ನವದೆಹಲಿ[ಜು.23]: ತಪ್ಪು ಪ್ಯಾನ್‌ ಸಂಖ್ಯೆ ನಮೂದಿಸಿ ಸರ್ಕಾರವನ್ನು ಏಮಾರಿಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮೊತ್ತದ ನಗದು ವ್ಯವಹಾರಗಳಿಗೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ನಿರ್ದಿಷ್ಟಮೊತ್ತ ಮೇಲ್ಪಟ್ಟಆಸ್ತಿ ನೋಂದಣಿ ಹಾಗೂ ವಿದೇಶಿ ವಿನಿಮಯ ವಹಿವಾಟಿಗೂ ಈ ನಿಯಮ ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಎಷ್ಟುಮೊತ್ತ ಮೇಲ್ಪಟ್ಟನಗದು ವ್ಯವಹಾರಕ್ಕೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಚರ್ಚೆಯಲ್ಲಿ ತೊಡಗಿದೆ. ಅದು ಅಂತಿಮಗೊಳ್ಳುವವರೆಗೂ ವಾರ್ಷಿಕ 20ರಿಂದ 25 ಲಕ್ಷ ರು. ಮೇಲ್ಪಟ್ಟನಗದು ಜಮೆ ಅಥವಾ ಹಿಂಪಡೆಯುವ ವ್ಯವಹಾರಗಳಿಗೆ ಆಧಾರ್‌ ದೃಢೀಕರಣ ಕಡ್ಡಾಯ ಮಾಡಲಾಗುತ್ತದೆ. ಎಲೆಕ್ಟ್ರಾನಿಕ್‌ ಕೆವೈಸಿ ಅಥವಾ ಒಂದು ಬಾರಿ ಮೊಬೈಲ್‌ಗೆ ಒಟಿಪಿ ಕಳುಹಿಸುವ ವಿಧಾನದಲ್ಲಿ ಇದನ್ನು ನಡೆಸಲಾಗುತ್ತದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.

ಈ ಕ್ರಮದಿಂದ ಕಿರಾಣಿ ಅಂಗಡಿ ಹಾಗೂ ಡೈರಿಯಂತಹ ಸಣ್ಣ ಉದ್ಯಮ ನಡೆಸುವ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಅಂಥವರನ್ನು ಆಧಾರ್‌ ದೃಢೀಕರಣದಿಂದ ಹೊರಗಿಡುವ ಚರ್ಚೆಯೂ ನಡೆಯುತ್ತಿದೆ ಎಂದು ಹೇಳಲಾಗಿದೆ.