Asianet Suvarna News Asianet Suvarna News

Karnataka Budget 2022 ಬೊಮ್ಮಾಯಿ ಚೊಚ್ಚಲ ಬಜೆಟ್‌ಗೆ ಯಾರು ಏನ್ ಹೇಳಿದ್ರು? ಬಿಎಸ್‌ವೈ ಬಣ್ಣಿಸಿದ್ದು ಹೀಗೆ

* ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
*  2,65,720 ಕೋಟಿ ಗಾತ್ರದ ಬಜೆಟ್ ಮಂಡನೆ
* ಈ ಬಗ್ಗೆ ಯಾರು ಏನು ಹೇಳಿದ್ದಾರೆ ನೋಡಿ

JDS Congress And BJP Leader Reacts On Basavaraj Bommai presented Karnataka Budget 2022 rbj
Author
Bengaluru, First Published Mar 4, 2022, 5:53 PM IST

ಬೆಂಗಳೂರು, (ಮಾ.4):  ಮುಖ್ಯಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಇಂದು (ಶುಕ್ರವಾರ) ತಮ್ಮ ಮೊದಲ ಬಜೆಟ್ ಮಂಡಿಸಿದರು.

2022-23 ನೇ ಸಾಲಿನ ಕರ್ನಾಟಕ ಬಜೆಟ್   ಗಾತ್ರ 2,65,720 ಕೋಟಿ (Karnataka Budget 2022 Size) ರೂಪಾಯಿಯಷ್ಟಿದ್ದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಗಾತ್ರವನ್ನು ಹಿಂದಿನ ವರ್ಷಕ್ಕಿಂತ ಏರಿಸಿದ್ದಾರೆ.

Karnataka Budget 2022 Live: ಮೇಕೆದಾಟು ಯೋಜನೆಗೆ ಅನುದಾನ, ಕಾಂಗ್ರೆಸ್‌ಗೆ ಬೊಮ್ಮಾಯಿ ಏಟು?

ಈವರ್ಷದ ಬಜೆಟ್ ಗಾತ್ರ ಕಳೆದ ಬಾರಿಗಿಂತ ಶೇ. 7.7 ಹೆಚ್ಚಳವಾಗಿದೆ. ಕವಿ ಗೋಪಾಲಕೃಷ್ಣ ಅಡಿಗರ ಕವನದ (Gopalakrishna Adiga) ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್ ಮಂಡನೆ ಮಾಡಿದರು.

ಇನ್ನು 2022-23ನೇ ಸಾಲಿನ ಕರ್ನಾಟಕ ಬಜೆಟ್‌ ಬಗ್ಗೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ತಮ್ಮದೇ ಅಭಿಪ್ರಾಯಗಳನ್ನ ವ್ಯಕ್ತಡಿಸಿದ್ದಾರೆ. ಯಾರೆಲ್ಲಾ ಏನೆಲ್ಲಾ ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ. 

ಸರ್ವಸ್ಪರ್ಶಿ ಬಜೆಟ್ ಎಂದ ಯಡಿಯೂರಪ್ಪ
 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ನಿರೀಕ್ಷೆಗಳಿಗೆ ತಕ್ಕಂತೆ ತಕ್ಕಂತೆ, ರಾಜ್ಯದ ಪ್ರಗತಿ, ಸ್ವಾವಲಂಬನೆಗೆ ಒತ್ತು ನೀಡುವ ಜೊತೆಗೆ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹೊಸಚೈತನ್ಯ ಮತ್ತು ಶಕ್ತಿ ನೀಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದಾರೆ.

