ನವದೆಹಲಿ(ಫೆ.13): ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹೋದಲ್ಲಿ ಬಂದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

‘ಚೌಕಿದಾರ್ ಚೋರ್ ಹೈ’ ಅಂತಾ ಬಾಯಿ ಬಡಿದು ಕೊಳ್ಳುತ್ತಿರುವ ರಾಹುಲ್ ಗಾಂಧಿ ಒಂದೆಡೆಯಾದರೆ, ಸುಪ್ರೀಂ ಕೋರ್ಟ್ ನಲ್ಲಿ ಅನಿಲ್ ಅಂಬಾನಿ ಪರವಾಗಿ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದಾರೆ.

ಎರಿಕ್ಸನ್ ಇಂಡಿಯಾ ಸಂಸ್ಥೆ ಅನಿಲ್ ಅಂಬಾನಿ ವಿರುದ್ಧ ಹೂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಖ್ಯಾತ ವಕೀಲರೂ ಆಗಿರುವ ಕಪಿಲ್ ಸಿಬಲ್ ಅವರು ಅನಿಲ್ ಅಂಬಾನಿ ಪರ ವಾದ ಮಂಡಿಸುತ್ತಿದ್ದಾರೆ ಎನ್ನಲಾಗಿದೆ. 

ಅಷ್ಟೇ ಅಲ್ಲದೇ ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ನಲ್ಲಿ  ಎರಿಕ್ಸನ್ ಇಂಡಿಯಾ ಪ್ರಕರಣದಲ್ಲಿ ಅನಿಲ್ ಪರ ವಾದಿಸಿದರ ಸಿಬಲ್, ಹೊರ ಬಂದು ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಹೆಸರು ಬಳಸಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಕಪಿಲ್ ಸಿಬಲ್ ಅವರ ಈ ದ್ವಂದ್ವ ನೀತಿಯನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪ್ರಶ್ನಿಸುತ್ತಿದ್ದು, ಕಾಂಗ್ರೆಸ್ ಈ ಕುರಿತು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.