ಗೃಹಸಾಲ ಪಡೆಯೋದು ಅಷ್ಟು ಸುಲಭನಾ? ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಪ್ರಶ್ನೆಗಳನ್ನು ಕೇಳಿಕೊಂಡಿದ್ದೀರಾ?
ಸ್ವಂತ ಮನೆ ನಿರ್ಮಾಣ ಬಹುತೇಕರ ಬದುಕಿನ ದೊಡ್ಡ ಕನಸಾಗಿರುತ್ತದೆ.ಈಗಂತೂ ಮನೆ ಖರಿದಿಸುತ್ತೇವೆ ಅಂದ್ರೆ ಸಾಕು,ಸಾಲ ನೀಡಲು ಬ್ಯಾಂಕುಗಳು ಕ್ಯೂ ನಿಲ್ಲುತ್ತವೆ.ಆದ್ರೆ ಗೃಹಸಾಲ ಪಡೆಯೋದು ಅಷ್ಟು ಸುಲಭನಾ? ಸಾಲಕ್ಕೆ ಅರ್ಜಿ ಸಲ್ಲಿಸಿ ಮಂಜೂರು ಆಗದಿದ್ರೆ ಆ ಬಳಿಕ ತಲೆಕೆಡಿಸಿಕೊಳ್ಳುವ ಬದಲು ಮೊದಲೇ ನಿಮ್ಮ ಆರ್ಥಿಕ ಸಾಮರ್ಥ್ಯದ ಮೌಲ್ಯಮಾಪನವನ್ನು ನೀವೇ ಮಾಡೋದು ಒಳ್ಳೆಯದು. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಸ್ವಂತ ಗೂಡು ಕಟ್ಟಿಕೊಳ್ಳುವ ಕನಸು ಎಲ್ಲರಿಗೂ ಇರುತ್ತದೆ. ಈಗಂತೂ ಮನೆ ಖರೀದಿ ಹಿಂದಿನಷ್ಟು ಕಷ್ಟದ ಕೆಲಸವೂ ಅಲ್ಲ. ಬ್ಯಾಂಕುಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಸಾಲ ನೀಡಲು ಸಿದ್ಧವಿರುತ್ತವೆ. ಆದರೆ, ಗೃಹ ಸಾಲದ ಅರ್ಜಿಯ ಅಂಗೀಕಾರ ಸಾಲಗಾರರ ಕ್ರೆಡಿಟ್ ಸ್ಕೋರ್ ಹಾಗೂ ಮಾರ್ಜಿನ್ ಕೊಡುಗೆ ನೀಡಲು ಅವರಿಗಿರುವ ಸಾಮರ್ಥ್ಯ ಅಥವಾ ಡೌನ್ ಪೇಮೆಂಟ್ ಹಾಗೂ ಭವಿಷ್ಯದಲ್ಲಿ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲು ಅವರಿಗಿರುವ ಸಾಮರ್ಥ್ಯವನ್ನು ಆಧರಿಸಿರುತ್ತದೆ. ಹೀಗಾಗಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದ ತಕ್ಷಣ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದಕಾರಣ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಅದು ನಿಮಗೆ ಸಿಗುತ್ತದೋ ಇಲ್ಲವೋ ಎಂಬುದನ್ನು ನೀವೇ ಪರಿಶೀಲಿಸೋದು ಉತ್ತಮ. ಅದಕ್ಕಾಗಿ ನಿಮಗೆ ನೀವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಂಡು, ಉತ್ತರ ಹುಡುಕಲು ಪ್ರಯತ್ನಿಸಬೇಕು. ಆಗ ಸಾಲ ಸಿಗುತ್ತದೋ ಇಲ್ಲವೋ ಎಂಬ ಸ್ಪಷ್ಟನೆ ನಿಮಗೇ ಸಿಗುತ್ತದೆ. ಇದ್ರಿಂದ ನಿಮ್ಮ ಮನೆ ಖರೀದಿ ನಿರ್ಧಾರವನ್ನು ಮರುಪರಿಶೀಲಿಸಲು ಅಥವಾ ಹಣಕ್ಕೆ ಬೇರೆ ಯಾವ ವ್ಯವಸ್ಥೆ ಮಾಡಬಹುದು ಎಂಬ ಬಗ್ಗೆ ಯೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ.
