ಎಲಾನ್ ಮಸ್ಕ್ ಅವರು ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸಿದರೂ ಅದಕ್ಕೆ ಸಹಕಾರ ನೀಡುತ್ತೇವೆ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು(ಜೂ.24): ಎಲೆಕ್ಟ್ರಿಕ್ ಕಾರುಗಳ ತಯಾರಿಕಾ ಸಂಸ್ಥೆಯಾದ ಅಮೆರಿಕದ ಟೆಸ್ಲಾ ಕಂಪನಿಯು ದೇಶದಲ್ಲಿ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾದರೆ, ಕರ್ನಾಟಕ ರಾಜ್ಯ ಅದಕ್ಕೆ ಪ್ರಶಸ್ತ ತಾಣವಾಗಿದೆ. ಟೆಸ್ಲಾ ಸಂಸ್ಥೆಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಟ್ವೀಟ್ ಮೂಲಕ ಟೆಸ್ಲಾ ಸಂಸ್ಥೆಯ ಉತ್ಪಾದನಾ ಘಟಕವನ್ನು ರಾಜ್ಯದಲ್ಲಿ ತೆರೆಯಲು ಆಹ್ವಾನಿಸಿರುವ ಎಂ.ಬಿ. ಪಾಟೀಲ್, ಟೆಸ್ಲಾ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ಜತೆಗೆ ಸೌರಫಲಕಗಳು ಸೇರಿದಂತೆ ಮತ್ತಿತರ ಪರ್ಯಾಯ ಇಂಧನ ಉತ್ಪನ್ನಗಳನ್ನು ತಯಾರಿಸುತ್ತದೆ. ಸ್ಪೇಸ್ ಎಕ್ಸ್ ಸಂಸ್ಥೆಯ ಮೂಲಕ ಉಪಗ್ರಹ ಅಂತರ್ಜಾಲ ಸೇವೆ (ಸ್ಟಾರ್ ಲಿಂಕ್) ಒದಗಿಸುತ್ತಿದೆ.
ಟ್ವೀಟರ್ ಸ್ಥಳೀಯ ನಿಯಮ ಪಾಲಿಸಬೇಕು: ಎಲಾನ್ ಮಸ್ಕ್
ಈ ಸಂಸ್ಥೆಯ ಮುಖ್ಯಸ್ಥರಾದ ಎಲಾನ್ ಮಸ್ಕ್ ಅವರು ಕರ್ನಾಟಕದಲ್ಲಿ ಯಾವುದೇ ಉದ್ಯಮ ಸ್ಥಾಪಿಸಿದರೂ ಅದಕ್ಕೆ ಸಹಕಾರ ನೀಡುತ್ತೇವೆ. ಕರ್ನಾಟಕವು ತಂತ್ರಜ್ಞಾನ ಮತ್ತು ತಯಾರಿಕಾ ಕ್ಷೇತ್ರದಲ್ಲಿ 5.0 ಪ್ರಮಾಣೀಕೃತ ಮಟ್ಟ ಅಳವಡಿಸಿಕೊಂಡು ಕೈಗಾರಿಕಾ ಬೆಳವಣಿಗೆ ಸಾಧಿಸುತ್ತಿದೆ. ಹೀಗಾಗಿ ಟೆಸ್ಲಾ ಘಟಕ ಸ್ಥಾಪಿಸಲು ರಾಜ್ಯ ಸೂಕ್ತವಾದ ತಾಣವಾಗಿದೆ ಎಂದಿದ್ದಾರೆ.
