LIC IPO: ಎಲ್ ಐಸಿ ಪಾಲಿಸಿದಾರರು ಐಪಿಒನಲ್ಲಿ ಪಾಲ್ಗೊಳ್ಳಲು ತಪ್ಪದೇ ಈ ಒಂದು ಕೆಲ್ಸ ಮಾಡ್ಬೇಕು!
*ಎಲ್ಐಸಿ ಐಪಿಒನಲ್ಲಿ ಪಾಲಿಸಿದಾರರಿಗೆ ಶೇ.10 ಷೇರುಗಳು ಮೀಸಲು
*ಎಲ್ಐಸಿ ಸಿಬ್ಬಂದಿಗೆ ಶೇ.5 ಷೇರುಗಳು ಮೀಸಲು
* ಡಿಮ್ಯಾಟ್ ಖಾತೆ ಹೊಂದಿದ್ರೆ ಮಾತ್ರ ಎಲ್ಐಸಿ ಐಪಿಒನಲ್ಲಿ ಪಾಲ್ಗೊಳ್ಳಲು ಸಾಧ್ಯ
Business Desk: ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒ (IPO) ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಮಾರ್ಚ್ 31ರೊಳಗೆ ಎಲ್ಐಸಿ (LIC) ಐಪಿಒ(IPO) ನಡೆಯೋ ಸಾಧ್ಯತೆಯಿದ್ದು, ಭಾರತೀಯ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಬೋರ್ಡ್ ಗೆ (SEBI) ಎಲ್ಐಸಿ ಐಪಿಒ ಕರಡು ಪ್ರತಿಗಳನ್ನು ಇತ್ತೀಚೆಗೆ ಸಲ್ಲಿಕೆ ಮಾಡಿದೆ ಕೂಡ. ಇದು ದೇಶದ ಅತೀದೊಡ್ಡ ಐಪಿಒ ಆಗಿ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಲ್ಐಸಿ ಷೇರು ವಿನಿಮಯ ಕೇಂದ್ರದಲ್ಲಿ ಬಿಡುಗಡೆಗೊಳಿಸೋ ಷೇರಿನ (Share) ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ಹಾಗಾದ್ರೆ ಎಲ್ ಐಸಿ ಐಪಿಒ ವಿಶೇಷತೆಗಳೇನು? ಇದ್ರಿಂದ ಎಲ್ ಐಸಿ ಪಾಲಿಸಿದಾರರಿಗೆ, ಸಿಬ್ಬಂದಿಗೆ ಏನೆಲ್ಲ ಲಾಭಗಳಿವೆ? ಇಲ್ಲಿದೆ ಮಾಹಿತಿ.
ಈ ಐಪಿಒ ಸರ್ಕಾರಕ್ಕೆ ನಿರ್ಣಾಯಕ
ಭಾರತೀಯ ಜೀವ ವಿಮಾ ನಿಗಮದಲ್ಲಿ(LIC) ಕೇಂದ್ರ ಸರ್ಕಾರ ಶೇ.100ರಷ್ಟು ಷೇರುಗಳನ್ನು ಹೊಂದಿದೆ. ವರದಿಗಳ ಪ್ರಕಾರ ಸರ್ಕಾರ ಶೇ.5ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ 75,000 ಕೋಟಿ ರೂ. ಬಂಡವಾಳ ಸಂಗ್ರಹಿಸೋ ಗುರಿ ಹೊಂದಿದೆ. ಎಲ್ಐಸಿ ಐಪಿಒ ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಕಾರ್ಯಕ್ರಮದ ಒಂದು ಭಾಗವೇ ಆಗಿದೆ. 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರಕ್ಕೆ ಬಂಡವಾಳ ಹಿಂತೆಗೆತದ ಗುರಿ ತಲುಪಲು ಈ ಐಪಿಒ ನಿರ್ಣಾಯಕವಾಗಲಿದೆ.
LIC Kanyadan Policy : ಮಗಳ ಮದುವೆ ಚಿಂತೆ ಬಿಡ್ಬಿಡಿ,ಇಲ್ಲಿ ಹೂಡಿಕೆ ಮಾಡಿ
ಪಾಲಿಸಿದಾರರಿಗೆ, ಸಿಬ್ಬಂದಿಗೆ ಎಷ್ಟು ಷೇರು ಮೀಸಲಿಡಲಾಗಿದೆ?
