ಸಿಗ್ನಲ್‌ ರಹಿತ ಸಂಚಾರಿ ಕಾರಿಡಾರ್‌ ನಿರ್ಮಾಣಕ್ಕೆ 150 ಕೋಟಿ, ಪಾದಚಾರಿ ಸುರಂಗ ಮಾರ್ಗ, ಮೇಲ್ಸೇತುವೆ, ಕೆಳಸೇತುವೆಗಳ ನಿರ್ವಹಣೆಗೆ 20 ಕೋಟಿ ಮೀಸಲು. 

ಬೆಂಗಳೂರು(ಮಾ.03): ರಸ್ತೆಗಳ ಅಭಿವೃದ್ಧಿ, ಮೇಲ್ಸೇತುವೆ ಹಾಗೂ ಅಂಡರ್‌ ಪಾಸ್‌ ನಿರ್ಮಾಣ ಸೇರಿದಂತೆ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 6,120 ಕೋಟಿ ನಿಗದಿ ಮಾಡಲಾಗಿದೆ.

ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಸಿಗ್ನಲ್‌ ರಹಿತ ಸಂಚಾರಿ ಕಾರಿಡಾರ್‌ ನಿರ್ಮಾಣಕ್ಕೆ 150 ಕೋಟಿ, ವೆಚ್ಚ ಮಾಡಲು ಉದ್ದೇಶಿಸಿದ್ದು, ಈ ಪೈಕಿ 40 ಕೋಟಿ ಸದಾಶಿವ ನಗರ ಪೊಲೀಸ್‌ ಠಾಣೆ ಜಂಕ್ಷನ್‌, ಮೇಖ್ರಿ ವೃತ್ತ ಜಯಮಹಲ್‌ ರಸ್ತೆಯಲ್ಲಿ 65 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಸೇರಿದಂತೆ ಒಟ್ಟು 5 ಮೇಲ್ಸೇತುವೆ ಹಾಗೂ ಒಂದು ಅಂಡರ್‌ ಪಾಸ್‌ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪಾದಚಾರಿ ಸುರಂಗ ಮಾರ್ಗ ಸೇರಿದಂತೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ವಹಣೆಗೆ 20 ಕೋಟಿ ಮೀಸಲಿರಿಸಲಾಗಿದೆ.

ಹೊಸ ಯೋಜನೆಗಳಿಲ್ಲದೇ ಬಿಬಿಎಂಪಿ 2023-24ನೇ ಸಾಲಿನ ಬಜೆಟ್‌ ಮಂಡನೆ: 11,157 ಕೋಟಿ ರೂ. ಗಾತ್ರ

ಜಂಕ್ಷನ್‌ಗಳಲ್ಲಿ ನಿಧಾನಗತಿಯ ಸಂಚಾರ ತೊಂದರೆಯನ್ನು ನಿವಾರಿಸಲು ಸಿಗ್ನಲ್‌ ರಹಿತ ಸಂಚಾರಿ ಕಾರಿಡಾರ್‌ಗಳನ್ನು ನಿರ್ಮಿಸಲು ವರ್ಷವೇ ಮೇಲ್ಸೇತುವೆ, ಕೆಳ ಸೇತುವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಯಲಹಂಕ ರೈತ ಸಂತೆ ರಸ್ತೆಯ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೆಚ್ಚುವರಿಯಾಗಿ ಕೆಳಸೇತುವೆ ಮಾರ್ಗಗಳನ್ನು ರಚಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಠೇವಣಿಗೆ .25 ಕೋಟಿ ನೀಡಲು ನಿರ್ಧರಿಸಲಾಗಿದೆ. ಬೆಂಗಳೂರಿನ 75 ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ ಹಾಗೂ 60 ಅಡಿ ಅಥವಾ ಅದಕ್ಕೂ ಕಡಿಮೆ ಇರುವ ಸಂಚಾರ ಸಂಚಾರ ದಟ್ಟಣೆಯ ರಸ್ತೆಗಳ ‘ಬಾಟಲ್‌ ನೆಕ್‌’ ಪರಿಸ್ಥಿತಿ ನಿವಾರಣೆಗೆ .150 ಕೋಟಿ ಮೀಸಲಿಟ್ಟು ರಸ್ತೆ ಅಗಲೀಕರಣ ಹಾಗೂ ರಸ್ತೆ ಅಗಲದ ಸಮತೋಲನ ಕಾಪಾಡಿಕೊಳ್ಳಲು ನಿರ್ಧರಿಸಲಾಗಿದೆ.

ರಾಜ್ಯ ಸರ್ಕಾರ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದೆ. ಅದಕ್ಕೆ ಬಿಬಿಎಂಪಿಯೂ ಕೈಜೋಡಿಸುವ ಕೆಲಸ ಮಾಡಬೇಕಾಗಿತ್ತು. ಆದರೆ, ಬಿಬಿಎಂಪಿ ಹೊಸದಾಗಿ ಯಾವುದೇ ಮೂಲಸೌಕರ್ಯ ಯೋಜನೆ ಕೈಗೊಂಡಿಲ್ಲ ಅಂತ ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ರಾಮಚಂದ್ರ ಲಹೋಟಿ ತಿಳಿಸಿದ್ದಾರೆ.