ನವದೆಹಲಿ(ಡಿ.10): ಕೊರೋನಾ ಲಾಕ್‌ಡೌನ್‌ ವೇಳೆ ಉದ್ಯೋಗ ಕಳೆದುಕೊಂಡವರು ಹಾಗೂ ಹೊಸದಾಗಿ ಕೆಲಸ ಗಿಟ್ಟಿಸಲು ಪರದಾಡುತ್ತಿರುವವರ ನೆರವಿಗೆ ನಿಲ್ಲಲು ಮುಂದಾಗಿರುವ ಕೇಂದ್ರ ಸರ್ಕಾರ ಬರೋಬ್ಬರಿ 22,810 ಕೋಟಿ ರು. ವೆಚ್ಚದ ಆತ್ಮನಿರ್ಭರ ಭಾರತ ರೋಜಗಾರ್‌ ಯೋಜನೆ (ಸ್ವಾವಲಂಬಿ ಭಾರತ ಉದ್ಯೋಗ ಯೋಜನೆ)ಗೆ ಅನುಮತಿ ನೀಡಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಉದ್ದಿಮೆಗಳು ಹೊಸದಾಗಿ ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಪ್ರೋತ್ಸಾಹಿಸುವ ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅಂಗೀಕಾರದ ಮುದ್ರೆಯೊತ್ತಿದೆ.

ಯೋಜನೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1584 ಕೋಟಿ ಹಾಗೂ ಒಟ್ಟಾರೆ 2020-2023ರ ಅವಧಿಯಲ್ಲಿ 22810 ಕೋಟಿ ರು.ಗಳನ್ನು ವೆಚ್ಚ ಮಾಡಲಾಗುತ್ತದೆ. ಈ ಯೋಜನೆಯಿಂದ ಸಾಂಪ್ರದಾಯಿಕ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಏನಿದು ಯೋಜನೆ?:

2020ರ ಅ.1ರಿಂದ 2021ರ ಜೂ.30ರವರೆಗಿನ ಅವಧಿಯಲ್ಲಿ ಹೊಸದಾಗಿ ಉದ್ಯೋಗ ಪಡೆಯುವ ಉದ್ಯೋಗಿಗಳಿಗೆ, ಉದ್ಯೋಗ ನೀಡುವ ಸಂಸ್ಥೆಗಳಿಗೆ ಮುಂದಿನ ಎರಡು ವರ್ಷಗಳ ಕಾಲ ಸಬ್ಸಿಡಿ ನೀಡುವ ಯೋಜನೆ ಇದಾಗಿದೆ. ಹಾಲಿ ಗರಿಷ್ಠ ಒಂದು ಸಾವಿರದವರೆಗೆ ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಈ ಅವಧಿಯಲ್ಲಿ ಹೊಸ ಉದ್ಯೋಗಿಯನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಂಡಲ್ಲಿ ಉದ್ಯೋಗಿಯ ಪಾಲಿನ ಶೇ.12 ಹಾಗೂ ಉದ್ಯೋಗದಾತರ ಪಾಲಿನ ಶೇ.12 ಸೇರಿ ಶೇ.24ರಷ್ಟುಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್‌) ಮೊತ್ತವನ್ನು ಎರಡು ವರ್ಷಗಳ ಕಾಲ ಸರ್ಕಾರವೇ ಪಾವತಿಸಲಿದೆ. ಇದರಿಂದಾಗಿ ಉದ್ಯೋಗದಾತರಿಗೆ 2 ವರ್ಷ ಇಪಿಎಫ್‌ ಪಾವತಿಸುವ ಹೊರೆ ಇರುವುದಿಲ್ಲ.

ಒಂದು ವೇಳೆ 1000 ಮಂದಿಗಿಂತ ಅಧಿಕ ಜನರು ಕೆಲಸ ಮಾಡುತ್ತಿರುವ ಕಂಪನಿಗಳು ಹೊಸಬರಿಗೆ ಉದ್ಯೋಗ ನೀಡಿದರೆ ಉದ್ಯೋಗಿಗಳ ಪಾಲಿನ ಶೇ.12ರಷ್ಟುಇಪಿಎಫ್‌ ಮೊತ್ತವನ್ನು ಸರ್ಕಾರ ಭರಿಸಲಿದೆ. ಆದರೆ ಈ ಯೋಜನೆಯಲ್ಲಿ ಷರತ್ತೂ ಇದೆ. ಹೊಸದಾಗಿ ಉದ್ಯೋಗ ಪಡೆಯುವ ವ್ಯಕ್ತಿಯ ಮಾಸಿಕ ವೇತನ 15 ಸಾವಿರ ರು.ಗಿಂತ ಕಡಿಮೆ ಇರಬೇಕು. ಭವಿಷ್ಯ ನಿಧಿ ಮಂಡಳಿಯಲ್ಲಿ ನೋಂದಣಿಯಾಗಿರುವ ಬೇರೆ ಕಂಪನಿಯಲ್ಲಿ 2020ರ ಅ.1ಕ್ಕೆ ಮುನ್ನ ಕಾರ್ಯನಿರ್ವಹಿಸುತ್ತಿರಬಾರದು.

ಯುನಿವರ್ಸಸಲ್‌ ಅಕೌಂಟ್‌ ನಂಬರ್‌ ಅಥವಾ ಇಪಿಎಫ್‌ ಸದಸ್ಯ ಖಾತೆ ಸಂಖ್ಯೆಯನ್ನು 2020ರ ಅ.1ಕ್ಕೆ ಮುನ್ನ ಹೊಂದಿರದಿದ್ದವರು ಕೂಡ ಈ ಯೋಜನೆಯ ಫಲಾನುಭವಿಗಳಾಗುತ್ತಾರೆ. ಕೊರೋನಾ ಪಿಡುಗಿನ ಕಾರಣಕ್ಕೆ 2020ರ ಮಾ.1ರಿಂದ 2020ರ ಸೆ.30ರ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡ 15 ಸಾವಿರ ರು. ಒಳಗೆ ವೇತನ ಪಡೆಯುತ್ತಿದ್ದ ನೌಕರರು ಈವರೆಗೂ ಇಪಿಎಫ್‌ಒ ಅಡಿ ನೋಂದಣಿಯಾದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿಲ್ಲದಿದ್ದರೆ ಅವರು ಕೂಡ ಈ ಯೋಜನೆಗೆ ಅರ್ಹರು.