ಕಾವೇರಿ ಎಸ್‌.ಎಸ್‌.

ಬೆಂಗಳೂರು[ಫೆ.09]: ಖಾದಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಪ್ರೋತ್ಸಾಹ ಧನ ಹೆಚ್ಚಳಕ್ಕಾಗಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ರಾಜ್ಯ ಸರ್ಕಾರ ಮಂಡಳಿ ಮನವಿಗೆ ಸ್ಪಂದಿಸಿದ್ದಲ್ಲಿ, ಖಾದಿ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೂಲುಕಾರರು, ನೇಕಾರರು ಹಾಗೂ ಖಾದಿ ಕಾರ್ಯಕರ್ತರು, ಕಸುಬುದಾರರು ಸೇರಿದಂತೆ ಅಂದಾಜು 15 ಸಾವಿರ ಮಂದಿಗೆ ದುಪ್ಪಟ್ಟು ಪ್ರೋತ್ಸಾಹ ಧನ ಸಿಗಲಿದೆ. ಜತೆಗೆ ಖಾದಿ ಉತ್ಪಾದನಾ ಕ್ಷೇತ್ರದಲ್ಲಿ ಹೊಸದಾಗಿ ಉದ್ಯೋಗ ಸೃಷ್ಟಿಆಗುವ ಸಾಧ್ಯತೆ ಬಗ್ಗೆಯೂ ಮಂಡಳಿ ಆಶಯ ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾದಿ ಸಂಘ ಸಂಸ್ಥೆಗಳು ಉತ್ಪಾದಿಸುತ್ತಿರುವ ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಒದಗಿಸುವ ದೃಷ್ಟಿಯಿಂದ ಹಾಗೂ ಕಸುಬುದಾರರಿಗೆ ನಿರಂತರ ಉದ್ಯೋಗಾವಕಾಶ ಕಲ್ಪಿಸಲು ಸರ್ಕಾರ 2013-14ನೇ ಸಾಲಿನಿಂದ ಪ್ರೋತ್ಸಾಹ ಧನ ಜಾರಿಗೊಳಿಸಿದೆ.

ಈಗ ಎಷ್ಟಿದೆ?:

ಪ್ರಸ್ತುತ ಖಾದಿ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೂಲು ಸಿದ್ಧಪಡಿಸುವವರಿಗೆ ಪ್ರತಿ ಲಡಿಗೆ 3 ರು., ನೇಕಾರರಿಗೆ ಪ್ರತಿ ಮೀಟರ್‌ ಬಟ್ಟೆಗೆ (ರೇಷ್ಮೆ ಮತ್ತು ಉಣ್ಣೆ ಖಾದಿಗೆ 6 ರು., ಅರಳೆ ಖಾದಿ, ಪಾಲಿವಸ್ತ್ರಕ್ಕೆ 7 ರು.) 6ರಿಂದ 7 ರು., ಇತರೆ ಕಸುಬುದಾರ (ಕಂಡಿಕೆ ಸುತ್ತುವವರು)ರಿಗೆ ಪ್ರತಿ ದಿನಕ್ಕೆ 9.50 ರು. ಹಾಗೂ ಉತ್ಪಾದನಾ ಕೇಂದ್ರ, ಖಾದಿ ಭಂಡಾರಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ವರ್ಗ (ಖಾದಿ ಕಾರ್ಯಕರ್ತರಿಗೆ) ಅವರ ಉತ್ಪಾದನೆಯ ಮೇಲೆ ಶೇ.9ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆಯಡಿ 2019-20ನೆ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ 15 ಕೋಟಿ ರು. ಅನುದಾನ ಹಂಚಿಕೆ ಸಹ ಮಾಡಲಾಗಿದೆ ಎಂದು ಮಂಡಳಿಯ ಅಧಿಕಾರಿಗಳು ಮಾಹಿತಿ ನೀಡಿದರು.

ರಾಜ್ಯದಲ್ಲಿ ನೋಂದಾಯಿತ 179 ಖಾದಿ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 15 ಸಾವಿರ ಮಂದಿ ಖಾದಿ ಉತ್ಪನ್ನಗಳ ತಯಾರಿಕೆಯಲ್ಲಿ ದುಡಿಯುತ್ತಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಪ್ರೋತ್ಸಾಹ ಧನ ಹೆಚ್ಚಿಸಿದಲ್ಲಿ ಖಾದಿ ಉತ್ಪಾದನಾ ಕಾರ್ಯದಲ್ಲಿ ನಿರತವಾಗಿರುವ ಕೂಲಿ ಕಾರ್ಮಿಕರಿಗೆ ಸಹಾಯವಾಗುತ್ತದೆ. ಈ ಕ್ಷೇತ್ರದಲ್ಲಿ 3000 ಉದ್ಯೋಗ ಹೊಸದಾಗಿ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. ಇದರಿಂದ ಖಾದಿ ಉತ್ಪಾದನೆ ಹೆಚ್ಚಳವಾಗಿ ಈ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ. ಫೆ.3ರಂದು ಬಜೆಟ್‌ ಪೂರ್ವ ಸಭೆ ಕರೆಯಲಾಗಿದ್ದು, ಅದರಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದು ಎಂದು ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವ ಸ್ವಾಮಿ ತಿಳಿಸಿದರು.

ಖಾದಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಂಬಳ ಕಡಿಮೆ ಇದೆ. ಖಾದಿ ಕಾರ್ಯಕರ್ತನ ಆ ದಿನದ ದುಡಿಮೆಗೆ ಗೌರವ ಧನ ನೀಡಲಾಗುತ್ತದೆ. ಖಾದಿ ಸಂಘ ಸಂಸ್ಥೆಗಳು ನೀಡುವ ಪ್ರೋತ್ಸಾಹ ಧನದ ಆಧಾರದ ಮೇಲೆ ಸರ್ಕಾರ ಹೆಚ್ಚುವರಿ ಹಣ ನೀಡುತ್ತದೆ. ಅನೇಕ ಸಾಂಪ್ರದಾಯಿಕ ಕಸುಬುದಾರರು ಗ್ರಾಮೀಣ ಪ್ರದೇಶಗಳಲ್ಲಿ ಈ ಉದ್ದಿಮೆಯಲ್ಲಿದ್ದಾರೆ. ಸರ್ಕಾರ ಖಾದಿ ಉತ್ಪಾದನಾ ಕ್ಷೇತ್ರದಲ್ಲಿ ದುಡಿಯುವವರಿಗೆ ಗೌರವ ಧನ ಹೆಚ್ಚಿಸಿ ಅವರಿಗೆ ಉತ್ತೇಜನ ನೀಡಬೇಕು ಎಂದು ಉಪಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಣ್ಣಪ್ಪ ಮನವಿ ಮಾಡಿದ್ದಾರೆ.

ಸೋಲಾರ್‌ ಚರಕ ಬಳಕೆಗೆ ಚಿಂತನೆ

ಖಾದಿ ಉತ್ಪಾದನಾ ಕ್ಷೇತ್ರದಲ್ಲಿ ಸೋಲಾರ್‌ ಚರಕ ಬಳಸುವ ಬಗ್ಗೆ ಚಿಂತನೆ ಇದೆ. ಈ ಸೋಲಾರ್‌ ಚರಕದಿಂದ ಹೆಚ್ಚಿನ ಉತ್ಪಾದನೆ ಸಾಧ್ಯವಾಗಲಿದೆ. ದೇಶದ ಕೆಲವೆಡೆ ಸೋಲಾರ್‌ ಚರಕ ಬಳಕೆಯಾಗುತ್ತಿದೆ. ಆದರೆ, ಇದು ಖಾದಿ ಉತ್ಪಾದನಾ ವ್ಯಾಪ್ತಿಗೆ ಒಳಪಡುವುದಿಲ್ಲ. ಖಾದಿ ಎಂದರೆ, ಕೈಯಿಂದ ನೂಲಲ್ಪಟ್ಟಹಾಗೂ ಕೈಯಿಂದಲೇ ನೇಯಲ್ಪಟ್ಟವಸ್ತ್ರವಾಗಿದೆ. ಸೋಲಾರ್‌ ಚರಕದಲ್ಲಿ ಮಿಷನ್‌ ಮೂಲಕ ನೂಲು ತೆಗೆದು, ಬಟ್ಟೆಯನ್ನು ಕೈಯಲ್ಲಿ ನೇಯಲಾಗುತ್ತದೆ. ಒಂದು ಮಿಷನ್‌ಗೆ ಅಂದಾಜು 45 ಸಾವಿರ ರು. ವೆಚ್ಚ ತಗಲುತ್ತದೆ. ಸೋಲಾರ್‌ ಚರಕದಲ್ಲಿ ಉತ್ಪಾದನೆ ಮಾಡಲು 8ರಿಂದ 10 ಯಂತ್ರ ಬೇಕಾಗುತ್ತವೆ. ಸೋಲಾರ್‌ ಚರಕದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಪ್ರಾಯೋಗಿಕವಾಗಿ ಯಶಸ್ವಿಯಾದ ಖಾದಿ ಕ್ಷೇತ್ರದಲ್ಲಿ ಬಳಸಲು ಚಿಂತಿಸಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.