ನವದೆಹಲಿ(ನ.19): ಸತತ 29 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಇದು ಜನಸಾಮಾನ್ಯರಲ್ಲಿ ತೈಲದರ ಇಳಿಕೆಯ ಹೊಸ ಭರವಸೆ ಮೂಡಿಸಿರುವುದು ಸುಳ್ಳಲ್ಲ.

ಪೈಸೆಗಳ ಲೆಕ್ಕಾಚಾರದಲ್ಲಿ ಸತತವಾಗಿ 29 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಆದರೆ 29 ದಿನಗಳಿಂದ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಟ್ಟಾರೆಯಾಗಿ ಲೆಕ್ಕ ಹಾಕಿದರೆ ಖಂಡಿತವಾಗಿ ಇದು ಗಮನಾರ್ಹ ಇಳಿಕೆ ಎಂಬುದು ಗೋಚರವಾಗುತ್ತದೆ.

ಕಳೆದ 29 ದಿನಗಳಿಂದ ದರ ಇಳಿಯುತ್ತಿದೆ. ಈ ಅವಧಿಯಲ್ಲಿ ಪೆಟ್ರೋಲ್ ದರದಲ್ಲಿ ಒಟ್ಟಾರೆ 7.29 ರೂ. ಮತ್ತು ಡೀಸೆಲ್ 3.89 ರೂ. ಕಡಿಮೆಯಾಗಿದೆ.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ತೀವ್ರ ಹೆಚ್ಚಳವಾದ ಪರಿಣಾಮ, ಆಗಸ್ಟ್‌ ಮಧ್ಯ ಭಾಗದಿಂದ ಸತತ ಎರಡು ತಿಂಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರಗಳು ತೀವ್ರ ಏರಿಕೆಯಾಗಿದ್ದವು.

ಅ.18ರಿಂದ ಇಂಧನ ದರಗಳು ಇಳಿಕೆಯಾಗುತ್ತಿದ್ದು, ಪೆಟ್ರೋಲ್ ದರದಲ್ಲಿ ಪೆಟ್ರೋಲ್ ದರದಲ್ಲಿ ಒಟ್ಟಾರೆ 7.29 ರೂ. ಮತ್ತು ಡೀಸೆಲ್ 3.89 ರೂ. ಕಡಿಮೆಯಾಗಿದೆ. ಅಂದರೆ ಜನಸಾಮಾನ್ಯರ ಬಯಕೆಯಂತೆ ತೈಲದರ ಇಳಿಕೆಯಾಗುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಮುಂದಿನ ಕೆಲವು ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇನ್ನಷ್ಟು ಇಳಿಕೆಯಾಗುವ ಅವಕಾಶಗಳಿವೆ ಎಂದು ಉದ್ಯಮ ಮೂಲಗಳು ಹೇಳಿವೆ. 

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 67.10 ಡಾಲರ್‌ ಇದೆ. ಕಳೆದ 15 ದಿನಗಳಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾಗುತ್ತಿದ್ದು, ಇರಾನ್‌ ಮೇಲಿನ ನಿರ್ಬಂಧವನ್ನು ಅಮೆರಿಕ ಕೊಂಚ ಸಡಿಲಿಸಿರುವ ಪರಿಣಾಮ, ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್‌, ಟರ್ಕಿ, ಇಟಲಿ ಸೇರಿದಂತೆ ಇರಾನ್ ತೈಲದ ಮೇಲೆ ಅವಲಂಬಿತವಾಗಿರುವ ರಾಷ್ಟ್ರಗಳಿಗೆ ನಿರಾಳತೆ ತಂದಿದೆ.