MRF Creates History: ಪ್ರತಿ ಷೇರಿಗೆ 1 ಲಕ್ಷ ರೂಪಾಯಿ ಗಡಿ ದಾಟಿದ ಎಂಆರ್‌ಎಫ್!
ಭಾರತದ ಅತ್ಯಂತ ದುಬಾರಿ ಷೇರು ಎನಿಸಿಕೊಂಡಿದ್ದ ಮದ್ರಾಸ್ ರಬ್ಬರ್ ಫ್ಯಾಕ್ಟರಿ (ಎಂಆರ್‌ಎಫ್) ಮಂಗಳವಾರ ದಲಾಲ್ ಸ್ಟ್ರೀಟ್‌ನಲ್ಲಿ ಇತಿಹಾಸ ನಿರ್ಮಿಸಿದೆ. ಜೂನ್ 13 ರಂದು ಎಂಆರ್‌ಎಫ್ ಕಂಪನಿಯ ಷೇರುಗಳು ಕ್ಯಾಶ್ ಮಾರ್ಕೆಟ್‌ನಲ್ಲಿ 1 ಲಕ್ಷ ರೂಪಾಯಿ ಗಡಿ ದಾಟಿದೆ.
ಮುಂಬೈ (ಜೂ.13): ಬಹಳ ದಿನಗಳಿಂದ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಭಾರತದ ಅತ್ಯಂತ ದುಬಾರಿ ಷೇರು ಎಂಆರ್‌ಎಫ್ ಮಂಗಳವಾರ ಅಂಜರೆ ಜೂನ್ 13 ರಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಆ ಮೂಲಕ ಪ್ರತಿ ಷೇರಿಗೆ 1 ಲಕ್ಷ ರೂಪಾಯಿ ಗಡಿ ದಾಟಿದ ಭಾರತದ ಮೊಟ್ಟಮೊದಲ ಷೇರು ಎನಿಸಿಕೊಂಡಿದೆ. ಇದಕ್ಕೂ ಮುನ್ನ ಕಳೆದ ಮೇ ತಿಂಗಳಿನಲ್ಲಿ ಫ್ಯೂಚರ್ಸ್‌ನಲ್ಲಿ ಎಂಆರ್‌ಆಫ್ ಕಂಪನಿಯ ಷೇರುಗಳು 1 ಲಕ್ಷ ರೂಪಾಯಿಯ ಗಡಿ ದಾಟುವ ಮೂಲಕ ಇತಿಹಾಸ ನಿರ್ಮಿಸಿತ್ತು. ಈಗ ನಗದು ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳು 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಕಳೆದ ಒಂದು ವರ್ಷದಲ್ಲಿ ಎಂಆರ್‌ಎಫ್ ಕಂಪನಿಯ ಷೇರುಗಳಲ್ಲಿ ಶೇ.45ರಷ್ಟು ಏರಿಕೆಯಾಗಿದೆ. ಇನ್ನು 2020ರ ಮಾರ್ಚ್‌ನ ಬೆಲೆಗೆ ಹೋಲಿಸಿದರೆ, ಈಗ ಕಂಪನಿಯ ಷೇರುಗಳು ಶೇ 81ರಷ್ಟು ಏರಿಕೆಯಾಗಿದೆ. 2020ರ ಮಾರ್ಚ್‌ನಲ್ಲಿ ಎಂಆರ್‌ಎಫ್ ಕಂಪನಿಯ ಷೇರು 55 ಸಾವಿರಕ್ಕೆ ಕುಸಿದಿತ್ತು. 2022ರ ಡಿಸೆಂಬರ್‌ನಲ್ಲಿ 94,500 ರೂಪಾಯಿಗೆ ಏರಿಕೆ ಆಗಿತ್ತಾದರೂ ಅದೇ ಸ್ಥಾನದಲ್ಲಿ ಉಳಿಯಲು ವಿಫಲವಾಗಿತ್ತು. ಆದರೆ, ನಾಲ್ಕನೇ ತ್ರೈಮಾಸಿಕದ ಫಲಿತಾಂಶವನ್ನು ಮೇ 3 ರಂದು ಘೋಷಣೆ ಮಾಡಿದ ಬಳಿಕ ಎಂಆರ್‌ಎಫ್ ಓಟ ಮತ್ತೆ ಭರ್ಜರಿಯಾಗಿ ಸಾಗಿದೆ.
