ಬಹುನಿರೀಕ್ಷಿತ ಭಾರತೀಯ ಜೀವ ವಿಮಾ ನಿಗಮದ ಐಪಿಒ ದಿನಾಂಕ ಕೊನೆಗೂ ನಿಶ್ಚಯವಾಗಿದೆ. ಮೇ 4 ರಂದು ಎಲ್ ಐಸಿ ಐಪಿಒ ಓಪನ್ ಆಗಲಿದ್ದು, ಮೇ 9 ರಂದು ಮುಕ್ತಾಯ ಕಾಣಲಿದೆ. ಎಲ್ ಐಸಿ ಐಪಿಒ ಗಾತ್ರ 21 ಸಾವಿರ ಕೋಟಿ ರೂಪಾಯಿ ಆಗಿರಲಿದ್ದು, ಉದ್ಯೋಗಿಗಳು ಹಾಗೂ ಪಾಲಿಸಿದಾರರ ಅಯ್ಕೆಯನ್ನೂ ಸೇರಿಸಿ ಒಟ್ಟು 30 ಸಾವಿರ ಕೋಟಿ ರೂಪಾಯಿ ಗಾತ್ರದ ಐಪಿಒ ಇದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು (ಏ. 25): ಷೇರುಪೇಟೆ ಹೂಡಿಕೆದಾರರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಭಾರತೀಯ ಜೀವ ವಿಮಾ ನಿಗಮದ (Life Insurance Corporation of India) ಐಪಿಒ ದಿನಾಂಕ ಕೊನೆಗೂ ನಿಶ್ಚಯವಾಗಿದೆ. ಮೇ 4 ರಂದು ಐಪಿಒ (IPO) ಮುಕ್ತವಾಗಲಿದ್ದು, ಮೇ 9 ರಂದು ಕೊನೆಗೊಳ್ಳಲಿದೆ ಎಂದು ತಿಳಿಸಿದೆ. ಹಿಂದಿನ ಡ್ರಾಫ್ಟ್ ಪೇಪರ್‌ಗಳಲ್ಲಿ ಉಲ್ಲೇಖಿಸಿದಂತೆ 5 ಪ್ರತಿಶತದಷ್ಟು ಬದಲು 3.5 ಶೇಕಡಾ ಪಾಲನ್ನು ಮಾರಾಟ ಮಾಡುವ ನವೀಕರಿಸಿದ ಡಿಆರ್ ಎಚ್ ಪಿಗೆ (DRHP) ಸೆಬಿ ತನ್ನ ಒಪ್ಪಿಗೆ ನೀಡಿದೆ.
ಇನೀಷಿಯಲ್ ಪಬ್ಲಿಕ್ ಆಫರಿಂಗ್ ಮೇ 9 ರಂದು ಮುಕ್ತಾಯಗೊಳ್ಳಲಿದೆ. ಎಲ್ ಐಸಿ ಐಪಿಒಗಾಗಿ ಆಂಕರ್ ಖರೀದಿಗೆ ಮೇ 2 ರಂದು ತೆರೆಯುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಎಲ್ ಐಸಿಯ ಸಂಪೂರ್ಣ ಮಾಲೀಕತ್ವ ಹೊಂದಿರುವ ಸರ್ಕಾರವು 21,000 ಕೋಟಿ ರೂಪಾಯಿಗಳ ಅಂದಾಜು ಮೊತ್ತವನ್ನು ಸಂಗ್ರಹಿಸಲು 3.5 ಶೇಕಡಾ ಪಾಲನ್ನು ಅಥವಾ ಸುಮಾರು 22 ಕೋಟಿ ಷೇರುಗಳನ್ನು ಮಾರಾಟ ಮಾಡಲು ಯೋಜಿಸಿದೆ ಎಂದು ಸರ್ಕಾರ ಈ ಹಿಂದೆ ತಿಳಿಸಿತ್ತು.