ಗೃಹಸಾಲ ಸಿಗುತ್ತದೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮಗೆ ನೀವೇ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ.
ಡೌನ್ ಪೇಮೆಂಟ್ ಮಾಡಲು ಸಾಕಷ್ಟು ಹಣ ಇದೆಯಾ?
ಗೃಹ ಸಾಲಕ್ಕೆ ಅರ್ಜಿ ಸಲ್ಲಿಸೋರಿಗೆ ಗೃಹ ನಿರ್ಮಾಣ ಅಥವಾ ಖರೀದಿ ವೆಚ್ಚದ ಶೇ. 75-90ರಷ್ಟನ್ನು ಗೃಹ ಸಾಲದ ಮೂಲಕ ಭರಿಸಲು ಅವಕಾಶ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಅರ್ಜಿದಾರರು ತಮ್ಮ ಉಳಿತಾಯದಿಂದ ಅಥವಾ ಇನ್ಯಾವುದೋ ಸ್ವಂತ ಮೂಲದಿಂದ ಭರಿಸಬೇಕು. ಹೀಗಾಗಿ ನೀವು ಖರೀದಿಸಲು ಇಚ್ಛಿಸುವ ಆಸ್ತಿಯ ಮೌಲ್ಯದ ಶೇ.10-ಶೇ.25ರಷ್ಟನ್ನು ಡೌನ್ ಪೇಮೆಂಟ್ ಮಾಡುವ ಗುರಿ ಇಟ್ಟುಕೊಳ್ಳಿ. ನೀವು ಜಾಸ್ತಿ ಮೊತ್ತದ ಡೌನ್ ಪೇಮೆಂಟ್ ಮಾಡಿದ್ರೆ ಕಡಿಮೆ ಬಡ್ಡಿದರಕ್ಕೆ ಗೃಹ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಜಾಸ್ತಿ ಮೊತ್ತದ ಡೌನ್ ಪೇಮೆಂಟ್ ಮಾಡಿದ್ರೆ ಸಾಲಗಾರರಿಗೆ ಕ್ರೆಡಿಟ್ ರಿಸ್ಕ್ ಕಡಿಮೆಯಾಗುತ್ತದೆ. ಇತ್ತೀಚೆಗೆ ಜಾಸ್ತಿ ಮೊತ್ತದ ಡೌನ್ ಪೇಮೆಂಟ್ ಮಾಡಿದ ಸಾಲದ ಅರ್ಜಿದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಬ್ಯಾಂಕುಗಳು ನೀಡುತ್ತಿವೆ.
ಐಟಿ ರಿಟರ್ನ್ ಸಲ್ಲಿಕೆ ಮಾಡಿರೋರು ರೀಫಂಡ್ ಸ್ಟೇಟಸ್ ಚೆಕ್ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ
ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದೆಯಾ?
750 ಹಾಗೂ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರನ್ನು ಆರ್ಥಿಕವಾಗಿ ಶಿಸ್ತು ಹೊಂದಿರೋರು ಎಂದು ಪರಿಗಣಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ಹೆಚ್ಚಿದ್ರೆ ಬ್ಯಾಂಕುಗಳಿಗೆ ಕ್ರೆಡಿಟ್ ರಿಸ್ಕ್ ಕಡಿಮೆ. ಹೀಗಾಗಿ ಬ್ಯಾಂಕುಗಳು ಅಂಥವರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನಿಡುತ್ತವೆ. ಆದಕಾರಣ ಗೃಹ ಸಾಲ ಬೇಕಂದ್ರೆ ನಿಮ್ಮ ಕ್ರೆಡಿಟ್ ಸ್ಕೋರ್ 750 ಹಾಗೂ ಅದಕ್ಕಿಂತ ಹೆಚ್ಚಿರುವಂತೆ ನೋಡಿಕೊಳ್ಳಿ. ಆನ್ ಲೈನ್ ಹಣಕಾಸು ಮಾರುಕಟ್ಟೆ ತಾಣಗಳಿಂದ ಅಥವಾ ಕ್ರೆಡಿಟ್ ಬ್ಯುರೋಗಳಿಂದ ಕ್ರೆಡಿಟ್ ವರದಿ ಪಡೆಯಿರಿ. ಇದ್ರಿಂದ ಆ ವರದಿಯಲ್ಲಿ ಏನಾದ್ರೂ ತಪ್ಪುಗಳಿದ್ರೆ ಅದನ್ನು ಸರಿಪಡಿಸಲು ಸಾಧ್ಯವಾಗುತ್ತದೆ.