2023ರ ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟೈರ್ ತಯಾರಕರ ತೆರಿಗೆಯ ನಂತರದ (PAT) 313.53 ಕೋಟಿಗಳ ಏಕೀಕೃತ ಲಾಭವನ್ನು ವರದಿ ಮಾಡಿದೆ. ಇದು ವರ್ಷದಿಂದ ವರ್ಷಕ್ಕೆ (YoY) 86 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ರೂ.168.53 ಕೋಟಿ ನಿವ್ವಳ ಲಾಭ ಗಳಿಸಿತ್ತು. ಕಾರ್ಯಾಚರಣೆಗಳಿಂದ ಕ್ರೋಢೀಕೃತ ಆದಾಯವು 5,841.7 ಕೋಟಿ ರೂಪಾಯಿಗೆ ಏರಿದೆ. ಇದು ವರ್ಷಕ್ಕೆ 10.12 ರಷ್ಟು ಹೆಚ್ಚಾಗಿದೆ. ಕಂಪನಿಯ ಮಂಡಳಿಯು ಪ್ರತಿ ಷೇರಿಗೆ 169 ರೂಪಾಯಿ ಡಿವಿಡೆಂಡ್‌ಅನ್ನು ಘೋಷಣೆ ಮಾಡಿದೆ. ಪ್ರತಿ 10ರ ಮುಖಬೆಲೆಯ ಷೇರಿಗೆ ಶೇ 1690ರಂತೆ ಡಿವಿಡೆಂಡ್ ಪ್ರಕಟಿಸಿದೆ.
ಈ ನಡುವೆ ವಿಶ್ಲೇಷಕರು ಎಂಆರ್‌ಎಫ್ ಕಂಪನಿಯ ಷೇರುಗಳ ಬೆಲೆಯ ಬಗ್ಗೆ ತಮ್ಮ ನಿರ್ಧಾರ ಪ್ರಕಟಿಸಿದ್ದು, ಬ್ಲೂಮ್‌ಬರ್ಗ್‌ನಲ್ಲಿ ಒಬ್ಬರು 'ಖರೀದಿ' ಇಬ್ಬರು 'ಹೋಲ್ಡ್' ಹಾಗೂ ಎಂಟು ಮಂದಿ ವಿಶ್ಲೇಷಕರು 'ಮಾರಾಟ'ದ ತೀರ್ಪು ನೀಡಿದ್ದಾರೆ. ಬಹುತೇಕರ ಪ್ರಕಾರ, ಎಂಆರ್‌ಎಫ್ ಕಂಪನಿಯು ಮುಂದಿನ ಒಂದು ವರ್ಷದಲ್ಲಿ ತನ್ನ ಈಗ ಇರುವ ಬೆಲೆಯಿಂದ ಶೇ. 16ರಷ್ಟು ಕುಸಿದ ಕಂಡು 84,047 ರೂಪಾಯಿಗೆ ತಲುಪಬಹುದು ಎಂದು ಅಂದಾಜಿಸಿದ್ದಾರೆ. ಕಂಪನಿಯ ಅತಿಯಾದ ಮೌಲ್ಯಗಳೇ ಸೆಲ್ ರೇಟಿಂಗ್ ಬರಲು ಕಾರಣವಾಗಿದೆ.
Most Expensive Stock of India: ಪ್ರತಿ ಷೇರಿಗೆ 1 ಲಕ್ಷ ರೂಪಾಯಿ ಗಡಿ ಮುಟ್ಟಿದ ಎಂಆರ್‌ಎಫ್!
ಎಂಆರ್‌ಎಫ್ ಕಂಪನಿಯ ಷೇರುಗಳು 2022ರ ಜೂನ್ 12 ರಂದು 68, 561.25 ರೂಪಾಯಿಯನ್ನು ಹೊಂದಿತ್ತು. ಇದಾಗಿ ಒಂದು ವರ್ಷದಲ್ಲಿ ಕಂಪನಿಯು 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಇನ್ನು ಈ ವರ್ಷವೊಂದರಲ್ಲಿಯೇ ಕಂಪನಿಯ ಷೇರುಗಳಲ್ಲಿ ಶೇ.14ರಷ್ಟು ಏರಿಕೆಯಾಗಿದೆ. 2023ರ ಜನವರಿ 2 ರಂದು ಕಂಪನಿಯ ಷೇರುಗಳ ಬೆಲೆ 88,080.35 ರೂಪಾಯಿ ಆಗಿತ್ತು.
SBI ಲಾಭ ಗಳಿಕೆ ಏರಿಕೆಯಾಗಿದ್ದರೂ ಷೇರು ಬೆಲೆ ಕುಸಿತ, ಕಾರಣವೇನು? ಇಲ್ಲಿದೆ ಮಾಹಿತಿ
ಚೆನ್ನೈ ಮೂಲದ ಮದ್ರಾಸ್ ರಬ್ಬರ್ ಫ್ಯಾಕ್ಟರಿ ಒಟ್ಟಾರೆ 42,41, 143 ಷೇರುಗಳನ್ನು ಕಂಪನಿಯಲ್ಲಿ ಹೊಂದಿದೆ. ಇದರಲ್ಲಿ 30,60,312 ಷೇರುಗಳನ್ನು ಸಾರ್ವಜನಿಕ ಷೇರುದಾರರು ಹೊಂದಿದ್ದರೆ, ಉಳಿದ 11,80,831 ಷೇರುಗಳನ್ನು ಕಂಪನಿಯ ಪ್ರಮೋಟರ್‌ಗಳು ಹೊಂದಿದ್ದಾರೆ.