ಸಾಂಕ್ರಾಮಿಕದ ಸವಾಲುಗಳ ನಿರ್ವಹಣೆಯ ನಡುವೆ ಈ ಬಜೆಟ್ ಅತ್ಯಂತ ಆಶಾದಾಯಕವಾಗಿದೆ. ರೈತರು, ನೀರಾವರಿ, ಮೂಲಸೌಕರ್ಯ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಠಿ, ಅಧಿಕ ಹೂಡಿಕೆಗೆ ಆದ್ಯತೆಯ ಜೊತೆಗೆ ಯುವಶಕ್ತಿ, ಮಹಿಳೆಯರು ಮತ್ತು ದುರ್ಬಲ ವರ್ಗಗಳ ಜನರ ಸಬಲೀಕರಣಕ್ಕೆ ಉತ್ತೇಜನ ನೀಡಲಾಗಿದೆ. ಕೃಷಿ, ಪೂರಕ ವಲಯಗಳಿಗೆ 33,700 ಕೋಟಿ ರೂ ಮೀಸಲು ಇಡಲಾಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 43,188 ಕೋಟಿ ರೂ, ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ ನಿಗದಿಪಡಿಸಿರುವುದು ಸ್ವಾಗತಾರ್ಹ. ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ, ಅಂತ್ಯೋದಯದ ನಮ್ಮ ಬದ್ಧತೆಗೆ ಅನುಗುಣವಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಖಚಿತಪಡಿಸುವ ಸರ್ವಸ್ಪರ್ಶಿ ಬಜೆಟ್ ಇದಾಗಿದೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ
 ಸಿಎಂ ಬಸವರಾಜ ಬೊಮ್ಮಯಿ ಮೊದಲ ಬಜೆಟ್ ಮಂಡಿಸಿದ್ದಾರೆ. ಜನರಲ್ಲಿ ಬಹಳ ನೀರಿಕ್ಷೆ ಹುಟ್ಟಿಸಿದ್ದರು. ಇದು ಅತ್ಯಂತ ನಿರಾಸವಾದ ಬಜೆಟ್. ಅಭಿವೃದ್ಧಿ ಪರವಿಲ್ಲದ ಬಜೆಟ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಬಜೆಟ್​ ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ ನವ ಕರ್ನಾಟಕದ ಬಗ್ಗೆ ಮಾತನಾಡುತ್ತಾರೆ. ಆದರೆ ಬಜೆಟ್ ನಲ್ಲಿ ಯಾವುದೇ ಮುಂದಾಲೋಚನೆಯಿಲ್ಲ. ಬಜೆಟ್ ಜನರ ಕನಸು ಕಟ್ಟಿಕೊಳ್ಳುವ ರೀತಿಯಲ್ಲಿರಬೇಕು. ಬಜೆಟ್ ಜನರ ಮುನ್ನೋಟವಾಗಿ ಇರಬೇಕು. ಇಲಾಖಾವಾರು ಬಜೆಟ್ ಮಂಡಿಸಬೇಕು. ಆದರೆ ವಲಯವಾರು ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ಬಗ್ಗೆ ಪಾರದರ್ಶಕತೆಯಿಲ್ಲ. ಯಾವುದಕ್ಕೆ ಎಷ್ಟು ಮೀಸಲಿಟ್ಟಿದ್ದಾರೆ ಗೊತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಪಂಚಸೂತ್ರಗಳು ಎಂದಿದ್ದಾರೆ. ಆದರೆ ಪಂಚಸೂತ್ರಗಳಿಗೆ ಇದು ತದ್ವಿರುದ್ಧವಾಗಿದೆ ಬಜೆಟ್ ನಲ್ಲಿ ಸಮಗ್ರ ಅರ್ಥಿಕ ಅಭಿವೃದ್ಧಿ ಕಾಣ್ತಿಲ್ಲ. ಹೊಸ ಚಿಂತನೆ, ಹೊಸ ಚೈತನ್ಯ ಕಾಣ್ತಿಲ್ಲ ಎಂದರು.

