ಯುಪಿಐ ವ್ಯವಹಾರಗಳ ಆಧಾರದ ಮೇಲೆ ಚೀಟಿ ವ್ಯವಹಾರದಲ್ಲಿ ತೊಡಗಿರುವವರಿಗೆ ವಾಣಿಜ್ಯ ತೆರಿಗೆ ನೋಟೀಸ್‌ಗಳು ಹೋಗಿವೆ. ಚೀಟಿ ವ್ಯವಹಾರಗಳ ಮೇಲಿನ ಜಿಎಸ್‌ಟಿ ಬಗ್ಗೆ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

ಇತ್ತೀಚೆಗಿನ ವಾಣಿಜ್ಯ ತೆರಿಗೆ ನೋಟೀಸ್‌ಗಳಿಂದ ಸಣ್ಣ ವ್ಯಾಪಾರಿಗಳು ಸೇರಿ ಹಲವರು ಆತಂಕಗೊಂಡಿರುವ ಬೆನ್ನಲ್ಲೇ ಚೀಟಿ ವ್ಯವಹಾರಗಳಲ್ಲಿ ತೊಡಗಿರುವವರು ಸ್ಪಷ್ಟನೆಗಾಗಿ ಈಗ ಪರದಾಡುವ ಸ್ಥಿತಿ ಬರುವ ಲಕ್ಷಣ ಕಾಣುತ್ತಿದೆ. ಈ ಕುರಿತು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ ಮೀರಾ ಸುರೇಶ್ ಪಂಡಿತ್ ಅವರು ಸ್ಪಷ್ಟನೆ ನೀಡಿದ್ದಾರೆ.

ಯುಪಿಐ ವ್ಯವಹಾರಗಳ ಆಧಾರದ ಮೇಲೆ ನೋಟೀಸ್:

"ನಾವು ಕಳುಹಿಸಿರುವ ನೋಟೀಸ್‌ಗಳು ಯುಪಿಐ (UPI) ಪಾವತಿ ವಿವರಗಳ ಆಧಾರದ ಮೇಲೆ ಹೊರಡಿಸಲಾಗಿದೆ. ಈ ಮೂಲಕ ನಿಜವಾಗಿ ಅವರು ಯಾವುದೇ ವ್ಯಾಪಾರ ಅಥವಾ ಚೀಟಿ ಸಂಬಂಧಿತ ವ್ಯವಹಾರದಲ್ಲಿ ತೊಡಗಿದ್ದಾರೆ ಎಂಬುದನ್ನು ನಾವೇ ನಿಖರವಾಗಿ ಖಚಿತಪಡಿಸಿಕೊಳ್ಳಲಾಗದು. ನೋಟೀಸ್‌ಗಳಿಗೆ ಪ್ರತಿಕ್ರಿಯೆ ನೀಡಿದವರು ಸಮರ್ಪಿಸುವ ಸಮಜಾಯಿಷಿ ಹಾಗೂ ದಾಖಲೆಗಳ ಆಧಾರದಲ್ಲಿ ವಾಸ್ತವ ಸ್ಥಿತಿ ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಚೀಟಿ ವ್ಯವಹಾರ ಮತ್ತು ಜಿಎಸ್‌ಟಿ:

ಚೀಟಿ ವ್ಯವಹಾರವನ್ನು ಒಂದು ಸೇವೆಯಾಗಿ ಪರಿಗಣಿಸಿದಾಗ, ಅದರ ಮೇಲೆ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಅಧಿಕೃತವಾಗಿ ನೋಂದಾಯಿತ ಚಿಟ್ ಫಂಡ್ ಕಂಪನಿಗಳು ನೀಡುವ ಸೇವೆಗಳ ಮೇಲೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ. ಆದರೆ, ಅಪ್ರತಿಷ್ಠಿತ ಅಥವಾ ಅನ್‌ರಜಿಸ್ಟರ್ಡ್ ಇನ್‌ಫಾರ್ಮಲ್ ಚೀಟಿ ವ್ಯವಹಾರಗಳ ಮೇಲೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದಿದ್ದಾರೆ

ನೋಟೀಸ್ ಬಂದರೆ ಏನು ಮಾಡಬೇಕು?:

ಯಾವುದೇ ನೋಟೀಸ್ ಬಂದಾಗ, ತಕ್ಷಣವೇ ಸ್ಪಷ್ಟನೆ ಅಥವಾ ಸಮಜಾಯಿಷಿ ನೀಡಬೇಕು. ನೀವು ಮಾಡಿರುವ ಹಣಕಾಸು ವ್ಯವಹಾರಗಳ ಬಗ್ಗೆ ಸರಿಯಾದ ದಾಖಲೆಗಳನ್ನು ಒದಗಿಸಿದರೆ, ನಾವು ಅದನ್ನು ಪರಿಗಣಿಸುತ್ತೇವೆ. ಕಾನೂನುಬದ್ಧ ಸೇವೆಗಳ ಮೇಲೆ ಮಾತ್ರ ತೆರಿಗೆ ವಿಧಿಸುತ್ತೇವೆ ಎಂದು ಜಂಟಿ ಆಯುಕ್ತೆ ತಿಳಿಸಿದ್ದಾರೆ.

ಚಿಟ್ ಫಂಡ್ ಹಾಗೂ ಇತರ ಏಜೆಂಟ್ ಸೇವೆಗಳ ತೆರಿಗೆ:

ಚಿಟ್ ಫಂಡ್ ಸೇವೆಗಳು ಹಾಗೂ ಕಮಿಷನ್ ಏಜೆಂಟ್ಸ್‌ ಹಾಗು LIC ಏಜೆಂಟ್‌ಗಳಂತಹವರು ನೀಡುವ ಸೇವೆಗಳ ಮೇಲೆ ಜಿಎಸ್‌ಟಿ ಅನ್ವಯಿಸುತ್ತದೆ. ಖಾತೆದಾರರಿಂದ ಸಂಗ್ರಹಿಸುವ ಪ್ರಿಮಿಯಂ ಅಥವಾ ಬೇರೆ ಶುಲ್ಕಗಳ ಮೇಲೆ ಅಲ್ಲ, ಆದರೆ ಅವರು ನೀಡುವ ಸೇವೆಯ ಮೇಲೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ. ಚಿಟ್ ಫಂಡ್ ಕಂಪನಿಗಳಿಗೆ ಪ್ರಸ್ತುತ 18% ಜಿಎಸ್‌ಟಿ ಇದ್ದು, ಇದು ಬ್ಯಾಂಕಿಂಗ್ ಸೇವೆಗಳಿಗೆ ಸಮಾನವಾಗಿದೆ.