* ಬಜೆಟ್ ನಲ್ಲಿ ಪೊಲೀಸರ ನೆರವಿಗೆ ಧಾವಿಸಿದ ಸಿಎಂ* ಪೊಲೀಸ್ ಸಿಬ್ಬಂದಿ ವಸತಿ ಸೌಕರ್ಯಕ್ಕೆ ಆದ್ಯತೆ* ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ
ಬೆಂಗಳೂರು(ಮೇ. 04) ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕರ್ನಾಟಕ ಬಜೆಟ್ 2022ನ್ನು (Karnataka Budget 2022) ಮಂಡಿಸಿದ್ದಾರೆ. ಗೃಹ ಇಲಾಖೆಯ ಸದೃಢತೆ ಕಡೆ ಹೆಜ್ಜೆ ಇಟ್ಟಿದ್ದಾರೆ.
ಗೃಹ ಇಲಾಖೆ (Karnataka Police)ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ನಿವಾರಣೆಗೆ ಬೊಮ್ಮಾಯಿ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ದಾರೆ. ಹಾಗಾದರೆ ಕೊರೋನಾ ಸಂದ್ರರ್ಭದಲ್ಲಿ ವಾರಿಯರ್ ಆಗಿ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿಗೆ ಬೊಮ್ಮಾಯಿ ಏನೆಲ್ಲ ಕೊಡುಗೆ ನೀಡಿದ್ದಾರೆ.
* ಪೊಲೀಸ್ ಗೃಹ ಯೋಜನೆಯ 2ನೇ ಹಂತದಲ್ಲಿ ರಾಜ್ಯಾದ್ಯಂತ ಒಟ್ಟು 10, 034 ವಸತಿಗೃಹಗಳನ್ನು 2000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ.ಗಳನ್ನು ಒದಗಿಸಲಾಗುವುದು.
* ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಹೊಸದಾಗಿ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನು ಆರಂಭಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಪ್ರಯೋಗಾಲಯದ ಪರೀಕ್ಷೆಗಳ ಸಮಯವನ್ನು ಕಡಿತಗೊಳಿಸಿ ವರದಿಗಳು ಶೀಘ್ರವಾಗಿ ತನಿಖಾಧಿಕಾರಿಗಳ ಕೈಸೇರುವಂತೆ ಮಾಡಲು ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಒದಗಿಸಲಾಗುವುದು.
* ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಾಗೂ ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಲು ಪೊಲೀಸ್ ಇಲಾಖೆಯಲ್ಲಿ ಹೊಸ ಮೊಬಿಲಿಟಿ ಯೋಜನೆಯನ್ನು 50 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
* ಬಂದೋಬಸ್ತ್ ಕರ್ತವ್ಯಕ್ಕೆ ಬರುವ ಅಧಿಕಾರಿ/ ಸಿಬ್ಬಂದಿಗಳಿಗೆ ತಂಗಲು ಅನುಕೂಲವಾಗುವಂತೆ ಬೆಳಗಾವಿಯಲ್ಲಿ ಬ್ಯಾರಕ್ ನಿರ್ಮಾಣ ಮಾಡಲಾಗುವುದು.
* ಐದು ಪೊಲೀಸ್ ಕಮೀಷನರೇಟ್‌ಗಳಲ್ಲಿ ತಲಾ 200 ಸರ್ವೇಲೆನ್ಸ್ ಕ್ಯಾಮರಾಗಳನ್ನು ಅಳವಡಿಸಲಾಗುವುದು.
* ರಾಜ್ಯದಲ್ಲಿ ಒಂದು ನೂತನ ಕೆ.ಎಸ್.ಆರ್.ಪಿ. ಮಹಿಳಾ ಕಂಪನಿಯನ್ನು ಪ್ರಾರಂಭಿಸಲಾಗುವುದು.
*ಅಗ್ನಿಶಾಮಕ ಸಿಬ್ಬಂದಿಗಳು ಅಪಾಯಕಾರಿ ಸನ್ನಿವೇಶಗಳಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಮನಗಂಡು ನಮ್ಮ ಸರ್ಕಾರವು ಅಗ್ನಿಶಾಮಕ ಸಿಬ್ಬಂದಿಗೆ ವಿಮಾ ಮೊತ್ತವನ್ನು ಒಂದು ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಿದೆ.
* ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತುರ್ತು ಸ್ಪಂದನೆಗಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ದಾವಣಗೆರೆಯಲ್ಲಿ ಒಂದು ಎಸ್.ಡಿ.ಆರ್.ಎಫ್. ಕಂಪನಿಯನ್ನು ಸ್ಥಾಪಿಸಲಾಗುವುದು.
* ಬಂಧಿಗಳ ಅಭ್ಯುದಯಕ್ಕಾಗಿ ಯೋಜನೆಯನ್ನು ರೂಪಿಸಲು ಅನುಕೂಲವಾಗುವಂತೆ ಬಂದೀಖಾನೆ ಅಭಿವೃದ್ಧಿ ಮಂಡಳಿ ಅಧಿನಿಯಮವನ್ನ ಜಾರಿಗೊಳಿಸಿ ಬಂದೀಖಾನೆ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ. ಇದಲ್ಲದೆ ಖೈದಿಗಳಿಗೆ ವೃತ್ತಿ ತರಬೇತಿ ನೀಡಿ ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ
ಸೌಲಭ್ಯ ಒದಗಿಸಲಾಗುವುದು.
* ಕಾರಾಗೃಹಗಳಲ್ಲಿ ಮೊಬೈಲ್ ಬಳಕೆ ತಡೆಯಲು ಹಾಗೂ ಇನ್ನಿತರೆ ನಿಷೇಧಿತ ವಸ್ತುಗಳ ತಪಾಸಣೆ ಮಾಡಿ ಪತ್ತೆ ಹಚ್ಚಲು ಅತ್ಯಾಧುನಿಕ ಮಾದರಿಯ ಉಪಕರಣಗಳು ಮತ್ತು ಮೊಬೈಲ್ ಜಾಮರ್‌ಗಳನ್ನು ಅಳವಡಿಸಲಾಗುವುದು.
*ಕಾರಾಗೃಹಗಳಲ್ಲಿ ಬಂದಿಗಳ ದಟ್ಟಣೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೂತನ ಕಾರಾಗೃಹ ನಿರ್ಮಿಸಲಾಗುವುದು.