ಮುಂದಿನ ವರ್ಷ 5.18 ಲಕ್ಷ ರಾಜ್ಯದ ಕೋಟಿ ಸಾಲವಾಗುತ್ತದೆ. ಇದನ್ನು ಬಜೆಟ್​ನಲ್ಲಿ ಸಿಎಂ ಅವರೇ ಹೇಳಿದ್ದಾರೆ. 29 ಸಾವಿರ ಕೋಟಿ ಬಡ್ಡಿ ಕಟ್ಟಬೇಕಾಗುತ್ತದೆ. ಬಡ್ಡಿ ಕಟ್ಟುವುದು ಅಭಿವೃದ್ಧಿಗೆ ಸೇರುವುದಿಲ್ಲ. ಇವರ ಕಾಲದಲ್ಲಿ ಸಾಲ ಯದ್ವಾತದ್ವಾ ಹೆಚ್ಚಾಗುತ್ತದೆ. ನಾಲ್ಕು ವರ್ಷಗಳಲ್ಲಿ 2 ಲಕ್ಷ66 ಸಾವಿರ ಕೋಟಿ ಸಾಲ ಮಾಡಲಾಗಿದೆ. ಹಾಗಾಗಿಯೇ ಬಡ್ಡಿಯೂ ಹೆಚ್ಚಾಗಿದೆ. ಐದು ವರ್ಷಗಳ ಆಡಳಿತದಲ್ಲಿ ಆದಾಯ ಹೆಚ್ಚಿತ್ತು. ಆದರೆ ಇವರು ಬಂದ ನಂತರ ಆದಾಯ ಕೆಳಗಿಳಿದಿದೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಅಸಮಧಾನ ಹೊರಹಾಕಿದರು.

ಪ್ರತಾಪ್ ಸಿಂಹ ಹೇಳಿದ್ದಿಷ್ಟು
ತಾವು ಕಾಮನ್ ಮ್ಯಾನ್ ಸಿಎಂ ಎನ್ನುವುದನ್ನು ಬಸವರಾಜ ಬೊಮ್ಮಾಯಿ ಮತ್ತೆ ನಿಜ ಮಾಡಿದ್ದಾರೆ. ಬೊಮ್ಮಾಯಿ ಅವರು ಜನಪರವಾದ ಬಜೆಟ್ ಮಂಡಿಸಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಬಜೆಟ್ ಮಂಡಿಸಿದ್ದಾರೆ. ಮೈಸೂರಿಗೆ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ. ಇದು ಸರ್ವ ವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಆಗಿದೆ. ಸಂಸದನಾಗಿ ನನಗೆ ಅತಿ ಹೆಚ್ಚು ಖುಷಿ ತಂದಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ..

ಬಿಜೆಪಿ ಚುನಾವಣೆ ಪ್ರಣಾಳಿಕೆ ತರ ಈ ಬಜೆಟ್  ಎಂದ ಬಿ.ಕೆ.ಹರಿಪ್ರಸಾದ್
ಮುಂದಿನ ಚುನಾವಣಾ ದೃಷ್ಟಿಯಲ್ಲಿ ಸಿಎಂ ಬೊಮ್ಮಯಿ ಚೊಚ್ಚಲ ಬಜೆಟ್ ಮಂಡನೆ ಮಾಡಿ, ಎಲ್ಲರನ್ನೂ ಸಂತೃಪ್ತ ಪಡಿಸಲು ಮುಂದಾಗಿದ್ದಾರೆ. ಬಿಜೆಪಿ ಚುನಾವಣೆ ಪ್ರಣಾಳಿಕೆ ತರ ಈ ಬಜೆಟ್ ಇದ್ದು, ದುರ್ಬಲ ವರ್ಗದವರಿಗೆ ಅನ್ಯಾಯವಾಗಿದೆ. ಹಿಂದೆ ಬೆಂಗಳೂರು ಅಭಿವೃದ್ಧಿ ಆರು ಸಾವಿರ ಕೋಟಿ ಘೋಷಣೆ ಮಾಡಿದರು. ಅದನೇ ತಂದು ಬಜೆಟ್ ಓದಿದ್ದಾರೆ ಅಷ್ಟೇ. ಬೆಂಗಳೂರು ಅಭಿವೃದ್ಧಿಗೆ ಯಾವುದೇ ಪ್ರಮುಖ ಯೋಜನೆಗಳು ನೀಡಿಲ್ಲ. ಖಾಸಗೀಕರಣ ಮಾಡಲು ಮುಂದಾಗಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಬಜೆಟ್‌ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Follow Us:
Download App:
  • android
  • ios