ವಾಷಿಂಗ್ಟನ್(ಅ.17): ಭಾರತದ ಹಣ ಬಳಸಿ ಮಧ್ಯಪ್ರಾಚ್ಯದ ಶಾಂತಿ ಹಾಳು ಮಾಡುವ ಇರಾನ್ ಹುನ್ನಾರದಲ್ಲಿ ಭಾರತ ಕೈಜೋಡಿಸುವುದಿಲ್ಲ ಎಂದು ಅಮೆರಿಕ ವಿಶ್ವಾಸ ವ್ಯಕ್ತಪಡಿಸಿದೆ.

ನವೆಂಬರ್ 4 ರಂದು ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಸಂಪೂರ್ಣವಾಗಿ ಜಾರಿಯಾಗಲಿದ್ದು, ನಿರ್ಬಂಧ ಜಾರಿಯಾದ ಬಳಿಕವೂ ಇರಾನ್ ನಿಂದ ತೈಲ ಆಮದು ಮಾಡಿಕೊಳ್ಳಲಾಗುವುದು ಎಂದು ಭಾರತ ಸ್ಪಷ್ಟಪಡಿಸಿದೆ.

ಭಾರತದ ಈ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ತನ್ನ ಹಣ ಬಳಸಿ ಇರಾನ್ ಮಧ್ಯಪ್ರಾಚ್ಯದಲ್ಲಿ ಅಶಾಂತಿ ಕದಡಲು ಭಾರತ ಅವಕಾಶ ನೀಡುವುದಿಲ್ಲ ಎಂಬ ಆಶಾವಾದವಿದೆ ಎಂದು ಅಮೆರಿಕ ಹೇಳಿದೆ.

ಇರಾನ್ ಮಧ್ಯಪ್ರಾಚ್ಯವನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದು, ತನ್ನ ಅಣು ಕಾರ್ಯಕ್ರಮಗಳನ್ನು ಬಳಸಿ ಇತರ ರಾಷ್ಟ್ರಗಳನ್ನು ಹೆದರಿಸುವ ಪ್ರಯತ್ನ ನಡೆಸಿದೆ ಎಂದು ಅಮೆರಿಕ ಆರೋಪಿಸಿದೆ. ಇದಕ್ಕಾಗಿ ಅದು ತೈಲ ಆಮದಿಗಾಗಿ ಭಾರತ ಕೊಡುತ್ತಿರುವ ಹಣವನ್ನೇ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಹೇಳಿದೆ.

ಹೀಗಾಗಿ ಭಾರತ ತನ್ನ ಮಿತ್ರರಾಷ್ಟ್ರವಾಗಿದ್ದು, ಇರಾನ್ ನ ಈ ಹಿಂಸಾತ್ಮಕ ಪ್ರವೃತ್ತಿಯನ್ನು ಹತ್ತಿಕ್ಕುವಲ್ಲಿ ಸಹಾಯ ಮಾಡಲಿದೆ ಎಂಬ ವಿಶ್ವಾಸವನ್ನು ಅಮೆರಿಕ ವ್ಯಕ್ತಪಡಿಸಿದೆ.