ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿದವನಿಗೆ ಜಾಕ್ ಪಾಟ್;ಬರೀ 9 ತಿಂಗಳಲ್ಲಿ17,671 ಕೋಟಿ ಲಾಭ ಗಳಿಸಿದ ರಾಜೀವ್ ಜೈನ್
ಷೇರು ಮಾರುಕಟ್ಟೆಯಲ್ಲಿ ಯಾರ ಅದೃಷ್ಟದ ಬಾಗಿಲು ಯಾವಾಗ ತೆರೆಯುತ್ತದೆ ಎಂಬುದು ತಿಳಿಯೋದಿಲ್ಲ.ಭಾರತೀಯ ಮೂಲದ ಅಮೆರಿಕದ ಹೂಡಿಕೆದಾರರೊಬ್ಬರು ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದು, ಬರೀ 9 ತಿಂಗಳಲ್ಲೇ ದುಪ್ಪಟ್ಟು ಲಾಭ ಗಳಿಸಿದ್ದಾರೆ.
Business Desk: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಸಾಕಷ್ಟು ವಿಷಯಜ್ಞಾನದ ಜೊತೆಗೆ ಯಾವುದರಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬ ಪರಿಜ್ಞಾನವೂ ಅಗತ್ಯ. ಎಲ್ಲ ಹೂಡಿಕೆದಾರರು ಲೆಕ್ಕಾಚಾರ ಮಾಡಿಯೇ ಹಣ ತೊಡಗಿಸುತ್ತಾರೆ. ಆದರೆ, ಕೆಲವರ ಲೆಕ್ಕಾಚಾರ ಮಾತ್ರ ಸರಿಯಾಗುತ್ತದೆ. ಕೆಲವರು ಮಾತ್ರ ಕಡಿಮೆ ಅವಧಿಯಲ್ಲಿ ಷೇರು ಮಾರುಕಟ್ಟೆಯಿಂದ ಭಾರೀ ಲಾಭ ಗಳಿಸುತ್ತಾರೆ. ಅಂಥ ಕೆಲವೇ ಕೆಲವು ವಿರಳ ಹೂಡಿಕೆದಾರರಲ್ಲಿ ರಾಜೀವ್ ಜೈನ್ ಕೂಡ ಒಬ್ಬರು. ಜಿಕ್ಯುಜಿ ಪಾರ್ಟನರ್ ಎಂಬ ಆಸ್ತಿ ನಿರ್ವಹಣಾ ಸಂಸ್ಥೆಯ ಸ್ಥಾಪಕ, ಮುಖ್ಯಸ್ಥ ಹಾಗೂ ಮುಖ್ಯ ಹೂಡಿಕೆ ಅಧಿಕಾರಿಯಾಗಿರುವ ಜೈನ್, ಅದಾನಿ ಗ್ರೂಪ್ ಷೇರುಗಳಲ್ಲಿ ಹೂಡಿಕೆ ಮಾಡಿ ಕಡಿಮೆ ಅವಧಿಯಲ್ಲಿ ಎರಡು ಪಟ್ಟುಗಿಂತಲೂ ಅಧಿಕ ಲಾಭ ಗಳಿಸಿದ್ದಾರೆ. ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿದ ಕೇವಲ 9 ತಿಂಗಳಲ್ಲಿ ಜೈನ್ 17,671 ಕೋಟಿ ರೂ. ಲಾಭ ಗಳಿಸಿದ್ದಾರೆ.
