ನವದೆಹಲಿ(ಫೆ.04): ಜಿಎಸ್‌ಟಿ ಅಡಿಯಲ್ಲಿ ಲಾಟರಿ ಕೊಡುಗೆಗಳನ್ನು 10 ಲಕ್ಷ ರೂ.ದಿಂದ 1 ಕೋಟಿ ರೂ.ಗಳವರೆಗೆ ಏರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ತಾವು ಖರೀದಿಸಿದ ವಸ್ತುಗಳ ಬಿಲ್ ಪಡೆಯುವಂತೆ ಗ್ರಾಹಕರನ್ನು ಉತ್ತೇಜಿಸುವುದು ಕೇಂದ್ರದ ಉದ್ದೇಶವಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಡಿ ಗ್ರಾಹಕರು ಖರೀದಿಸಿದ ವಸ್ತುಗಳ ಪ್ರತಿ ಬಿಲ್ ಕೂಡ ಲಾಟರಿ ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ. ಇದು ತೆರಿಗೆ ಪಾವತಿಸಲು ಅವರಿಗೆ ಉತ್ತೇಜನಕಾರಿಯೂ ಹೌದು ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ (ಸಿಬಿಐಸಿ) ಸದಸ್ಯ ಜಾನ್ ಜೋಸೆಫ್ ಹೇಳಿದ್ದಾರೆ. 

ಜಿಎಸ್‌ಟಿ ವಂಚಿಸಿದರೆ ಆಸ್ತಿಗೆ ಕತ್ತರಿ: ಕೇಂದ್ರದ ಹೊಸ ನಿರ್ಧಾರ!

ಸದ್ಯ ಹೊಸ ಲಾಟರಿ ವ್ಯವಸ್ಥೆ ಪರಿಚಯಿಸಲು ಮುಂದಾಗಿರುವ ಕೇಂದ್ರಮ ಜಿಎಸ್‌ಟಿ ಅಡಿಯಲ್ಲಿ ಪ್ರತಿ ಬಿಲ್ ಸಹ  ಲಾಟರಿ ಟಿಕೆಟ್’ನಂತೆ ಇರಲಿದೆ ಎಂದು ಹೇಳಿದೆ. ಗ್ರಾಹಕರ ಈ ಬಿಲ್ ಡ್ರಾಗೆ ಹೋಗಲಿದ್ದು, ಇದಕ್ಕೆ ಬಹುಮಾನವಾಗಿ 1 ಕೋಟಿ ರೂ. ಗೆಲ್ಲುವ ಅವಕಾಶ ಒದಗಿಸಲಾಗುವುದು.  

ಗ್ರಾಹಕರು ಖರೀದಿಸಿದ  ಬಿಲ್’ನ್ನು ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಡ್ರಾ ಸ್ವಯಂಚಾಲಿತವಾಗಿ ನಡೆಯುವುದಲ್ಲದೆ ವಿಜೇತರಿಗೆ ಅದರ ಮಾಹಿತಿ ಕೂಡ ಲಭಿಸಲಿದೆ. ಒಟ್ಟು ನಾಲ್ಕು ಹಂತದ ಜಿಎಸ್‌ಟಿ ಅಡಿಯಲ್ಲಿ ಸರಕು ಮತ್ತು ಸೇವೆಗಳಿಗೆ ಶೇ.5, ಶೇ.12, ಶೇ.18 ಹಾಗೂ ಶೇ.28 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಜಿಎಸ್ಟಿಯಿಂದ ಮಾಸಿಕ 320 ರು. ಉಳಿತಾಯ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಹವರ್ತಿಗಳನ್ನು ಒಳಗೊಂಡ ಜಿಎಸ್‌ಟಿ ಕೌನ್ಸಿಲ್ ಪ್ರಸ್ತಾವಿತ ಲಾಟರಿ ಯೋಜನೆ ಪರಿಶೀಲನೆ ನಡೆಸಲಿದೆ. ಲಾಟರಿಯಲ್ಲಿ ಸೇರಿಸಲಾಗುವ ಬಿಲ್’ಗಳಿಗೆ ಕನಿಷ್ಠ ಮಿತಿಯನ್ನು ಕೌನ್ಸಿಲ್ ನಿರ್ಧರಿಸುತ್ತದೆ. ಲಾಟರಿ ಹಣವನ್ನು ಗ್ರಾಹಕ ಕಲ್ಯಾಣ ನಿಧಿ ಭರಿಸಲಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.