ನವದೆಹಲಿ(ನ.3): ಅಮೆರಿಕದ ಆರ್ಥಿಕ ದಿಗ್ಬಂಧನದ ಹೊರತಾಗಿಯೂ ಭಾರತಕ್ಕೆ ಇರಾನ್ ತೈಲ ಬರುವುದು ಈಗಾಗಲೇ ಖಚಿತವಾಗಿದೆ. ಆದರೂ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಜ್ಜಾಗುವಂತೆ ಪ್ರಧಾನಿ ನರೇಂದ್ರ ಮೋದಿ ತೈಲ ಕಂಪನಿಗಳಿಗೆ ಸೂಚನೆ ನೀಡಿದ್ದು, ಅದರಂತೆ ಸೌದಿ ಅರೇಬಿಯಾದಿಂದ ಹೆಚ್ಚಿನ ಕಚ್ಚಾ ತೈಲ ಆಮದಿಗೆ ಭಾರತ ಮುಂದಾಗಿದೆ.

ನವೆಂಬರ್‌ನಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಹೆಚ್ಚುವರಿ 4 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ರಫ್ತಾಗಲಿದ್ದು, ಒಂದು ವೇಳೆ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತೈಲ ವ್ಯತ್ಯಯ ಉಂಟಾದರೆ ಇಂಧನ ಸ್ಥಿರತೆ ಕಾಯ್ದುಕೊಳ್ಳಲು ಇದು ಸಹಾಯಕಾರಿಯಾಗಲಿದೆ. 

ಚೀನಾದ ನಂತರ ಭಾರತದ ವಿಶ್ವದ ಅತಿ ಹೆಚ್ಚು ಇಂಧನ ಬೇಡಿಕೆ ಹೊಂದಿರುವ ರಾಷ್ಟ್ರವಾಗಿದ್ದು, ಇರಾನ್‌ನಿಂದ ಅತಿ ಹೆಚ್ಚು ತೈಲ ಖರೀದಿಸುವ 2 ನೇ ರಾಷ್ಟ್ರ ಕೂಡ ಆಗಿದೆ.

ಭಾರತದ ತೈಲ ಕಂಪನಿಗಳಾದ ರಿಲಯನ್ಸ್, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪ್, ಭಾರತ್ ಪೆಟ್ರೋಲಿಯಂ, ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್ಸ್ ಸಂಸ್ಥೆಗಳು ನವೆಂಬರ್ ತಿಂಗಳಲ್ಲಿ ತಲಾ 1 ಮಿಲಿಯನ್ ಬ್ಯಾರೆಲ್ ತೈಲ ಪೂರೈಕೆಗೆ ಸೌದಿ ಅರೇಬಿಯಾಗೆ ಮನವಿ ಮಾಡಿವೆ. 

ಈ ಹಿಂದೆ ಭಾರತದ ತೈಲ ರಿಫೈನರಿಗಳು ಇರಾನ್‌ನಿಂದ 9 ಮಿಲಿಯನ್ ಬ್ಯಾರೆಲ್ ತೈಲ ಪೂರೈಕೆಗೆ ಬೇಡಿಕೆ ಇಟ್ಟಿತ್ತು. ಆದರೆ ಅಮೆರಿಕದ ನಿರ್ಬಂಧ ಶೀಘ್ರದಲ್ಲೇ ಜಾರಿಗೆ ಬರುವ ಹಿನ್ನೆಲೆಯಲ್ಲಿ ಭಾರತ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದೆ.