ನವದೆಹಲಿ(ನ.3): ಇಂದಿಗೆ ಸರಿಯಾಗಿ 70 ವರ್ಷಗಳ ಹಿಂದೆ ಅಂದರೆ ನವೆಂಬರ್ 3, 1948 ರಂದು ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಐತಿಹಾಸಿಕ ಎನ್ನಬಹುದಾದ ಭಾಷಣ ಮಾಡಿದ್ದರು.

ತಮ್ಮ ಭಾಷಣದಲ್ಲಿ ಆಗಿನ ವಿಶ್ವದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತು ಭಾರತ ಅದಕ್ಕೆ ಸ್ಪಂದಿಸುತ್ತಿರುವ ಪರಿಯನ್ನು ಎಳೆ ಎಳೆಯಾಗಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದರು.

ನೆಹರೂ ಹೇಳಿದ್ದಿಷ್ಟು:

ಅಂದು ನೆಹರೂ ತಮ್ಮ ಭಾಷಣದಲ್ಲಿ ರಾಜಕೀಯ ಪರಿಸ್ಥಿತಿಗಳ ಅವಲೋಕನಕಕ್ಕಿಂತ, ವಿಶ್ವದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಹೆಚ್ಚು ಒತ್ತು ನೀಡಿದ್ದರು. ವಿಶ್ವ ಎರಡು ಪ್ರಬಲ ರಾಜಕೀಯ ಶಕ್ತಿಗಳ(ಅಮೆರಿಕ-ರಷ್ಯಾ) ಮಧ್ಯೆ ಧ್ರುವೀಕರಣವಾಗುತ್ತಿದ್ದ ಆ ಸಂದರ್ಭದಲ್ಲೇ ನೆಹರೂ ಅವರು ರಾಜಕೀಯ ಮೇಲಾಟ ಮರೆತು ಆರ್ಥಿಕ ಬೆಳವಣಿಗೆ ಕುರಿತು ಜಗತ್ತು ಚಿಂತಿಸಬೇಕಿದೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದರು.

‘ರಾಜಕೀಯ ಮರೆತು ಬಿಡಿ. ಜಗತ್ತಿನ ನೆಮ್ಮದಿಗಾಗಿ ಜೊತೆಗೂಡಿ ಆರ್ಥಿಕ ಬೆಳವಣಿಗೆಯತ್ತ ನಾವೆಲ್ಲಾ ಕೆಲಸ ಮಾಡಬೇಕಿದೆ. ಹಸಿವು ಮುಕ್ತ, ಆರ್ಥಿಕ ಸಮಾನತೆಯ ವಿಶ್ವವನ್ನು ಕಟ್ಟಲು ನಾವೆಲ್ಲಾ ಒಂದಾಗಿ ದುಡಿಯೋಣ..’ ಹೀಗೆ ನೆಹರೂ ಆರ್ಥಿಕ ಸಬಲೀಕರಣ ಮತ್ತು ಅದರ ಸಾರ್ವತ್ರಿಕ ಹಂಚಿಕೆ ಕುರಿತು 70 ವರ್ಷಗಳ ಹಿಂದೆಯೇ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.

ನೆಹರೂ ಅವರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಆ ಭಾಷಣಕ್ಕೆ 70 ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಜಗತ್ತು ರಾಜಕೀಯವಾಗಿಯೂ, ಸಾಮಾಜಿಕವಾಗಿಯೂ ಮತ್ತು ಆರ್ಥಿಕವಾಗಿಯೂ  ಸಾಕಷ್ಟು ಬದಲಾವಣೆ ಕಂಡಿದೆ. ರಾಜಕೀಯ ವಸಾಹತು ನೀತಿ ಇದೀಗ ಆರ್ಥಿಕ ವಸಾಹತು ನೀತಿಯಾಗಿ ಬದಲಾಗಿದೆ.

LPG ಜಾದೂ:

ಅದರಂತೆ ಭಾರತ ಕೂಡ ಆಧುನಿಕ ಜಗತ್ತಿಗೆ ತನ್ನನ್ನು ತಾನು ತೆರೆದುಕೊಂಡಿದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಭಾರತದ ಚಹರೆಯನ್ನು ಬದಲಿಸಿದೆ. ಇತರ ಕ್ಷೇತ್ರಗಳಲ್ಲಿ ಇರುವಂತೆ ಆರ್ಥಿಕ ಕ್ಷೇತ್ರದಲ್ಲೂ ಹಲವು ನ್ಯೂನ್ಯತೆಗಳಿರುವುದು ನಿಜವಾದರೂ, ಭಾರತದ ಅಗಾಧ ಆರ್ಥಿಕ ಬೆಳವಣಿಗೆ ಕಂಡು ವಿಶ್ವ ನಿಬ್ಬೆರಗಾಗಿರುವುದಂತೂ ಹೌದು.

ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ಅಭಿವೃದ್ಧಿಯ ನಾಗಾಲೋಟದ ವೇಗ ಹೆಚ್ಚಾಗಿದ್ದು, ಭಾರತವನ್ನು ಹೊರಗಿಟ್ಟು ವಿಶ್ವದ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿರುವುದು ಭಾರತದ ಆರ್ಥಿಕ ಶಕ್ತಿಗೆ ಉದಾಹರಣೆ. 

