ನವದೆಹಲಿ[ಫೆ.01]: ಬಡವರನ್ನು ಬಡತನದಿಂದ ಮೇಲೆಕ್ಕೆತ್ತುವ ಸಲುವಾಗಿ ಕನಿಷ್ಠ ಆದಾಯ ಖಾತ್ರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ದೇಶದ ಶೇ.25ರಷ್ಟುಬಡವರನ್ನು ಈ ಯೋಜನೆ ವ್ಯಾಪ್ತಿಗೆ ತರಲು ಬರೋಬ್ಬರಿ 7 ಲಕ್ಷ ಕೋಟಿ ರು.ನಷ್ಟುಸಂಪನ್ಮೂಲ ಬೇಕಾಗುತ್ತದೆ ಎಂದು ಆರಂಭಿಕ ಅಂದಾಜುಗಳು ತಿಳಿಸಿವೆ.

ಕೌಶಲ್ಯರಹಿತ ಕೃಷಿ ಕಾರ್ಮಿಕರಿಗೆ ದಿನವೊಂದಕ್ಕೆ 321 ರು. ಕೂಲಿ ನೀಡಬೇಕು ಎಂದು ಕೇಂದ್ರ ಸರ್ಕಾರವೇ ನಿಯಮ ರೂಪಿಸಿದೆ. ಅದೇ ಲೆಕ್ಕ ಹಿಡಿದರೆ ತಿಂಗಳಿಗೆ 9630 ರು. ಆಯಿತು. ಒಂದು ವೇಳೆ ದೇಶದಲ್ಲಿರುವ ಶೇ.18ರಿಂದ ಶೇ.20ರಷ್ಟುಬಡವರಿಗೆ ಮಾಸಿಕ 9630 ರು.ನಂತೆ ಕನಿಷ್ಠ ಆದಾಯ ಖಾತ್ರಿ ಒದಗಿಸಲು ಮುಂದಾದರೆ, ಅದಕ್ಕೆ ಆಗುವ ವೆಚ್ಚ 5 ಲಕ್ಷ ಕೋಟಿ ರು. ಗಡಿ ದಾಟುತ್ತದೆ. ಈ ಕುರಿತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರೇ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದಾರೆ.

ಕನಿಷ್ಠ ಆದಾಯ ಖಾತ್ರಿಗೆ ಸರ್ಕಾರ ಉತ್ಸುಕವಾಗಿದ್ದರೂ, ಅದಕ್ಕೆ ಆಗುವ ವೆಚ್ಚವೇ ಬಹುದೊಡ್ಡ ಅಡ್ಡಿಯಾಗಿದೆ. ಈಗಾಗಲೇ ಆಹಾರ ಹಾಗೂ ರಸಗೊಬ್ಬರದಂತಹ ಸಬ್ಸಿಡಿಗಳನ್ನು ಸರ್ಕಾರ ನೀಡುತ್ತಿದ್ದು, ಅದರ ಜತೆಗೆ ಈ ವೆಚ್ಚವೂ ಸೇರಿಕೊಂಡರೆ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದು ಹೇಳಲಾಗುತ್ತಿದೆ.