ಮನೆ ಖರೀದಿದಾರರಿಗೆ ಹಬ್ಬದಲ್ಲಿ ಕಹಿ ಸುದ್ದಿ! ಮುಂದಿನ ಏಪ್ರೀಲ್ ನಿಂದ ಏರಿಕೆಯಾಗಲಿವೆ ಹೊಸ ಮನೆ ಬೆಲೆಗಳು! ಆರ್‌ಬಿಐ ವರದಿಯಲ್ಲಿ ಮನೆ ದರ ಏರಿಕೆ ಪ್ರಸ್ತಾಪ! ಬೆಂಗಳೂರು, ಮುಂಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ದರ ಏರಿಕೆ

ಬೆಂಗಳೂರು(ಅ.19): ಹೇಳಿ ಕೇಳಿ ಇದು ಹಬ್ಬದ ಸೀಸನ್. ಹಬ್ಬಕ್ಕಾಗಿ ಬಟ್ಟೆ ಬರೆಗಳಿಂದ ಹಿಡಿದು, ಬೈಕು, ಕಾರುಗಳಷ್ಟೇ ಏಕೆ ಹೊಸ ಮನೆ ಖರೀದಿಗೂ ಭಾರತೀಯರು ಮುಂದಾಗುವುದು ಸಾಮಾನ್ಯ ಸಂಗತಿ. ಆದರೆ ಹಬ್ಬದ ಸಂದರ್ಭದಲ್ಲಿ ಮನೆ ಖರೀದಿಸುವ ಯೋಜನೆ ಹಾಕಿಕೊಂಡಿರುವವರಿಗೆ ಇಲ್ಲೊಂದು ಕಹಿ ಸುದ್ದಿ ಇದೆ.

ಆರ್‌ಬಿಐ ಬಹಿರಂಗಪಡಿಸಿರುವ ಮಾಹಿತಿ ಪ್ರಕಾರ, ಮುಂದಿನ ಏಪ್ರಿಲ್ ವೇಳೆಗೆ ಮನೆ‌ಗಳ‌ ಬೆಲೆಯಲ್ಲಿ ಶೇ.5.3 ರಷ್ಟು ಏರಿಕೆಯಾಗಲಿದೆಯಂತೆ. ಭಾರತದ ಪ್ರಮುಖ 10 ನಗರಗಳಲ್ಲಿ ಮುಂದಿನ ಏಪ್ರಿಲ್- ಮೇ ತ್ರೈಮಾಸಿಕ ಅವಧಿ ವೇಳೆಗೆ ಮನೆಗಳ ದರ ಶೇ.5.3 ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ.

2018-19 ರ ಮೊದಲ ತ್ರೈಮಾಸಿಕದಲ್ಲಿ ಈ ಏರಿಕೆಯಾಗಲಿದೆ ಎಂದು ತಿಳಿಸಿರುವ ಆರ್‌ಬಿಐ ಕಳೆದ ವರ್ಷದ ತ್ರೈಮಾಸಿಕದಲ್ಲಿ 6.7 ಹಾಗೂ 8.7 ರಷ್ಟು ಮನೆಗಳ ದರದಲ್ಲಿ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ.

ಪ್ರಮುಖವಾಗಿ ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ, ಕೊಲ್ಕತ್ತಾ, ಲಕ್ನೋ, ಅಹಮದಾಬಾದ್, ಜೈಪುರ, ಕಾನ್ಪುರ ಹಾಗೂ ಕೊಚ್ಚಿ ನಗರಗಳಲ್ಲಿ ಹೊಸ ಮನೆಗಳ ದರ ಏರಿಕೆಯಾಗಲಿದೆ. ಜೀವನ ಶೈಲಿ, ನಗರದ ಜನಪ್ರಿಯತೆ, ಮತ್ತು ಇತರ ಅಂಶಗಳು ಮನೆಗಳ ದರವನ್ನು ನಿರ್ಧರಿಸಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ನವದೆಹಲಿಯನ್ನು ಹೊರತುಪಡಿಸಿ ಇನ್ನುಳಿದ ನಗರಗಳಲ್ಲಿ ಜೀವನ ಶೈಲಿ ಹಾಗೂ ಮನೆಯ ದರ ಏರಿಕೆಯಾಗಿದೆ.