ಎಲ್ಐಸಿ ಐಪಿಒನಲ್ಲಿ ಎಲ್ಐಸಿ ಪಾಲಿಸಿದಾರರು (LIC Policyholders) ಹಾಗೂ ಸಿಬ್ಬಂದಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಐಸಿ ಪಾಲಿಸಿದಾರರಿಗೆ ಶೇ.10 ಹಾಗೂ ಎಲ್ಐಸಿ ಸಿಬ್ಬಂದಿಗೆ ಶೇ.5 ಷೇರುಗಳನ್ನು ಮೀಸಲಿಡಲಾಗಿದೆ. ಇನ್ನು ಇವರಿಗೆ ಡಿಸ್ಕೌಂಟ್ ನೀಡೋ ಸಾಧ್ಯತೆಯೂ ಇದೆ. ಆದ್ರೆ ಡಿಸ್ಕೌಂಟ್ ಪ್ರಮಾಣ ಎಷ್ಟಿರಲಿದೆ ಎಂಬ ಮಾಹಿತಿ ಹರಾಜಿಗೆ ಎರಡು ದಿನ ಮುನ್ನ ಸಿಗೋ ಸಾಧ್ಯತೆಯಿದೆ.
ಷೇರು ಖರೀದಿಸೋದು ಹೇಗೆ?
ಎಲ್ಐಸಿ ಪಾಲಿಸಿದಾರರು ಎಲ್ಐಸಿ ಐಪಿಒನಲ್ಲಿ ಪಾಲ್ಗೊಳ್ಳಲು ಡಿಮ್ಯಾಟ್ ಖಾತೆ ಹೊಂದಿರೋದು ಕಡ್ಡಾಯ. ಡಿ ಮ್ಯಾಟ್ ಖಾತೆ ಮೂಲಕ ಮಾತ್ರ ಷೇರು ಖರೀದಿಗೆ ಅವಕಾಶವಿದೆ. ಇನ್ನು ಐಪಿಒದಲ್ಲಿ ಕನಿಷ್ಠ ಇಷ್ಟೇ ಷೇರುಗಳನ್ನು ಖರೀದಿಸಬೇಕೆಂಬ ಮಿತಿಯಿರುತ್ತದೆ. ಎಲ್ ಐಸಿ ಪಾಲಿಸಿದಾರರು ಪಾಲಿಸಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯ. ಹೀಗೆ ಮಾಡಿದ್ರೆ ಮಾತ್ರ ಪಾಲಿಸಿದಾರರಿಗೆ ಐಪಿಒ ಡಿಸ್ಕೌಂಟ್ ಆಫರ್ ಪಡೆಯಲು ಸಾಧ್ಯವಾಗುತ್ತದೆ.
ಪಾಲಿಸಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ಹೇಗೆ?
* ಮೊದಲು ಎಲ್ಐಸಿ ಅಧಿಕೃತ ವೆಬ್ ಸೈಟ್ https://licindia.in ಭೇಟಿ ನೀಡಿ.
*'Online PAN Registration'ಆಯ್ಕೆ ಮಾಡಿ ಹಾಗೂ ಮುಂದುವರಿಯಿರಿ.
*ಈಗ ಇನ್ನೊಂದು ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಪ್ಯಾನ್ ನಂಬರ್, ಎಲ್ಐಸಿ ಪಾಲಿಸಿ ನಂಬರ್,ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ನಮೂದಿಸಿ.
*ಕ್ಯಾಪ್ಚ ಕೋಡ್ (captcha code) ನಮೂದಿಸಿ ಹಾಗೂ OTP request ಮೇಲೆ ಕ್ಲಿಕ್ ಮಾಡಿ.
*OTP ದೊರೆತ ತಕ್ಷಣ ಆ ಸಂಖ್ಯೆ ನಮೂದಿಸಿ ಹಾಗೂ ವೆಬ್ ಸೈಟ್ ನಲ್ಲಿ ಸಲ್ಲಿಕೆ ಮಾಡಿ.
Post Office: ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಶೀಘ್ರದಲ್ಲಿ ನೆಟ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ!
ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯಾ ಪರಿಶೀಲಿಸೋದು ಹೇಗೆ?
*https://linkpan.licindia.in/UIDSeedingWebApp/getPolicyPANStatus ಭೇಟಿ ನೀಡಿ.
*ಕ್ಯಾಪ್ಚ ಕೋಡ್ (captcha code) ಜೊತೆಗೆ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಸಲ್ಲಿಸಿ.
*ಈಗ ನಿಮ್ಮ ಸ್ಕ್ರೀನ್ ಮೇಲೆ ಪ್ಯಾನ್ ಸಂಖ್ಯೆ ನಿಮ್ಮ ಪಾಲಿಸಿ ಜೊತೆ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ.