*ಕುಡುಂಬಶ್ರೀ ಮಾದರಿಯ ಸಣ್ಣ ಸಂಸ್ಥೆಗಳು ಮಾರಾಟ ಮಾಡೋ ವಸ್ತುಗಳಿಗೂ ಜಿಎಸ್ ಟಿ ಇಲ್ಲ*ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಕೇರಳ ಸರ್ಕಾರದ ಪತ್ರ*ಜಿಎಸ್ ಟಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ಕೇರಳ ಸಿಎಂ ಪಟ್ಟು
ತಿರುವನಂತಪುರಂ (ಜು.21): ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ ಹೇರಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಕುಡುಂಬಶ್ರೀ ಮಾದರಿಯ ಸಣ್ಣ ಸಂಸ್ಥೆಗಳು ಹಾಗೂ ಚಿಕ್ಕ ಅಂಗಡಿಗಳಲ್ಲಿ ಮಾರಾಟ ಮಾಡುವ 1 ಅಥವಾ 2 ಕೆಜಿ ತೂಕದ ಅಗತ್ಯ ವಸ್ತುಗಳ ಮಾರಾಟದ ಮೇಲೆ ಜಿಎಸ್ ಟಿ ವಿಧಿಸೋದಿಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಈ ಬಗ್ಗೆ ಕೇರಳ ವಿಧಾನಸಭೆಯಲ್ಲಿ ಮಾಹಿತಿ ನೀಡಿದ ರಾಜ್ಯ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ಈ ನಿರ್ಧಾರದಿಂದ ಕೇಂದ್ರ ಸರ್ಕಾರದೊಂದಿಗೆ ಭಿನ್ನಮತ ಸೃಷ್ಟಿಯಾಗೋ ಸಾಧ್ಯತೆಯಿದೆ. ಆದರೆ, ಈ ವಿಚಾರದಲ್ಲಿ ರಾಜೀಯಾಗಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರೋದಾಗಿಯೂ ತಿಳಿಸಿದ್ದಾರೆ. ಸಣ್ಣ ವ್ಯಾಪಾರಿಗಳು ಹಾಗೂ ಅಂಗಡಿಗಳ ಮೇಲೆ ತೆರಿಗೆ ವಿಧಿಸುವ ಯಾವ ಉದ್ದೇಶವೂ ನಮಗಿಲ್ಲ. ಈ ವಿಚಾರದಲ್ಲಿ ಯಾವುದೇ ವಾದವನ್ನು ಕೂಡ ಮಾಡೋದಿಲ್ಲ ಎಂದು ಬಾಲಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರ್ಕಾರ ಅಗತ್ಯ ವಸ್ತುಗಳನ್ನು ಜಿಎಸ್ ಟಿ ವ್ಯಾಪ್ತಿಯೊಳಗೆ ತಂದಿರುವ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಕುಡುಂಬಶ್ರೀ (Kudumbashree) ಕೇರಳ (Kerala) ಸರ್ಕಾರದ ಮಹಿಳಾ ಸ್ವಸಹಾಯ ಗುಂಪಾಗಿದೆ ( self-help group).ಇದನ್ನು ದೇಶದ ಅತೀದೊಡ್ಡ ಮಹಿಳಾ ಸಬಲೀಕರಣ ಯೋಜನೆ ಎಂದು ಕೂಡ ಪರಿಗಣಿಸಲಾಗಿದೆ. ಈ ಸ್ವಸಹಾಯ ಸಂಘ ಸಣ್ಣ ಪ್ರಮಾಣದಲ್ಲಿ ಆಹಾರ ಸಂಸ್ಕರಣಾ ಘಟಕಗಳು ಹಾಗೂ ವಿವಿಧ ಉತ್ಪನ್ನಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಿರತವಾಗಿದೆ.
