ಬೆಂಗಳೂರು(ನ.05): ಕೊರೋನಾ ಸಂಕಷ್ಟದಿಂದ ಇದೀಗ ತಾನೇ ಆರ್ಥಿಕ ಚಟುವಟಿಕೆ ಹಾಗೂ ಜನರ ಜೀವನ ಸಾಮಾನ್ಯ ಸ್ಥಿತಿಗೆ ಬರುತ್ತಿರುವ ಸಂದರ್ಭದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಎಲ್ಲ ರೀತಿಯ ವಿದ್ಯುತ್‌ ಬಳಕೆದಾರರಿಗೆ ನವೆಂಬರ್‌ ಒಂದರಿಂದ ಜಾರಿಗೆ ಬರುವಂತೆ ಸರಾಸರಿ ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಿಸಿ ಬರೆ ನೀಡಿದೆ. ಪ್ರತಿ ಸ್ಲಾ್ಯಬ್‌ಗೆ ಅನುಗುಣವಾಗಿ ದರ ಹೆಚ್ಚಳವಾಗಲಿದೆ.

"

ಪ್ರತಿ ಯೂನಿಟ್‌ಗೆ 25 ಪೈಸೆ ಹೆಚ್ಚಳ ಮಾಡಿದ್ದರೂ ನೀರಾವರಿ ಪಂಪ್‌ಸೆಟ್‌ ಹೊರತುಪಡಿಸಿ ಎಲ್ಲ ಸ್ಥಾವರಗಳಿಗೆ ನಿಗದಿತ ಶುಲ್ಕವನ್ನು (ಫಿಕ್ಸಡ್‌ ಚಾಜ್‌ರ್‍) ಪ್ರತಿ ಕಿ.ವ್ಯಾ/ ಎಚ್‌ಪಿ, ಕೆವಿಎಗೆ ಕನಿಷ್ಠ 10 ರು. ಏರಿಕೆ ಮಾಡಿರುವ ಪರಿಣಾಮ ಪ್ರತಿ ಯೂನಿಟ್‌ಗೆ ಸರಾಸರಿ ಹೆಚ್ಚಳ 40 ಪೈಸೆ ಆಗುತ್ತದೆ.

ಗೃಹ ಬಳಕೆದಾರರು, ಎಲ್‌ಟಿ, ಎಚ್‌ಟಿ ಕೈಗಾರಿಕಾ ಬಳಕೆದಾರರು, ವಾಣಿಜ್ಯ ಬಳಕೆದಾರರು, ಕುಡಿಯುವ ನೀರು ಸರಬರಾಜು ಯೋಜನೆ, ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳಿಗೆ ಈ ದರ ಅನ್ವಯವಾಗಲಿದೆ.

ಕೊರೋನಾ ಹಾಗೂ ಉಪಚುನಾವಣೆ ನೀತಿ ಸಂಹಿತೆ ಜಾರಿ ಇದ್ದ ಕಾರಣದಿಂದ ಈವರೆಗೆ ದರ ಹೆಚ್ಚಳ ಆದೇಶ ಪ್ರಕಟಿಸಿರಲಿಲ್ಲ. ಈಗ ಆರ್ಥಿಕ ಚಟುವಟಿಕೆ ನಿಧಾನವಾಗಿ ಯಥಾಸ್ಥಿತಿಗೆ ಬರುತ್ತಿದ್ದಂತೆ ಆಯೋಗ ವಿದ್ಯುತ್‌ ದರ ಹೆಚ್ಚಿಸಿ ಆದೇಶಿಸಿದ್ದು, ಮುಂಬರುವ ಮಾಚ್‌ರ್‍ 31ರವರೆಗೆ ಮಾತ್ರ ಅನ್ವಯವಾಗುತ್ತದೆ.

ಈವರೆಗೆ ರಾಜ್ಯದಲ್ಲಿ ಏಕರೂಪದ ವಿದ್ಯುತ್‌ ದರ ಜಾರಿಯಾಗುತ್ತಿತ್ತು. ಆದರೆ ಈ ಬಾರಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ವಿಭಿನ್ನ ಏರಿಕೆ ಮಾಡಿದ್ದು, ಉಳಿದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ಏಕರೂಪದ ಹೆಚ್ಚಳ ಮಾಡಿದೆ.

