* ಇದು ಕಳೆದ 5 ತಿಂಗಳಲ್ಲೇ ಗರಿಷ್ಟಪ್ರಮಾಣ* ಸೆಪ್ಟೆಂಬರ್‌ನಲ್ಲಿ 1.17 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ 

ನವದೆಹಲಿ(ಅ.02): ಸೆಪ್ಟೆಂಬರ್‌ನಲ್ಲಿ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ (GST) ರೂಪದಲ್ಲಿ 1.17 ಲಕ್ಷ ಕೋಟಿ ರು. ಆದಾಯ(Income) ಸಂಗ್ರಹವಾಗಿದೆ.

ಇದು ಕಳೆದ 5 ತಿಂಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. 1.17 ಲಕ್ಷ ಕೋಟಿ ಪೈಕಿ 20578 ಕೋಟಿ ರು. ಕೇಂದ್ರೀಯ ಜಿಎಸ್‌ಟಿ, ರಾಜ್ಯ ಜಿಎಸ್‌ಟಿಯಿಂದ 26,767 ಕೋಟಿ ರು., ಏಕೀಕೃತ ಜಿಎಸ್‌ಟಿಯಿಂದ 60,911 ಕೋಟಿ ರು. ಹಾಗೂ ಸೆಸ್‌ನಿಂದ 8754 ಕೋಟಿ ರು. ಆದಾಯ ಬಂದಿದೆ ಎಂದು ಕೇಂದ್ರ ವಿತ್ತ ಇಲಾಖೆ(Finance Ministry) ತಿಳಿಸಿದೆ. ಈ ಹಿಂದಿನ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಸರ್ಕಾರಕ್ಕೆ ಹರಿದುಬಂದಿದ್ದ ಆದಾಯಕ್ಕಿಂತ ಶೇ.20ರಷ್ಟು ಹೆಚ್ಚು ಆದಾಯ ಬಂದಿದೆ.

ಜೊತೆಗೆ ಕಳೆದ 5 ತಿಂಗಳಿನಿಂದ ಸತತ 1 ಲಕ್ಷ ಕೋಟಿ ರು.ಗಿಂತಲೂ ಹೆಚ್ಚಿನ ಜಿಎಸ್‌ಟಿ ಸಂಗ್ರಹವಾಗುತ್ತಿದೆ. ಏಪ್ರಿಲ್‌ನಲ್ಲಿ 1.41 ಲಕ್ಷ ಕೋಟಿ ರು., ಮೇನಲ್ಲಿ 1.02 ಲಕ್ಷ ಕೋಟಿ ರು., ಜುಲೈನಲ್ಲಿ 1.16 ಲಕ್ಷ ಕೋಟಿ ರು. ಹಾಗೂ ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರು. ಹರಿದುಬಂದಿತ್ತು.

ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹ

ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ ಎಂಬುದನ್ನು ಸಾಬೀತುಪಡಿಸುವ ಮತ್ತಷ್ಟುಅಂಶಗಳು ಬುಧವಾರ ಹೊರಬಿದ್ದಿದೆ. ಆಗಸ್ಟ್‌ ತಿಂಗಳಿನಲ್ಲಿ 1.12 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದರೊಂದಿಗೆ ಸತತ 2ನೇ ತಿಂಗಳು ಕೂಡಾ ಜಿಎಸ್‌ಟಿ ಸಂಗ್ರಹ ಪ್ರಮಾಣ 1 ಲಕ್ಷ ಕೋಟಿ ರು.ಗಿಂತ ಹೆಚ್ಚಿದೆ. ಇನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಶೇ.30ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿತ್ತು.

ಈ ಕುರಿತು ಮಾಹಿತಿ ನೀಡಿರುವ ಹಣಕಾಸು ಸಚಿವಾಲಯ ‘ಆಗಸ್ಟ್‌ನಲ್ಲಿ ಒಟ್ಟಾರೆ 1,12,020 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದರಲ್ಲಿ ಕೇಂದ್ರದ ಜಿಎಸ್‌ಟಿ 20522 ಕೋಟಿ ರು., ರಾಜ್ಯಗಳ ಜಿಎಸ್‌ಟಿ 26605 ಕೋಟಿ ರು. ಮತ್ತು ಸಮಗ್ರ ಜಿಎಸ್‌ಟಿ ಪ್ರಮಾಣ 56,247 ಕೋಟಿ ರು., ಸೆಸ್‌ ರೂಪದಲ್ಲಿ 8646 ಕೋಟಿ ರು.’ ಎಂದು ಹೇಳಿದೆ.