ಮುಂಬೈ(ಏ.28): ಕೊರೋನಾ 2ನೇ ಅಲೆ ತಡೆಯಲು ದೇಶದ ಹಲವು ರಾಜ್ಯಗಳು ಸೀಮಿತ ಲಾಕ್ಡೌನ್‌ ಸೇರಿ ನಾನಾ ರೀತಿಯ ನಿರ್ಬಂಧ ಕ್ರಮಗಳನ್ನು ಹೇರಿದ ಹೊರತಾಗಿಯೂ, ದೇಶದ ಒಟ್ಟಾರೆ ಆರ್ಥಿಕತೆ ಮೇಲೆ ಭಾರೀ ಹೊಡೆತ ಬೀಳುವ ಸಾಧ್ಯತೆ ಕಡಿಮೆ ಎಂದು ಜಪಾನ್‌ ಮೂಲದ ಹಣಕಾಸು ವಿಶ್ಲೇಷಣಾ ಸಂಸ್ಥೆಯಾದ ನೋಮುರಾ ಹೇಳಿದೆ.

ಏ.25ಕ್ಕೆ ಅನ್ವಯವಾಗುವಂತೆ ಸಂಸ್ಥೆ ಬಿಡುಗಡೆ ಮಾಡಿರುವ ‘ಉದ್ಯಮ ಪುನಾರಂಭ ಸೂಚ್ಯಂಕ’ ವರದಿ ಅನ್ವಯ, ವಿವಿಧ ರಾಜ್ಯಗಳು ಹೇರಿರುವ ನಿರ್ಬಂಧ ಕ್ರಮಗಳಿಂದಾಗಿ ಉದ್ಯಮ ಚಟುವಟಿಕೆಗಳು ಸಾಂಕ್ರಾಮಿಕ ಪೂರ್ವ ಸ್ಥಿತಿಯ ಶೇ.76ಕ್ಕೆ ಇಳಿದಿದೆ. ಸೀಮಿತ ಲಾಕ್ಡೌನ್‌ ಈಗಾಗಲೇ ಸಂಚಾರ ಉದ್ಯಮದ ಮೇಲೆ ಗಮನಾರ್ಹ ಪರಿಣಾಮ ಬೀರಲು ಆರಂಭಿಸಿದೆ. ಮುಂದಿನ ದಿನಗಳಲ್ಲಿ ವಿದ್ಯುತ್‌ ಬೇಡಿಕೆ ಇಳಿಕೆ, ಜಿಎಸ್‌ಟಿ ಇ- ವೇ ಬಿಲ್‌ ಮತ್ತು ರೈಲ್ವೆ ಸರಕು ಸಾಗಣೆ ಕೂಡ ಆರ್ಥಿಕತೆಯ ಮೇಲಿನ ಅಡ್ಡ ಪರಿಣಾಮಗಳನ್ನು ಹೆಚ್ಚಿಸಲಿದೆ ಎಂದು ಹೇಳಿದೆ.

"

ಇದೆಲ್ಲದರ ಹೊರತಾಗಿಯೂ ಮೊದಲನೆಯ ಅಲೆಯ ವೇಳೆ ಆರ್ಥಿಕತೆಗೆ ಬಿದ್ದ ಪರಿಣಾಮಗಳನ್ನು ಹೋಲಿಸಿದರೆ 2ನೇ ಅಲೆಯ ಪರಿಣಾಮಗಳು ಆರ್ಥಿಕತೆ ಮೇಲೆ ಅಷ್ಟೊಂದು ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಇದಕ್ಕೆ ಮುಖ್ಯ ಕಾರಣ, ವಿವಿಧ ವಲಯಗಳಲ್ಲಿನ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿಯೇ ಸಾಮಾನ್ಯ ಚಟುವಟಿಕೆ ಮುಂದುವರೆಸಿದ್ದಾರೆ. ಇದರ ಜೊತೆಗೆ ಕೃಷಿ, ಉತ್ಪಾದನಾ, ಆನ್‌ಲೈನ್‌ ಆಧರಿತ ಸೇವೆಗಳು ಮುಂದುವರೆದಿವೆ. ವರ್ಕ್ ಫ್ರಂ ಹೋಮ್‌ ವ್ಯವಸ್ಥೆ ಕೂಡ ಚಾಲ್ತಿಯಲ್ಲಿದೆ ಎಂದು ತಿಳಿಸಿದೆ.

ಜೊತೆಗೆ ಜೂನ್‌ ತಿಂಗಳ ವೇಳೆಗೆ ಲಸಿಕೆ ಅಭಿಯಾನ ಕೂಡ ತೀವ್ರತೆ ಪಡೆದುಕೊಳ್ಳಲಿದ್ದು, ಪರಿಣಾಮ ಜನರಲ್ಲಿ ಆತ್ಮಸ್ಥೈರ್ಯ ಹೆಚ್ಚಿ ವಿವಿಧ ವಲಯಗಳಲ್ಲಿ ಬೇಡಿಕೆ ಹೆಚ್ಚಲಿದೆ. ಜಾಗತಿಕ ಬೇಡಿಕೆ ಕೂಡ ದೇಶೀ ಆರ್ಥಿಕತೆಗೆ ನೆರವಾಗಲಿದೆ. ಹೀಗಾಗಿ ನಾನಾ ಧನಾತ್ಮಕ ಅಂಶಗಳು ಆರ್ಥಿಕತೆಯ ಮೇಲೆ 2ನೇ ಅಲೆಯ ಪರಿಣಾಮಗಳು ಸೀಮಿತವಾಗಿ ಇರುವಂತೆ ಮಾಡಲಿದೆ. ಜೂನ್‌ ತಿಂಗಳ ಅಂತ್ಯದ ವೇಳೆಗೆ ಆರ್ಥಿಕತೆ ಮತ್ತೆ ಚೇತರಿಕೆ ಹಾದಿ ಹಿಡಿಯಬಹುದು ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ.

ಕಾರಣ ಏನು?

- ವಿವಿಧ ವಲಯಗಳ ಕಾರ್ಮಿಕರ ಕೆಲಸ ಮುಂದುವರಿದಿದೆ

- ಕೃಷಿ, ಉತ್ಪಾದನೆ, ಆನ್‌ಲೈನ್‌ ಆಧರಿತ ಸೇವೆ ನಿಂತಿಲ್ಲ

- ವರ್ಕ್ ಫ್ರಂ ಹೋಂ ಕೂಡ ಅಬಾಧಿತವಾಗಿ ನಡೆಯುತ್ತಿದೆ

- ಜೂನ್‌ ವೇಳೆಗೆ ಲಸಿಕಾ ಅಭಿಯಾನ ತೀವ್ರಗೊಳ್ಳುತ್ತದೆ

- ಜಾಗತಿಕ ಬೇಡಿಕೆ ಕೂಡ ದೇಶಿ ಆರ್ಥಿಕತೆಗೆ ನೆರವಾಗುತ್ತೆ

- ಹೀಗಾಗಿ ಆರ್ಥಿಕತೆ ಮೇಲೆ ಅಷ್ಟೊಂದು ಪರಿಣಾಮವಾಗದು