ಜ್ಯೂರಿಚ್‌/ನವದೆಹಲಿ [ಜೂ.28] : 2018ನೇ ಸಾಲಿನಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಕಂಪನಿಗಳು ಸ್ವಿಸ್‌ ಬ್ಯಾಂಕ್‌ಗಳಲ್ಲಿ 6757 ಕೋಟಿ ರು. ಇಟ್ಟಿದ್ದವು ಎಂದು ಸ್ವಿಜರ್ಲೆಂಡ್‌ನ ರಾಷ್ಟ್ರೀಯ ಬ್ಯಾಂಕ್‌ ಗುರುವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಹಾಗೆಂದು ಇದೆಲ್ಲಾ ಕಪ್ಪುಹಣ ಎಂದು ಅರ್ಥವಲ್ಲ, ಸ್ವಿಜರ್ಲೆಂಡ್‌ನಲ್ಲಿ ಇರುವ ಬ್ಯಾಂಕ್‌ಗಳಲ್ಲಿ ಮತ್ತು ಭಾರತದಲ್ಲಿ ಇರುವ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳಲ್ಲಿ ಇಡಲಾಗಿರುವ ಒಟ್ಟು ಹಣ ಎಂದಷ್ಟೇ ಅರ್ಥ.

2017ರಲ್ಲಿ ಸ್ವಿಸ್‌ ಬ್ಯಾಂಕ್‌ಗಳಲ್ಲಿ ಭಾರತೀಯರು 7000 ಕೋಟಿ ರು. ಇಟ್ಟಿದ್ದರು. ಅದಕ್ಕೆ ಹೋಲಿಸಿದರೆ ಈ ವರ್ಷ ಸ್ವಲ್ಪ ಇಳಿಕೆಯಾಗಿದೆ. ಜೊತೆಗೆ 2018ರ ಪ್ರಮಾಣವು, ಕಳೆದ 2 ದಶಕಗಳಲ್ಲೇ ದಾಖಲಾಗಿರುವ 2ನೇ ಕಡಿಮೆ ಮೊತ್ತವಾಗಿದೆ. 2016ರಲ್ಲಿ 4800 ಕೋಟಿ ರು. ಪತ್ತೆಯಾಗಿದ್ದೇ ಇದುವರೆಗೆ ಅತ್ಯಂತ ಕಡಿಮೆ ಮೊತ್ತವಾಗಿದೆ. 2006ರಲ್ಲಿ 23000 ಕೋಟಿ ರು. ಪತ್ತೆಯಾಗಿದ್ದು ಅತ್ಯಂತ ಗರಿಷ್ಠ ಮೊತ್ತವಾಗಿತ್ತು.

ಆದರೆ ಭಾರತೀಯರು ವಿದೇಶಗಳಲ್ಲಿ ಹೊಂದಿರುವ ಕಂಪನಿಗಳ ಮೂಲಕ ಅಥವಾ ಬೇರೆ ಮೂಲಗಳ ಮೂಲಕ ಇಟ್ಟಿರುವ ಹಣ ಇದರಲ್ಲಿ ಸೇರಿಲ್ಲ ಎಂದು ವರದಿ ಹೇಳಿದೆ.

ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಇಟ್ಟರೆ ತಕ್ಷಣವೇ ಅದರ ಮಾಹಿತಿಯನ್ನು ಪಡೆಯುವ ಕುರಿತು ಒಪ್ಪಂದ ಮಾಡಿಕೊಂಡ ಬಳಿಕ ಆ ಬ್ಯಾಂಕ್‌ಗಳಲ್ಲಿ ಭಾರತೀಯರು ಹಣ ಇಡುವುದು ಕಡಿಮೆಯಾಗಿದೆ.

ಇದೇ ವೇಳೆ ಸ್ವಿಸ್‌ ಬ್ಯಾಂಕ್‌ಗಳಲ್ಲಿ ವಿವಿಧ ದೇಶಗಳ ನಾಗರಿಕರು 99 ಲಕ್ಷ ಕೋಟಿ ರು. ಹಣ ಇಟ್ಟಿದ್ದಾರೆ ಎಂದೂ ವರದಿ ತಿಳಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.4ರಷ್ಟುಕಡಿಮೆ ಎಂದು ವರದಿ ಹೇಳಿದೆ.