ರುಪಾಯಿ ಮಹಾಪತನ: ಡಾಲರ್ ಮುಂದೆ 80ಕ್ಕೆ ಕುಸಿತ
ಬ್ರ್ಯಾಂಡೆಡ್ (Branded) ಕಂಪನಿಗಳ ಪ್ಯಾಕ್ ಆಗಿರುವ (Packed) ಉತ್ಪನ್ನಗಳಿಗೆ ಶೇ.5ರಷ್ಟು ತೆರಿಗೆ ಪಾವತಿಸಬೇಕು. ಒಂದು ವೇಳೆ ಪ್ಯಾಕೆಟ್ (Packet) ಮೇಲೆ ಬ್ರ್ಯಾಂಡ್ ಅಲ್ಲ ಎಂದು ಆ ಸಂಸ್ಥೆಗಳು ನಮೂದಿಸಿದ್ದರೆ ಆಗ ತೆರಿಗೆ ಪಾವತಿಸುವ ಅಗತ್ಯವಿಲ್ಲ ಎಂದು ಕೂಡ ಬಾಲಗೋಪಾಲ್ ತಿಳಿಸಿದ್ದಾರೆ. ಕೆಲವು ಕಂಪನಿಗಳು ತೆರಿಗೆ ವಂಚನೆ ಮಾಡೋದನ್ನು ತಡೆಯಲು ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಆದರೆ, ಈ ಬಗ್ಗೆ ಇನ್ನೂ ಕೂಡ ಕೆಲವು ಗೊಂದಲಗಳಿವೆ' ಎಂದು ಅವರು ಹೇಳಿದ್ದಾರೆ.
ಅಗತ್ಯ ವಸ್ತುಗಳ ಮೇಲೆ ಜಿಎಸ್ ಟಿ (GST) ವಿಧಿಸಿರೋದು ಸಾಮಾನ್ಯ ಜನರ ಮೇಲೆ ಗಂಭೀರ ಪರಿಣಾಮ ಬೀರುವ ಕಾರಣ ಈ ವಿಚಾರದಲ್ಲಿ ಪ್ರಧಾನಿ (Prime Minister) ನರೇಂದ್ರ ಮೋದಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೇರಳದ (Kerala) ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಆಗ್ರಹಿಸಿದ್ದಾರೆ. ಅನೇಕ ಸಣ್ಣ ಕಿರಾಣಿ ಅಂಗಡಿಗಳ ಮಾಲೀಕರು ಸಾಮಗ್ರಿಗಳನ್ನು ಮೊದಲೇ ಪ್ಯಾಕ್ ಮಾಡಿ ಸಿದ್ಧವಾಗಿಟ್ಟಿರುತ್ತಾರೆ. ಇದ್ರಿಂದ ಗ್ರಾಹಕರು ಕೇಳಿದ ತಕ್ಷಣ ಅದನ್ನು ನೀಡಬಹುದು. ಅಲ್ಲದೆ, ತೂಕ ಹಾಗೂ ಪ್ಯಾಕ್ ಮಾಡಲು ಹೆಚ್ಚಿನ ಸಮಯ ವ್ಯರ್ಥವಾಗೋದನ್ನು ತಪ್ಪಿಸಲು ಹೀಗೆ ಮಾಡಿರುತ್ತಾರೆ ಎಂದು ವಿಜಯನ್ ಹೇಳಿದ್ದಾರೆ.
ಪಿಎಂ ಸ್ವನಿಧಿ ಸಾಲಕ್ಕೆ ಸಿಬಿಲ್ ಸ್ಕೋರ್ ವಿನಾಯಿತಿ: ಜಗದೀಶ್ ಶೆಟ್ಟರ್
ಅಗತ್ಯ ವಸ್ತುಗಳಾದ ಬೇಳೆ, ಹಿಟ್ಟು, ಅಕ್ಕಿ, ಮೊಸರು ಮತ್ತು ಲಸ್ಸಿ ಸೇರಿದಂತೆ ಬ್ರಾಂಡೆಡ್ ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಬೆಲೆಗಳ ಮೇಲೆ ಜುಲೈ 18ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ ಶೇ.5ರಷ್ಟು ಜಿಎಸ್ಟಿ ವಿಧಿಸಿದೆ. ಆದರೆ, ಬೇಳೆಕಾಳುಗಳು, ಅಕ್ಕಿ, ಹಿಟ್ಟು, ಗೋಧಿ, ಜೋಳ, ರಾಗಿ, ಓಟ್ಸ್, ರವೆ, ರವೆ ಹಿಟ್ಟು, ಮೊಸರು ಮತ್ತು ಲಸ್ಸಿಯನ್ನು ಸಡಿಲವಾಗಿ, ಚಿಲ್ಲರೆ ಅಥವಾ ಲೇಬಲ್ ಇಲ್ಲದೆ ಖರೀದಿಸಿದರೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಹಾಗೆಯೇ ಇವುಗಳನ್ನು ತೆರೆದ ಸ್ಥಳದಲ್ಲಿ ಖರೀದಿಸಿದರೆ ಯಾವುದೇ ಜಿಎಸ್ ಟಿ ವಿಧಿಸಲಾಗೋದಿಲ್ಲ.
