ಅಂಬಾನಿ ಮನೆ ಮದ್ವೆಗಿಂತಲೂ ಅದ್ದೂರಿಯಾಗಿ ನಡೆಯಲಿದೆ ಅಮೆಜಾನ್‌ನ ಸಂಸ್ಥಾಪಕನ ಮದ್ವೆ: ವೆಚ್ಚ ಎಷ್ಟು?
ಆನ್ಲೈನ್ ಮಾರುಕಟ್ಟೆ ದೈತ್ಯ ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಜ್, ಶೀಘ್ರವೇ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ವಾಷಿಂಗ್ಟನ್: ಆನ್ಲೈನ್ ಮಾರುಕಟ್ಟೆ ದೈತ್ಯ ಅಮೆಜಾನ್‌ನ ಸಂಸ್ಥಾಪಕ ಜೆಫ್ ಬೆಜೋಜ್, ಶೀಘ್ರವೇ ತಮ್ಮ ಗೆಳತಿ, ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಅವರೊಂದಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದಕ್ಕಾಗಿ ಭಾರೀ ತಯಾರಿ ನಡೆಸಿದ್ದು, ವಿವಾಹ ಕಾರ್ಯಕ್ರಮದ ಒಟ್ಟಾರೆ ವೆಚ್ಚ 5096 ಕೋಟಿ ರು. ದಾಟಲಿದೆ ಎನ್ನಲಾಗಿದೆ.
ಅಮೆರಿಕದ ಕೊಲರಾಡೋದ ಆ್ಯಸ್ಪೆನ್ಸ್‌ನಲ್ಲಿ ಮುಂದಿನ ಶನಿವಾರ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಮೊದಲ ಪತ್ನಿ ಮೆಕೆನ್ಜಿಗೆ 2019ರಲ್ಲಿ ಡೈವೋರ್ಸ್ ನೀಡಿದ್ದ ಬೆಜೋಸ್, ಮಾಜಿ ಪತ್ನಿಗೆ 3 ಲಕ್ಷ ಕೋಟಿ ರು.ಪರಿಹಾರ ನೀಡಿದ್ದರು. ಬಳಿಕ ಸ್ಯಾಂಜೆಜ್ ಜೊತೆ ನಂಟು ಹೊಂದಿದ್ದರು. ಪ್ರಸಕ್ತ ಬೆಜೋಸ್ ಅವರ ಆಸ್ತಿ 20 ಲಕ್ಷ ಕೋಟಿ ರು.ನಷ್ಟಿದೆ. ಕೆಲ ತಿಂಗಳ ಹಿಂದೆ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದ ಖರ್ಚು ಬರೋಬ್ಬರಿ 5000 ಕೋಟಿ ರು. ದಾಟಿತ್ತು.
ಮುಂಬೈ ಪಾಲಿಕೆಗೆ ಮೈತ್ರಿ ಬಿಟ್ಟು ಏಕಾಂಗಿ ಸ್ಪರ್ಧೆ: ಉದ್ಧವ್ ಬಣ ನಿರ್ಧಾರ
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ರುಚಿ ಕಂಡಿರುವ ಮಹಾ ವಿಕಾಸ್ ಅಘಾಡಿಯ ಭಾಗವಾಗಿದ್ದ ಶಿವಸೇನೆ (ಉದ್ಧವ್ ಬಣ), ಮುಂಬರುವ ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧಿಸಲು ನಿರ್ಧರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ನಾಯಕ ಸಂಜಯ್ ರಾವುತ್, ‘ಬಿಎಂಸಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಉದ್ಧವ್ ಠಾಕ್ರೆ, ಇತರೆ ನಾಯಕರು ಮಾತುಕತೆ ನಡೆಸಿದ್ದಾರೆ. ಮುಂಬೈ ಪ್ರಾಂತ್ಯದಲ್ಲಿ ಶಿವಸೇನೆ ಈಗಲೂ ಪ್ರಬಲವಾಗಿದೆ. ಉಳಿದಂತೆ ಇತರೆ ಪಾಲಿಕೆಗಳಲ್ಲಿ ಮಹಾ ವಿಕಾಸ್ ಅಘಾಡಿಯೊಂದಿಗೇ ಸ್ಪರ್ಧಿಸಲಿದೆ’ ಎಂದು ಹೇಳಿದ್ದಾರೆ. ಮತ್ತೊಂದೆಡೆ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ, ಮೈತ್ರಿಯಲ್ಲೇ ಸ್ಪರ್ಧೆ ಮಾಡುವುದಾಗಿ ಹೇಳಿದೆ.
ಪ್ರಿಯಾಂಕಾ ಜಯಕ್ಕೆ ಕೋಮುವಾದಿ ಮುಸ್ಲಿಂ ಬೆಂಬಲ ಕಾರಣ: ಸಿಪಿಎಂ
ವಯನಾಡು: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಗೆಲುವಿನ ಹಿಂದೆ ಕೋಮುವಾದಿ ಮುಸ್ಲಿಂ ಸಂಘಟನೆಯ ಬೆಂಬಲವಿದೆ ಎಂದು ಸಿಪಿಐ(ಎಂ)ನ ಎ. ವಿಜಯರಾಘವನ್ ದೂರಿದ್ದಾರೆ. ವಯನಾಡಲ್ಲಿ ನಡೆದ ಪಕ್ಷದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ‘ರಾಹುಲ್ ಹಾಗೂ ಪ್ರಿಯಾಂಕಾ ಗೆದ್ದದ್ದು ಕೋಮುವಾದಿ ಮುಸ್ಲಿಂ ಸಂಘಟನೆಯ ಬೆಂಬಲದಿಂದ. ಅವರ ಬೆಂಬಲವಿಲ್ಲದಿದ್ದರೆ ದೆಹಲಿ ತಲುಪಿ ವಿಪಕ್ಷದ ನಾಯಕನಾಗಲು ರಾಹುಲ್‌ಗೆ ಸಾಧ್ಯವಿತ್ತೇ? ಪ್ರಿಯಾಂಕಾರ ಪ್ರಚಾರ ಸಭೆಯಲ್ಲಿ ಯಾರಿದ್ದರು?’ ಎಂದು ಪ್ರಶ್ನಿಸಿದ್ದಾರೆ. ವಯನಾಡು ಲೋಕಸಭಾ ಚುನಾವಣೆಯ ಮುನ್ನ ಕಾಂಗ್ರೆಸ್ ಹಾಗೂ ಜಮಾತ-ಇ-ಇಸ್ಲಾಮಿ ನಡುವೆ ನಂಟಿದೆ ಎಂದು ವಿಜಯನ್ ಹೇಳಿದ್ದರು.