ಆಯ್ತ್ರಪ್ಪಾ ನಿಮ್ ದುಡ್ಡೇ ಕೊಡಿ: ಇರಾನ್‌ಗೆ 'ಅರ್ಥ'ವಾದರು ಮೋದಿ!
ಇನ್ಮುಂದೆ ಇರಾನ್ ಜೊತೆ ರೂಪಾಯಿಯಲ್ಲೇ ಭಾರತದ ವ್ಯವಹಾರ| ಇರಾನ್ ತೈಲಕ್ಕೆ ರೂಪಾಯಿಯಲ್ಲೇ ಪಾವತಿಸಲು ಒಪ್ಪಿಗೆ| ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ಭಾರತ-ಇರಾನ್| ಇರಾನ್‌ನ ಯುಸಿಒ ಬ್ಯಾಂಕ್ ಖಾತೆಗೆ ರೂಪಾಯಿಯಲ್ಲೇ ಪಾವತಿ| ಭಾರತದಿಂದ ಇರಾನ್‌ಗೆ ಆಹಾರ ಧಾನ್ಯ, ಔಷಧ, ವೈದ್ಯಕೀಯ ಉಪಕರಣ ರಫ್ತು
ನವದೆಹಲಿ(ಡಿ.07): ಮಹತ್ವದ ಬೆಳವಣಿಗೆಯೊಂದರಲ್ಲಿ ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರೂಪಾಯಿಯಲ್ಲೇ ಪಾವತಿ ಮಾಡಲು ಭಾರತ ಇರಾನ್ ನಡುವಿನ ಒಪ್ಪಂದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.
ಇರಾನ್ ಜೊತೆ ಭಾರತ ರೂಪಾಯಿಯಲ್ಲೇ ವ್ಯವಹಾರ ಮಾಡಲಿದೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದವು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇರಾನ್ ಜೊತೆಗೆ ಈ ಒಪ್ಪಂದವನ್ನು ಅಧಿಕೃತಗೊಳಿಸಿದೆ.
ಇರಾನ್ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ವಿಧಿಸಿದ್ದರೂ, ಭಾರವೂ ಸೇರಿದಂತೆ 7 ರಾಷ್ಟ್ರಗಳಿಗೆ ಇರಾನ್‌ನಿಂದಲೇ ತೈಲ ಆಮದು ಮಾಡಿಕೊಳ್ಳುವುದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಭಾರತ-ಇರಾನ್ ಈ ಒಪ್ಪಂದಕ್ಕೆ ಸಹಿ ಹಾಕಿವೆ.
ಇನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಭಾರತ ಇರಾನ್‌ನ ನ್ಯಾಷನಲ್ ಇರಾನಿಯನ್ ಆಯಿಲ್ ಕೋ (ಎನ್ಐಒಸಿ)ದ ಯುಸಿಒ ಬ್ಯಾಂಕ್ ಖಾತೆಗೆ ರೂಪಾಯಿಯಲ್ಲೇ ಪಾವತಿ ಮಾಡಲಿದೆ.
ಇದೇ ವೇಳೆ ಅಮೆರಿಕ ನಿರ್ಬಂಧದ ಹೊರತಾಗಿಯೂ ಭಾರತ ಇರಾನ್‌ಗೆ ಆಹಾರ ಧಾನ್ಯಗಳು, ಔಷಧ, ವೈದ್ಯಕೀಯ ಉಪಕರಣ ಸೇರಿದಂತೆ ಹಲವು ಮಹತ್ವದ ವಸ್ತುಗಳನ್ನು ರಫ್ತು ಮಾಡಲಿದೆ.
ತೈಲ ಬೆಲೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಭಾರತ ಇರಾನ್‌ನೊಂದಿಗೆ ತೈಲ ಆಮದಿಗೆ ರೂಪಾಯಿಯಲ್ಲೇ ಪಾವತಿ ಮಾಡಲು ಒಪ್ಪಿಗೆ ಸೂಚಿಸಿರುವುದು ಮಹತ್ವದ ನಡೆಯಾಗಿದೆ.