9 ತಿಂಗಳಲ್ಲಿ 17000 ಕೋಟಿ ರೂ. ಗಳಿಕೆ
ಅದಾನಿ ಷೇರುಗಳಲ್ಲಿ ಹೂಡಿಕೆ ಮಾಡಿದ ಒಂದು ವರ್ಷದೊಳಗೆ ಜೈನ್ ಅವರ ಜಿಕ್ಯುಜಿ ಪಾರ್ಟನರ್ ಎರಡು ಪಟ್ಟಿಗಿಂತಲೂ ಹೆಚ್ಚು ಲಾಭ ಗಳಿಸಿದೆ. ಡಿಸೆಂಬರ್ 6ರ ಷೇರುಗಳ ಕ್ಲೋಸಿಂಗ್ ಬೆಲೆಗಳ ಆಧಾರದಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳಲ್ಲಿ ಜಿಕ್ಯುಜಿ ಪಾರ್ಟನರ್ ಪೋರ್ಟ್ ಫೋಲಿಯೋ ಮೌಲ್ಯ 39,331ಕೋಟಿ ರೂ.ಗೆ ಏರಿಕೆಯಾಗಿದೆ. ಇದು 21,660 ಕೋಟಿ ರೂ. ಹೂಡಿಕೆ ಮೇಲೆ ಒಟ್ಟು ಶೇ.82ರಷ್ಟು ರಿಟರ್ನ್ಸ್ ಬಂದಿರೋದನ್ನು ಸಾಬೀತುಪಡಿಸಿದೆ. ಜಿಕ್ಯುಜಿ ಪಾರ್ಟನರ್ 2023ರ ಮಾರ್ಚ್ ಪ್ರಾರಂಭದಲ್ಲಿ ವಿವಿಧ ಅದಾನಿ ಗ್ರೂಪ್ ಸಂಸ್ಥೆಗಳಲ್ಲಿ ಈ ಹೂಡಿಕೆಯನ್ನು ಮೂರು ಕಂತುಗಳಲ್ಲಿ ಮಾಡಿತ್ತು. ರಾಜೀವ್ ಜೈನ್ ಈ ಹೂಡಿಕೆಯಿಂದ ಬರೀ 9 ತಿಂಗಳಲ್ಲಿ 17,000 ಕೋಟಿ ರೂ.ಗಿಂತಲೂ ಅಧಿಕ ಲಾಭ ಗಳಿಸಿದ್ದಾರೆ.
ಒಂದು ವಾರದಲ್ಲಿ 1.83 ಲಕ್ಷ ಕೋಟಿ ಸಂಪತ್ತು ಹೆಚ್ಚಿಸಿಕೊಂಡ ಗೌತಮ್ ಅದಾನಿ: ಶುಕ್ರದೆಸೆ ಅಂದ್ರೆ ಇದಪ್ಪಾ!
ಷೇರು ಮಾರುಕಟ್ಟೆ ಬೂಮ್ ನಿಂದ ಲಾಭ
ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಹಾಗೂ ಎಸ್ ಇಝುಡ್ ಹಾಗೂ ಅದಾನಿ ಪವರ್ ಗಳಲ್ಲಿ ಮಾಡಿದ ಹೂಡಿಕೆಗಳು ಏರಿಕೆಯಾಗಿವೆ. ಇತ್ತೀಚೆಗಿನ ಷೇರು ಮಾರುಕಟ್ಟೆ ಬೂಮ್ ನಿಂದ ಈ ಷೇರುಗಳ ಮೌಲ್ಯ ದುಪ್ಪಟ್ಟಾಗಿದೆ. ಅದಾನಿ ಎಂಟರ್ ಪ್ರೈಸರ್ಸ್ ನಲ್ಲಿ ಜಿಕ್ಯುಜಿ 3,403 ಕೋಟಿ ರೂ. ಹೂಡಿಕೆ ಮಾಡಿದ್ದು, ಇದರ ಮೌಲ್ಯವೀಗ 9,024 ಕೋಟಿ ರೂ. ಆಗಿದೆ. ಇನ್ನು ಅದಾನಿ ಗ್ರೀನ್ ಎನರ್ಜಿಯಲ್ಲಿ ಮಾಡಿದ ಪ್ರಾರಂಭಿಕ ಹೂಡಿಕೆ 4,743 ಕೋಟಿ ರೂ. 8,800 ಕೋಟಿ ರೂ.ಗೆ ಹೆಚ್ಚಳವಾಗಿದೆ. ಇನ್ನು ಅದಾನಿ ಪೋರ್ಟ್ಸ್ ನಲ್ಲಿ ಜಿಕ್ಯುಜಿ ಮಾಡಿದ 4,472 ಕೋಟಿ ರೂ. ಹೂಡಿಕೆ 7,766 ಕೋಟಿ ರೂ.ಗೆ ಏರಿಕೆಯಾಗಿದೆ. ಇನ್ನು ಅದಾನಿ ಪವರ್ ನಲ್ಲಿ ಜಿಕ್ಯುಜಿ ಮಾಡಿದ ಹೂಡಿಕೆ 4,245 ಕೋಟಿ ರೂ.ನಿಂದ 8,718 ಕೋಟಿ ರೂ.ಗೆ ಹೆಚ್ಚಳವಾಗಿದೆ.
ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯ 14.8 ಲಕ್ಷ ಕೋಟಿ
ನವೆಂಬರ್ 24ರಿಂದ ಅದಾನಿ ಗ್ರೂಪ್ ಷೇರುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದರಿಂದ ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯ ಸುಮಾರು 4.5 ಲಕ್ಷ ಕೋಟಿ ರೂ.ನಿಂದ 14.8 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗಿದೆ.
ಯಾರು ಈ ರಾಜೀವ್ ಜೈನ್?
ರಾಜೀವ್ ಜೈನ್ ಭಾರತದಲ್ಲಿ ಜನಿಸಿ ಇಲ್ಲೇ ಶಿಕ್ಷಣ ಪೂರ್ಣಗೊಳಿಸಿದ್ದರು. 1990ರಲ್ಲಿ ಮಿಯಾಮಿ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದರು. 1994ರಲ್ಲಿ ಸ್ವಿಸ್ ಕಂಪನಿ ವೊಂಟೊಬೆಲ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. 2016ರಲ್ಲಿ ಸಂಸ್ಥೆ ಬಿಡುವ ಮುನ್ನ ಸಹ ಸಿಇಒ ಸ್ಥಾನಕ್ಕೇರಿದ್ದರು.
ಒಂದೇ ದಿನದಲ್ಲಿ 54000 ಕೋಟಿ ರೂ. ಆಸ್ತಿ ಮೌಲ್ಯ ಹೆಚ್ಚಿಸಿಕೊಂಡ ಬಿಲಿಯನೇರ್; ಮುಕೇಶ್ ಅಂಬಾನಿ, ರತನ್ ಟಾಟಾ ಅಲ್ಲ!
ಜಿಕ್ಯುಜಿ ಗೋಲ್ಡ್ ಮ್ಯಾನ್ ಸ್ಯಾಚ್ ಜೊತೆಗೆ ಅನೇ ಫಂಡ್ ಗಳನ್ನು ನಿರ್ವಹಣೆ ಮಾಡುತ್ತಿದೆ. ರಾಜೀವ್ ಜೈನ್ 2016ರಲ್ಲಿ ಟಿಮ್ ಕಾರ್ವೆರ್ ಜೊತೆಗೆ ಸೇರಿ ಜಿಕ್ಯುಜಿ ಸ್ಥಾಪಿಸಿದರು. 2021ರ ಅಕ್ಟೋಬರ್ ನಲ್ಲಿ ಇವರು ಆಸ್ಟ್ರೇಲಿಯಾ ಷೇರು ಮಾರುಕಟ್ಟೆಯಲ್ಲಿ ಈ ಸಂಸ್ಥೆಯನ್ನು ಸಾರ್ವಜನಿಕಗೊಳಿಸಿದರು. ಫೋರ್ಬ್ಸ್ ನೀಡಿರುವ ಮಾಹಿತಿ ಪ್ರಕಾರ ರಾಜೀವ್ ಜೈನ್ ಅವರ ನಿವ್ವಳ ಸಂಪತ್ತು 3.2 ಬಿಲಿಯನ್ ಡಾಲರ್.