ನವದೆಹಲಿ[ಸೆ.14]: ಕುಸಿಯುತ್ತಿರುವ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿರುವಾಗಲೇ, ಭಾರತದ ಆರ್ಥಿಕಾಭಿವೃದ್ಧಿ ದರವು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ದುರ್ಬಲವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಪ್ರತಿಪಾದಿಸಿದೆ.

ಕಾರ್ಪೊರೇಟ್‌, ಪರಿಸರ ನಿಯಂತ್ರಣದ ಅನಿಶ್ಚಿತತೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ದೀರ್ಘಕಾಲೀನ ದುರ್ಬಲತೆಗಳಿಂದಾಗಿ ಭಾರತಕ್ಕೆ ಈ ಸಂಕಟ ಬಂದೊದಗಿದೆ ಎಂದು ಐಎಂಎಫ್‌ ಅಭಿಪ್ರಾಯಪಟ್ಟಿದೆ. ಆದಾಗ್ಯೂ, ವಿಶ್ವದ ಇತರೆ ರಾಷ್ಟ್ರಗಳು ವಿಶೇಷವಾಗಿ ಚೀನಾದ ಆರ್ಥಿಕತೆಗಿಂತಲೂ ಭಾರತದ ಆರ್ಥಿಕತೆ ಹೆಚ್ಚು ತ್ವರಿತವಾಗಿ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ ಎಂದು ಇದೇ ವೇಳೆ ಐಎಂಎಫ್‌ ಹೇಳಿದೆ.

ಆರ್ಥಿಕಾಭಿವೃದ್ಧಿ ಕುರಿತಾದ ಹೊಸ ಅಂಕಿ ಅಂಶಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ, ಕಾರ್ಪೊರೇಟ್‌, ಪರಿಸರ ನಿಯಂತ್ರಣಕ್ಕೆ ಸಂಬಂಧಿಸಿದ ಅನಿಶ್ಚಿತತೆ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ದೀರ್ಘಕಾಲದ ದೌರ್ಬಲ್ಯಗಳಿಂದಾಗಿ ಇತ್ತೀಚೆಗಿನ ಭಾರತದ ಆರ್ಥಿಕತೆಯು ಅಂದುಕೊಂಡದ್ದಕ್ಕಿಂತಲೂ ಹೆಚ್ಚು ಮಂದಗತಿಯಲ್ಲಿದೆ ಎಂದು ಐಎಂಎಫ್‌ ವಕ್ತಾರ ಗೆರಿ ರೈಸ್‌ ಸಾರಿದ್ದಾರೆ. ಅಲ್ಲದೆ, ಭಾರತದ ಆರ್ಥಿಕಾಭಿವೃದ್ಧಿ ಮೇಲೆ ಐಎಂಎಫ್‌ ನಿಗಾ ವಹಿಸಲಾಗಿದೆ ಎಂದೂ ಹೇಳಿದರು.