ನವದೆಹಲಿ[ಆ.21]: ಮಹಿಳೆಯರ ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯಕ್ಕಾಗಿ ಬಳಕೆ ಮಾಡಲಾಗುವ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸಾಮಾನ್ಯವಾಗಿ ಸಿಂಥೆಟಿಕ್‌ ಅಥವಾ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿರುತ್ತದೆ. ಆದರೆ, ಇದೇ ಮೊದಲ ಬಾರಿಗೆ ದೆಹಲಿಯ ಐಐಟಿ ಪ್ರಾಧ್ಯಾಪಕರ ಸಹಕಾರದೊಂದಿಗೆ ಸ್ಟಾರ್ಟಪ್‌ವೊಂದು ಬಾಳೆಹಣ್ಣಿನ ನಾರನ್ನು ಬಳಸಿ ವಿಶೇಷ ನ್ಯಾಪ್‌ಕಿನ್‌ ಅನ್ನು ತಯಾರಿಸಿದೆ. ಇದರ ವಿಶೇಷತೆಯೆಂದರೆ, ಈ ನ್ಯಾಪ್‌ಕಿನ್‌ ಅನ್ನು 2 ವರ್ಷಗಳವರೆಗೂ 120 ಬಾರಿ ಪುನಃ ಬಳಕೆ ಮಾಡಬಹುದಾಗಿದೆ ಎಂದು ಉತ್ಪಾದಕರು ತಿಳಿಸಿದ್ದಾರೆ.

ದೆಹಲಿ ಐಐಟಿ ಪ್ಯಾಧ್ಯಾಪಕರ ಸಹಕಾರದೊಂದಿಗೆ ‘ಸಾನ್‌ಫೆ’ ಎಂಬ ಸ್ಟಾರ್ಟಪ್‌ ಕಂಪನಿ ಅಭಿವೃದ್ಧಿಪಡಿಸಲಾಗಿರುವ ಈ ನ್ಯಾಪ್‌ಕಿನ್‌ನ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದ್ದು, 2 ನ್ಯಾಪ್‌ಕಿನ್‌ಗಳನ್ನೊಳಗೊಂಡ ಒಂದು ಪಾಕೆಟ್‌ನ ಬೆಲೆ 199 ರು. ಆಗಿದೆ.

ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯಾಪ್‌ಕಿನ್‌ಗಳು ಸಿಂಥೆಟಿಕ್‌ ಹಾಗೂ ಪ್ಲಾಸ್ಟಿಕ್‌ ಕಚ್ಚಾ ವಸ್ತುಗಳಿಂದ ತಯಾರಿಸಲ್ಪಟ್ಟಿರುತ್ತವೆ. ಹೀಗಾಗಿ, ಇವುಗಳು ಪರಿಸರದಲ್ಲಿ ಕೊಳೆತು ಹೋಗಲು 50-60 ವರ್ಷಗಳ ದೀರ್ಘಾಕಾಲೀನ ಅಗತ್ಯವಿದೆ. ಅಲ್ಲದೆ, ಬಳಕೆ ಮಾಡಲಾದ ಈ ನ್ಯಾಪ್‌ಕಿನ್‌ಗಳನ್ನು ಕಸದ ತೊಟ್ಟಿಗಳು, ಬಹಿರಂಗ ಸ್ಥಳಗಳಲ್ಲಿ, ನೀರಿನ ಮೂಲಗಳಲ್ಲಿ, ಶೌಚಾಲಯಗಳಲ್ಲಿ ಬಿಸಾಡಲಾಗುತ್ತದೆ. ಅಲ್ಲದೆ, ಇವುಗಳಿಗೆ ಬೆಂಕಿ ಸಹ ಇಡಲಾಗುತ್ತದೆ. ಇದರಿಂದ ಪರಿಸರಕ್ಕೆ ಪರಿಸರಕ್ಕೆ ಭಾರೀ ಹಾನಿಯಾಗುತ್ತದೆ ಎಂದು ಸ್ಟಾರ್ಟಪ್‌ ಸಂಸ್ಥೆಯ ಆರ್ಕಿಟ್‌ ಅಗರ್‌ವಾಲ್‌ ಹೇಳಿದರು.