ನಿಮ್ಮ ತುರ್ತುನಿಧಿಯಲ್ಲಿ ಗೃಹಸಾಲ ಇಎಂಐ ಸೇರಿಸಿ
ಅನಾರೋಗ್ಯ, ಉದ್ಯೋಗ ನಷ್ಟ ಅಥವಾ ಅಂಗವೈಕಲ್ಯದಿಂದ ನಿಮ್ಮ ಆದಾಯ ತಗ್ಗಿದ್ರೆ ಆಗ ಅದು ನಿಮ್ಮ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಗೃಹಸಾಲದ ಇಎಂಐಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ರೆ ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ. ಅಲ್ಲದೆ, ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ಭವಿಷ್ಯದಲ್ಲಿ ಸಾಲ ಪಡೆಯುವ ಸಾಮರ್ಥ್ಯ ಕೂಡ ತಗ್ಗುತ್ತದೆ. ಆದಕಾರಣ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಕನಿಷ್ಠ ಆರು ತಿಂಗಳ ಕಾಲ ಗೃಹ ಸಾಲದ ಇಎಂಐ ಮರುಪಾವತಿಗೆ ನೆರವಾಗುವಂತೆ ಹಣವನ್ನು ನಿಮ್ಮ ತುರ್ತು ನಿಧಿಯಲ್ಲಿ ಸಂಗ್ರಹಿಸಿಡಿ.
ಖಾಲಿ ಹಾಲಿನ ಪ್ಯಾಕೆಟ್, ಪ್ಲಾಸ್ಟಿಕ್ ಬಾಟಲ್ ಕೊಡಿ: ಪೆಟ್ರೋಲ್, ಡೀಸೆಲ್‌ಗೆ ರಿಯಾಯಿತಿ ಪಡೆಯಿರಿ..!
ಸಾಲ ಮರುಪಾವತಿ ಸಾಮರ್ಥ್ಯವಿದೆಯಾ?
ಗೃಹಸಾಲ ನೀಡುವ ಸಂಸ್ಥೆಗಳು ಸಾಮಾನ್ಯವಾಗಿ ಸಾಲ ಪಡೆಯುವ ವ್ಯಕ್ತಿಯ ಮಾಸಿಕ ಇಎಂಐ ಪಾವತಿ ಸಾಮರ್ಥ್ಯವನ್ನು ಗಮನಿಸುತ್ತವೆ. ಇಎಂಐ ಮೊತ್ತ ಆತನ ತಿಂಗಳ ಆದಾಯದ ಶೇ.50-60ರಷ್ಟಿದ್ದರೆ ಅಂಥ ಸಂದರ್ಭಗಳಲ್ಲಿ ಸಾಲ ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ರೆ, ಈ ಮಿತಿ ಮೀರಿದ್ರೆ ಅಂಥವರಿಗೆ ಸಾಲಕ್ಕೆ ಅನುಮೋದನೆ ನೀಡೋದು ಕಷ್ಟ. ಇಂಥ ಸಂದರ್ಭದಲ್ಲಿ ನೀವು ಗೃಹಸಾಲದ ಇಎಂಐ ಮೊತ್ತವನ್ನು ತಗ್ಗಿಸಲು ದೀರ್ಘ ಅವಧಿಯ ಗೃಹಸಾಲದ ಮೊರೆ ಹೋಗೋದು ಉತ್ತಮ.