ಮತ್ತೆ ಖಾದ್ಯತೈಲ ಬೆಲೆಯೇರಿಕೆ ಶಾಕ್?
* ಸ್ಥಳೀಯ ಕೊರತೆ ನೀಗಿಸಲು ಇಂಡೋನೇಷ್ಯಾದಿಂದ ಎಣ್ಣೆ ರಫ್ತು ನಿರ್ಬಂಧ
* ಮತ್ತೆ ಖಾದ್ಯತೈಲ ಬೆಲೆಯೇರಿಕೆ ಶಾಕ್?
* ಇದರಿಂದಾಗಿ ದೇಶದಲ್ಲಿ ಪ್ರತಿ ತಿಂಗಳು 40 ಲಕ್ಷ ಟನ್ ತಾಳೆ ಎಣ್ಣೆ ಕೊರತೆ
ನವದೆಹಲಿ(ಏ.24): ಜಗತ್ತಿನ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರವಾದ ಇಂಡೋನೇಷ್ಯಾ, ಸ್ಥಳೀಯ ಎಣ್ಣೆ ಕೊರತೆ ಪೂರೈಸಲು ಏ.28 ರಿಂದ ವಿದೇಶಗಳಿಗೆ ಖಾದ್ಯತೈಲ ರಫ್ತು ಮಾಡುವುದನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಹೀಗಾಗಿ ಈಗಾಗಲೇ ಉಕ್ರೇನ್-ರಷ್ಯಾ ಯುದ್ಧದ ಕಾರಣದಿಂದಾಗಿ ಗಗನಕ್ಕೇರಿರುವ ಅಡುಗೆ ಎಣ್ಣೆಯ ಬೆಲೆ ಇನ್ನಷ್ಟುಏರಿಕೆಯಾಗುವ ಭೀತಿ ಎದುರಾಗಿದೆ.
ಉಕ್ರೇನ್ ಯುದ್ಧದಿಂದಾಗಿ ಜಾಗತಿಕ ಹಣದುಬ್ಬರದಲ್ಲಿ ದಾಖಲೆಯ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ತಮ್ಮ ದೇಶದ ನಾಗರಿಕರಿಗೆ ಆಹಾರೋತ್ಪನ್ನಗಳು ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊ ತಾಳೆಎಣ್ಣೆಯ ರಫ್ತಿನ ಮೇಲೆ ನಿರ್ಬಂಧ ಹೇರಿದ್ದಾರೆ.
ಇದರಿಂದಾಗಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಂತಹ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಿಗೆ ಭಾರೀ ಹೊಡೆತ ಬೀಳಲಿದೆ. ಇಂಡೋನೇಷ್ಯಾ ನಿರ್ಬಂಧ ಹೇರಿದ್ದ ಕಾರಣ ದೇಶದಲ್ಲಿ ಪ್ರತಿ ತಿಂಗಳು 40 ಲಕ್ಷ ಟನ್ ತಾಳೆ ಎಣ್ಣೆಯ ಕೊರತೆಯುಂಟಾಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆಯನ್ನು ಅನುಭವಿಸುತ್ತಿರುವ ಜಗತ್ತಿನ 2 ನೇ ಅತಿದೊಡ್ಡ ಅಡುಗೆ ಎಣ್ಣೆ ಉತ್ಪಾದಕ ರಾಷ್ಟ್ರ ಮಲೇಷ್ಯಾಗೆ ಈ ಕೊರತೆಯನ್ನು ನೀಗಿಸುವುದು ಅಸಾಧ್ಯವಾಗಿದೆ. ಈ ಮೊದಲು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದ ಸೂರ್ಯಕಾಂತಿ ಎಣ್ಣೆಯೂ ಲಭ್ಯವಾಗದ ಹಿನ್ನೆಲೆಯಲ್ಲಿ ಏರಿಕೆಯಾದ ಖಾದ್ಯತೈಲದ ಬೆಲೆಯು ಇನ್ನಷ್ಟುಏರಿಕೆಯಾಗುವುದು ನಿಶ್ಚಿತವಾಗಿದೆ.
ಲಂಕಾಗೆ ಭಾರತದ 3800 ಕೋಟಿ ನೆರವು
ತೀವ್ರ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕಾಗೆ ಇಂಧನ ಖರೀದಿಸಲು ನೆರವಾಗುವಂತೆ ಹೆಚ್ಚುವರಿ 3800 ಕೋಟಿ (500 ಮಿಲಿಯನ್ ಡಾಲರ್)ರು. ಹಣವನ್ನು ನೀಡಲು ಭಾರತ ಒಪ್ಪಿಗೆ ಸೂಚಿಸಿದೆ ಎಂದು ಶುಕ್ರವಾರ ಶ್ರೀಲಂಕಾದ ಹಣಕಾಸು ಸಚಿವ ಆಲಿ ಸಬ್ರಿ ತಿಳಿಸಿದ್ದಾರೆ. ಈಗಾಗಲೇ ಭಾರತ, ಶ್ರೀಲಂಕಾ ಏಷ್ಯನ್ ಕ್ಲಿಯರಿಂಗ್ ಯೂನಿಯನ್‌ಗೆ ಪಾವತಿಸಬೇಕಿದ್ದ 1.5 ಬಿಲಿಯನ್ ಹಣವನ್ನು ನೀಡಲು ಮುಂದಾಗಿದೆ.
ಇತ್ತೀಚೆಗೆ ಆರ್ಥಿಕ ದಿವಾಳಿತನ ಮತ್ತು ರಾಜಕೀಯ ಪ್ರಕ್ಷುಬ್ಧತೆ ಯಿಂದಾಗಿ ಶ್ರೀಲಂಕಾದ ವಿದೇಶಿ ವಿನಿಮಯಗಳು ಕುಸಿತ ಕಂಡ ಬಳಿಕ, ಆಮದುಗಳಿಗೆ ಹಣ ಪಾವತಿಸಲು ಲಂಕಾ ಹೆಣಗಾಡುತ್ತಿದೆ. ಇದು ದೇಶದಲ್ಲಿ ಹಣದುಬ್ಬರ ಹೆಚ್ಚಾಗುವಂತೆ ಮಾಡಿದೆ . ಶ್ರೀಲಂಕಾದ ಆರ್ಥಿಕತೆ ಸ್ಥಿರತೆ ಕಾಯ್ದುಕೊಳ್ಳಲು ಕನಿಷ್ಠ 30 ಸಾವಿರ ಕೋಟಿ ರು. ಬೇಕಿದೆ. ಇದಕ್ಕಾಗಿ ಸಬ್ರಿ ವಿಶ್ವಬ್ಯಾಂಕ್ ಹಾಗೂ ಚೀನಾ ಮತ್ತು ಜಪಾನ್ ನಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆ ಆರ್ಥಿಕ ನೆರವಿಗಾಗಿ ಮಾತುಕತೆ ನಡೆಸುತ್ತಿದ್ದಾರೆ.