ ನಿರೀಕ್ಷಿತ ಗುರಿ ಇದ್ದರೂ ಹೆಚ್ಚಿನ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಜೊತೆಗೆ ಕೇಂದ್ರದಿಂದ ಬರಬೇಕಾದ ಅನುದಾನ(Grants) ವರ್ಷದಿಂದ ಕಡಿಮೆಯಾಗುತ್ತಿದೆ. ಜಿಎಸ್‌ಟಿ ಪರಿಹಾರ(GST Compensation) ಸುಮಾರು 11 ಸಾವಿರ ಕೋಟಿ ರು. ಕೇಂದ್ರದಿಂದ ಬರಬೇಕಾಗಿದೆ. ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು 7851 ಕೋಟಿ ರು. ಬಾಕಿ ಇದೆ. ಹೀಗಾಗಿ ಅಭಿವೃದ್ಧಿ ಕೆಲಸ, ಹೊಸ ಕಾರ್ಯಕ್ರಮ ಜಾರಿಗೆ ತರಲು ರಾಜ್ಯ ಸರ್ಕಾರ ಈ ವರ್ಷವೂ ವಿವಿಧ ಮೂಲಗಳಿಂದ ಸಾಲ ತರುವಂತಹ ಅನಿವಾರ್ಯ ಪರಿಸ್ಥಿತಿಯಲ್ಲಿದೆ.