ಮೊದಲಿಗೆ ಎಲ್ ಐಸಿ ಸೆಬಿಗೆ ಸಲ್ಲಿಸಿದ್ದ ಡಿಆರ್ ಎಚ್ ಪಿಯಲ್ಲಿ ಕಂಪನಿಯ ಶೇ.5ರಷ್ಟು ಪಾಲನ್ನು ಐಪಿಒಗೆ ನೀಡುವುದಾಗಿ ಹೇಳಿತ್ತು. ಆದರೆ, ಕಳೆದ ಕೆಲ ತಿಂಗಳಲ್ಲಿ ವಿಶ್ವದಲ್ಲಿ ನಡೆಯುತ್ತಿರುವ ವಿದ್ಯಮಾನ ಹಾಗೂ ಅದರ ಪರಿಣಾಮದ ಕಾರಣದಿಂದಾಗಿ ಶೇ. 5ರ ಬದಲಾಗಿ ಶೇ. 3.5ಯಷ್ಟು ಷೇರನ್ನು ಐಪಿಒಗೆ ಬಿಡುಗಡೆ ಮಾಡುವುದಾಗಿ ನಿರ್ಧಾರ ಮಾಡಿ ಹೊಸ ಡ್ರಾಫ್ಡ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅನ್ನು ಸೆಬಿಗೆ ಸಲ್ಲಿಸಿತ್ತು.
ದಿನಾಂಕ ಬಹುತೇಕ ಖಚಿತವಾಗಿದ್ದು ಬುಧವಾರ ಇದಕ್ಕೆ ಮಂಡಳಿಯ ಒಪ್ಪಿಗೆ ನೀಡಬೇಕಿದೆ. ದಿನಾಂಕ ಮಾತ್ರವಲ್ಲದೆ, ಮೀಸಲಾತಿ ಹಾಗೂ ರಿಯಾಯಿತಿ ಕೂಡ ಬುಧವಾರ ಹೊರಬೀಳಲಿದೆ. ಎಲ್‌ಐಸಿ ಮಂಡಳಿಯು ಶನಿವಾರ, ವಿಮಾದಾರರ ಐಪಿಒದ ಇಶ್ಯೂ ಗಾತ್ರವನ್ನು ಈ ಹಿಂದೆ ಪ್ರಸ್ತಾಪಿಸಿದ 5 ಪ್ರತಿಶತದಿಂದ 3.5 ಪ್ರತಿಶತಕ್ಕೆ ಇಳಿಸಲು ಅನುಮೋದಿಸಿದೆ. ಕೇಂದ್ರವು ಈಗ ಎಲ್ಐಸಿಯಲ್ಲಿನ ತನ್ನ ಶೇಕಡ 3.5 ರಷ್ಟು ಷೇರುಗಳನ್ನು ರೂ 21,000 ಕೋಟಿಗೆ ನಿಯಂತ್ರಕ ಅನುಮೋದನೆಗೆ ಒಳಪಟ್ಟಿರುತ್ತದೆ, ಎಲ್ಐಸಿಯನ್ನು ರೂ 6 ಟ್ರಿಲಿಯನ್ ಗೆ ಮೌಲ್ಯೀಕರಿಸುತ್ತದೆ.
LIC IPO ಮೇಲೆ ರಷ್ಯಾ ಉಕ್ರೇನ್ ಯುದ್ಧದ ಕರಿನೆರಳು; ಮಾರ್ಚ್ ನಲ್ಲಿ ನಡೆಯಬೇಕಿದ್ದ ಐಪಿಒ ಮೇಗೆ ಮುಂದೂಡಿಕೆ
ಎಲ್ಐಸಿ ಐಪಿಒನಲ್ಲಿ 26 ಕೋಟಿ ಪಾಲಿಸಿದಾರರಿಗೆ 3.16 ಕೋಟಿ ಷೇರುಗಳನ್ನು ಮೀಸಲಿಡಲಾಗಿದೆ. ಅಂದ್ರೆ ಶೇ.10ರಷ್ಟು ಷೇರುಗಳನ್ನು ಮೀಸಲಿಡಲಾಗಿದೆ. ಆದ್ರೆ ಪಾಲಿಸಿಯೊಂದಿಗೆ ಪ್ಯಾನ್ ಜೋಡಿಸಿರೋ ಹಾಗೂ ಡಿಮ್ಯಾಟ್ ಖಾತೆ ಹೊಂದಿರೋ ಪಾಲಿಸಿದಾರರು ಮಾತ್ರ ಈ ಐಪಿಒನಲ್ಲಿ ಪಾಲ್ಗೊಳ್ಳಬಹುದಾಗಿದೆ. ಇನ್ನು ಪಾಲಿಸಿಯೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಪಾಲಿಸಿದಾರರಿಗೆ ಎಲ್ಐಸಿ 2022 ಫೆಬ್ರವರಿ 28ರ ತನಕ ಸಮಯಾವಕಾಶ ನೀಡಿತ್ತು. ಈ ಬಗ್ಗೆ ಅನೇಕ ತಿಂಗಳುಗಳಿಂದ ಎಲ್ಐಸಿ ಮಾಧ್ಯಮ ಜಾಹೀರಾತುಗಳ ಮೂಲಕ ಪಾಲಿಸಿದಾರರಿಗೆ ಮಾಹಿತಿ ನೀಡುತ್ತ ಬಂದಿದೆ ಕೂಡ. ಹೀಗಾಗಿ ಫೆ.28 ಹಾಗೂ ಅದಕ್ಕೂ ಮುನ್ನ ಪಾಲಿಸಿಯೊಂದಿಗೆ ಪ್ಯಾನ್ ಲಿಂಕ್ ಮಾಡಿದ ಪಾಲಿಸಿದಾರರಿಗೆ ಮಾತ್ರ ಐಪಿಒನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಇನ್ನು 2022ರ ಫೆಬ್ರವರಿ 13 ಹಾಗೂ ಅದಕ್ಕೂ ಮುನ್ನ ಪಾಲಿಸಿ ಮಾಡಿಸಿದ ಪಾಲಿಸಿದಾರರು ಮಾತ್ರ ಈ ಐಪಿಒನಲ್ಲಿ ಭಾಗವಹಿಸೋ ಅರ್ಹತೆ ಹೊಂದಿದ್ದಾರೆ.
LIC IPO:ಎಲ್ಐಸಿ ಪಾಲಿಸಿದಾರರು, ಸಿಬ್ಬಂದಿ,ರೀಟೆಲ್ ಹೂಡಿಕೆದಾರರಿಗೆ ಎಷ್ಟು ಪಾಲು ಮೀಸಲು? ಎಷ್ಟು ಮೊತ್ತದ ಷೇರು ಖರೀದಿಸಬಹುದು?
ಎಲ್ಐಸಿ ಪಾಲಿಸಿದಾರರು ಎಲ್ಐಸಿ ಐಪಿಒನಲ್ಲಿ ಗರಿಷ್ಠ 4ಲಕ್ಷ ರೂ. ಮೌಲ್ಯದ ಷೇರು ಖರೀದಿಸಬಹುದಾಗಿದೆ. ಅಂದರೆ ಪಾಲಿಸಿದಾರರ ವರ್ಗದಡಿಯಲ್ಲಿ 2ಲಕ್ಷ ರೂ. ಹಾಗೂ ಚಿಲ್ಲರೆ (Retail) ಹೂಡಿಕೆದಾರರ ವರ್ಗದಡಿಯಲ್ಲಿ 2ಲಕ್ಷ ರೂ. ಹೀಗೆ ಒಟ್ಟು 4 ಲಕ್ಷ ರೂ. ಮೌಲ್ಯದ ಷೇರುಗಳನ್ನು ಖರೀದಿ ಮಾಡಹುದಾಗಿದೆ. ಅಲ್ಲದೆ, ಈ ಎರಡೂ ವರ್ಗಗಳಡಿಯಲ್ಲಿ ಒಂದೇ ಡಿಮ್ಯಾಟ್ ಖಾತೆಯಿಂದ ಖರೀದಿ ಮಾಡಬಹುದಾಗಿದೆ. ಇನ್ನು ಪಾಲಿಸಿದಾರರಿಗೆ ಯಾವುದೇ ಲಾಕ್ ಇನ್ ಅವಧಿಯಿಲ್ಲ. ಹೀಗಾಗಿ ಅವರು ಲಿಸ್ಟಿಂಗ್ ದಿನವೇ ಷೇರುಗಳನ್ನು ಮಾರಾಟ ಮಾಡಬಹುದಾಗಿದೆ.
