ನವದೆಹಲಿ(ಸೆ.25): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗುತ್ತಿರುವ ಗಂಭೀರ ಪರಿಣಾಮಗಳ ಹೊರೆ ಇಳಿಸಿಕೊಳ್ಳಲು, ತೈಲ ಆಮದು ಪ್ರಮಾಣವನ್ನೇ ಕೆಲ ದಿನಗಳ ಕಾಲ ಕಡಿತಗೊಳಿಸಲು ತೈಲ ಕಂಪನಿಗಳು ಚಿಂತನೆ ನಡೆಸುತ್ತಿವೆ. 

ತನ್ನ ಅಗತ್ಯದ ಶೇ.81ರಷ್ಟು ತೈಲೋತ್ಪನ್ನಗಳಿಗೆ ವಿದೇಶಗಳನ್ನೇ ನಂಬಿರುವ ಭಾರತ, ವಿಶ್ವದಲ್ಲೇ ಕಚ್ಚಾತೈಲ ಆಮದು ಮಾಡಿಕೊಳ್ಳುವ ದೇಶಗಳ ಪೈಕಿ 3ನೇ ಸ್ಥಾನದಲ್ಲಿದೆ. 

ಕಳೆದ ಕೆಲ ತಿಂಗಳಲ್ಲಿ ಕಚ್ಚಾ ತೈಲ ಬೆಲೆ ಸತತವಾಗಿ ಏರಿಕೆಯಾಗಿರುವುದು ಜೊತೆಗೆ ಅದೇ ವೇಳೆ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿದಿರುವುದು ಜನಸಾಮಾನ್ಯರಿಗೆ ಹೊರೆ ಹೊರಿಸಿರುವ ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಅಪಾಯ ತಂದಿದೆ. 

ಹೀಗಾಗಿ ಬೇಡಿಕೆ ಪೂರ್ಣಗೊಳಿಸುವಷ್ಟುಸಂಗ್ರಹ ಇಟ್ಟುಕೊಂಡು ಸ್ವಲ್ಪ ಪ್ರಮಾಣದಲ್ಲಿ ಕಚ್ಚಾತೈಲ ಆಮದು ಕಡಿತಕ್ಕೆ ಚಿಂತಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ನ ಸಂಜೀವ್‌ ಸಿಂಗ್‌ ಹೇಳಿದ್ದಾರೆ.