ಬೆಂಗಳೂರು ಮೆಟ್ರೋ ಹಾಗೂ ವಿದ್ಯುತ್‌ ವಾಹನಗಳ ಚಾರ್ಜಿಂಗ್‌ ಸ್ಟೇಷನ್‌ ಹೊರತುಪಡಿಸಿ ವಿವಿಧ ಹಂತಗಳಲ್ಲಿನ ವಿದ್ಯುತ್‌ ದರಗಳ ಏರಿಕೆ ಪ್ರತಿ ಯೂನಿಟ್‌ಗೆ 20 ಪೈಸೆಯಿಂದ 25 ಪೈಸೆವರೆಗೆ ಇರುತ್ತದೆ. ತಾತ್ಕಾಲಿಕ ವಿದ್ಯುತ್‌ ಸಂಪರ್ಕಗಳಿಗೆ ಪ್ರತಿ ಯೂನಿಟ್‌ಗೆ 50 ಪೈಸೆ ಏರಿಕೆ ಮಾಡಲಾಗಿದೆ.

ದಂಡ ರದ್ದು, ರಿಯಾಯ್ತಿ ಹೆಚ್ಚಳ

*ಎಚ್‌ಟಿ ಕೈಗಾರಿಕೆಗಳಲ್ಲಿ ಹೆಚ್ಚಿನ ವಿದ್ಯುಚ್ಛಕ್ತಿ ಬಳಕೆ ಪ್ರೋತ್ಸಾಹಿಸಲು ಬೆಳಗ್ಗೆ 6ರಿಂದ 10 ಗಂಟೆ ಅವಧಿಯಲ್ಲಿ ಬಳಸುವ ವಿದ್ಯುತ್‌ಗೆ ವಿಧಿಸುತ್ತಿದ್ದ ಒಂದು ರು. ದಂಡ ವಾಪಸ್‌.

*ಬಿಬಿಎಂಪಿ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಬೀದಿ ದೀಪಗಳಿಗೆ ಎಲ್‌ಇಡಿ/ಇಂಡಕ್ಷನ್‌ ಲ್ಯಾಂಪ್‌ ಲೈಟಿಂಗ್‌ ಸ್ಥಾಪಿಸಲು ಪ್ರತಿ ಯೂನಿಟ್‌ಗೆ 100 ಪೈಸೆಯಿಂದ 105 ಪೈಸೆಗೆ ರಿಯಾಯಿತಿ ಹೆಚ್ಚಳ.

*ಎಚ್‌ಟಿ ಗ್ರಾಹಕರಿಗೆ ಜಾರಿಗೆ ತಂದಿದ್ದ ವಿಶೇಷ ಪ್ರೋತ್ಸಾಹ ಯೋಜನೆ ಮುಂದುವರಿಕೆ. ಬೆಳಗ್ಗೆ 10ರಿಂದ ಸಂಜೆ ಆರು ಗಂಟೆ ಅವಧಿಯ ವಿದ್ಯುತ್‌ ಬಳಕೆಗಾಗಿ ಮೂಲ ಬಳಕೆಗಿಂತ ಹೆಚ್ಚಿನ ಪ್ರತಿ ಯೂನಿಟ್‌ಗೆ ಒಂದು ರು. ಪ್ರೋತ್ಸಾಹ ಧನ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗಿನ ಬಳಕೆಗಾಗಿ ಎಲ್ಲ ಘಟಕಗಳಿಗೆ ಪ್ರತಿ ಯೂನಿಟ್‌ಗೆ 2 ರು. ಪ್ರೋತ್ಸಾಹ ಧನ ಮುಂದುವರಿಕೆ. ಆದರೆ ಸಂಜೆ 6ರಿಂದ ರಾತ್ರಿ 10 ಗಂಟೆವರೆಗೆ ಬಳಸುವ ಪ್ರತಿ ಯೂನಿಟ್‌ ವಿದ್ಯುತ್‌ಗೆ ಒಂದು ರು. ದಂಡ ಶುಲ್ಕ ಮುಂದುವರಿಕೆ.