ಮೋದಿ ಮೋಡಿ:

ಕಳೆದ ನಾಲ್ಕು ವರ್ಷಗಳ ಮೋದಿ ಆಡಳಿತದ ಕುರಿತು ಅನೇಕ ವೇದಿಕೆಗಳಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಆದರೆ ಮೋದಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಕೊಳ್ಳದೇ ಗುಪ್ತಗಾಮಿನಿಯಂತೆ ದೇಶವನ್ನು ಸದೃಡಗೊಳಿಸುವತ್ತ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಬಳಿಕ, ಈ ನಾಲ್ಕು ವರ್ಷಗಳ ಅವಧಿಯಲ್ಲಿ ಆರ್ಥಿಕ ನಾಗಾಲೋಟದಲ್ಲಿ ವಿಶ್ವದ ನಾಲ್ಕು ದೈತ್ಯ ರಾಷ್ಟ್ರಗಳನ್ನು ಹಿಂದಿಕ್ಕಿದ್ದಾರೆ.

2014 ಕ್ಕೂ ಮೊದಲು ಭಾರತ ವಿಶ್ವದ ಸದೃಡ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿತ್ತು. ಇದೀಗ ನಾಲ್ಕು ರಾಷ್ಟ್ರಗಳನ್ನು ಹಿಂದಿಕ್ಕಿರುವ ಭಾರತ ವಿಶ್ವದ ಸದೃಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದೆ. ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತ ಈ ಸಾಧನೆ ಮಾಡಿದ್ದು, ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ.

2017-18 ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ. 7ರಷ್ಟು ಕಾಯ್ದುಕೊಂಡಿರುವ ಭಾರತ, ಬ್ರೆಜಿಲ್, ಇಟಲಿ, ರಷ್ಯಾ ಮತ್ತು ಫ್ರಾನ್ಸ್ ನ್ನು ಈಗಾಗಲೇ ಹಿಂದಿಕ್ಕಿದೆ. ಇನ್ನು ಈ ವರ್ಷದ ಅಂತ್ಯದವರೆಗೂ ಇದೇ ಜಿಡಿಪಿ ದರ ಕಾಯ್ದುಕೊಂಡರೆ ಬ್ರಿಟನ್ ನ್ನೂ ಕೂಡ ಭಾರತ ಹಿಂದಿಕ್ಕಲಿದೆ ಎಂಬುದು ಆರ್ಥಿಕ ತಜ್ಞರ ಅಂಬೋಣ.

ಜಿಡಿಪಿ ಬೆಳವಣಿಗೆ:

ಸದ್ಯ ಭಾರತದ ಜಿಡಿಪಿ 2018 ಆರ್ಥಿಕ ವರ್ಷದಲ್ಲಿ 2.597 ಮಿಲಿಯನ್ ಡಾಲರ್ ಇದ್ದು, ಬ್ರಿಟನ್ ಗಿಂತ ಕೇವಲ 25 ಮಿಲಿಯನ್ ಡಾಲರ್ ನಷ್ಟು ಹಿಂದೆ ಇದೆ. ಭಾರತ ಈ ವರ್ಷದ ಅಂತ್ಯದವರೆಗೆ ಇದೇ ಜಿಡಿಪಿ ಬೆಳವಣಿಗೆ ಕಾಯ್ದುಕೊಂಡರೆ ಬ್ರಿಟನ್ ನ್ನೂ ಕೂಡ ಹಿಂದಿಕ್ಕಲಿದೆ ಎಂದು ಐಎಂಎಫ್ ತಿಳಿಸಿದೆ.

ಅದರಂತೆ ಭಾರತ ಜಿಡಿಪಿ ಬೆಳವಣಿಗೆ ಕೂಡ ಅಗಾಧವಾಗಿ ಏರಿಕೆಯಾಗಿದ್ದು, 1990 ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಭಾರತದ ಜಿಡಿಪಿ ಕೇವಲ 350 ಬಿಲಿಯನ್ ಯುಎಸ್ ಡಾಲರ್ ನಷ್ಟಿತ್ತು. ಆದರೆ ಆ ನಂತರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳ ಸಹಾಯದಿಂದ ಇಂದು ಭಾರತದ ಜಿಡಿಪಿ 3 ಟ್ರಿಲಿಯನ್ ಯುಎಸ್ ಡಾಲರ್ ಗೆ ತಲುಪಿದೆ.

ಭಾರತದ ಯುವ ಸಮುದಾಯ ಹೊಸ ಜಗತ್ತಿಗೆ ತೆರೆದುಕೊಂಡಿದ್ದು, ಇಲ್ಲಿನ ಕೈಗಾರಿಕಾ ಕ್ರಾಂತಿ ಇಡೀ ವಿಶ್ವದ ಗಮನ ಸೆಳೆದಿದೆ ಎಂದ ಅಂಬಾನಿ, ತ್ವರಿತಗತಿಯ ಕೈಗಾರಿಕಾ ಕ್ರಾಂತಿ ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ.

ಇದೇ ಕಾರಣಕ್ಕೆ ಭಾರತ ವಿಶ್ವದ ಮೂರನೇ ಅತ್ಯಂತ ಶ್ರೀಮಂತ ರಾಷ್ಟ್ರವಾಗುವತ್ತ ದಾಪುಗಾಲುಜ ಇಟ್ಟಿದ್ದು, ಇನ್ನು ಕೇವಲ ಎರಡು ದಶಕದಲ್ಲಿ ಭಾರತ ವಿಶ್ವವನ್ನು ಆಳಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.