ನವದೆಹಲಿ(ಸೆ.12): ಓಲಾ, ಉಬರ್ ಬಳಕೆ ಹೆಚ್ಚಾಗಿರುವುದರಿಂದ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ.

ಈ ಮಧ್ಯೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶಕ್ಕೆ ಮೂರ್ಖ ಸಿದ್ಧಾಂತಗಳ ಅವಶ್ಯಕತೆ ಇಲ್ಲ ಎಂದು ಹರಿಹಾಯ್ದಿದ್ದಾರೆ.

ದೇಶದಲ್ಲಿ ಆರ್ಥಿಕತೆ ಕುಸಿದಿರುವ ಈ ಸಂದರ್ಭದಲ್ಲಿ ಸುಳ್ಳು ಪ್ರಚಾರ, ಪ್ರಚೋದನಾತ್ಮಕ ಸುದ್ದಿಗಳು, ಮೂರ್ಖ ಸಿದ್ಧಾಂತಗಳು ನಮಗೆ ಬೇಕಾಗಿಲ್ಲ. ಆರ್ಥಿಕತೆಯನ್ನು ಸರಿಪಡಿಸುವ ವಾಸ್ತವ ಯೋಜನೆಯ ಅಗತ್ಯವಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ತಳಮಟ್ಟದ ವಾಸ್ತವ ಯೋಜನೆಗಳನ್ನು ರೂಪಿಸಿ ಅದನ್ನು ಸರಿಯಾಗಿ ಜಾರಿಗೆ ತರುವ ಮೂಲಕ ಆರ್ಥಿಕತೆಯನ್ನು ಸರಿಪಡಿಸಬೇಕಾಗಿದೆ ಎಂದು ರಾಹುಲ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಅಲ್ಲದೇ ಆರ್ಥಿಕ ಸುಧಾರಣೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಸಲಹೆಗಳ ಕುರಿತು ರಾಹುಲ್ ತಮ್ಮ ಟ್ವೀಟ್’ನಲ್ಲಿ ಪ್ರಸ್ತಾಪಿಸಿದ್ದಾರೆ.