ನವದೆಹಲಿ(ಅ.30): ಭಾರತ ವಿಶ್ವದ ಮೂರನೇ ಶ್ರೀಮಂತ ರಾಷ್ಟ್ರವಾಗುವತ್ತ ದಾಪುಗಾಲು ಇಡುತ್ತಿದ್ದು, ಈಗಾಗಲೇ ಕೈಗಾರಿಕಾ ಕ್ರಾಂತಿ ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ 24ನೇ ಮೊಬಿಕಾಂ ಸಮಾವೇಶದಲ್ಲಿ ಮಾತನಾಡಿದ ಅಂಬಾನಿ, ಭಾರತದ ಡಿಜಿಟಲ್ ಕ್ರಾಂತಿಗೆ ಪರ್ಯಾಯ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಯಾವುದೇ ದೇಶದಲ್ಲಿ ಇಷ್ಟು ವೇಗದ ಡಿಜಿಟಲ್ ಕ್ರಾಂತಿ ನಡೆದಿಲ್ಲ ಎಂದು ಅಂಬಾನಿ ಹೇಳಿದರು.

ಭಾರತದ ಯುವ ಸಮುದಾಯ ಹೊಸ ಜಗತ್ತಿಗೆ ತೆರೆದುಕೊಂಡಿದ್ದು, ಇಲ್ಲಿನ ಕೈಗಾರಿಕಾ ಕ್ರಾಂತಿ ಇಡೀ ವಿಶ್ವದ ಗಮನ ಸೆಳೆದಿದೆ ಎಂದ ಅಂಬಾನಿ, ತ್ವರಿತಗತಿಯ ಕೈಗಾರಿಕಾ ಕ್ರಾಂತಿ ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ್ದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.

1990 ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಭಾರತದ ಜಿಡಿಪಿ ಕೇವಲ 350 ಬಿಲಿಯನ್ ಯುಎಸ್ ಡಾಲರ್ ನಷ್ಟಿತ್ತು. ಆದರೆ ಆ ನಂತರದ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳ ಸಹಾಯದಿಂದ ಇಂದು ಭಾರತದ ಜಿಡಿಪಿ 3 ಟ್ರಿಲಿಯನ್ ಯುಎಸ್ ಡಾಲರ್ ಗೆ ತಲುಪಿದೆ ಎಂದು ಅಂಬಾನಿ ನುಡಿದರು.

ಇದೇ ಕಾರಣಕ್ಕೆ ಭಾರತ ವಿಶ್ವದ ಮೂರನೇ ಅತ್ಯಂತ ಶ್ರೀಮಂತ ರಾಷ್ಟ್ರವಾಗುವತ್ತ ದಾಪುಗಾಲುಜ ಇಟ್ಟಿದ್ದು, ಇನ್ನು ಕೇವಲ ಎರಡು ದಶಕದಲ್ಲಿ ಭಾರತ ವಿಶ್ವವನ್ನು ಆಳಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.