ಸ್ವಿಗ್ಗಿ, ಝೋಮ್ಯಾಟೊಗೆ 15 ದಿನ ಗಡುವು!
* 15 ದಿನಗಳಲ್ಲಿ ಪ್ರಸ್ತಾವನೆ ಸಲ್ಲಿಸಲು ಕೇಂದ್ರದ ಸೂಚನೆ
* ಸ್ವಿಗ್ಗಿ, ಝೋಮ್ಯಾಟೊಗೆ 15 ದಿನ ಗಡುವು
* ಗ್ರಾಹಕರ ದೂರು ಇತ್ಯರ್ಥಕ್ಕೆ ಏನು ಕ್ರಮ ಕೈಗೊಳ್ಳುವಿರಿ
ನವದೆಹಲಿ(ಜೂ.14): ಝೋಮ್ಯಾಟೊ ಹಾಗೂ ಸ್ವಿಗ್ಗಿಯಂತಹ ಆನ್‌ಲೈನ್ ಆಹಾರ ಉದ್ಯಮ ಕಂಪನಿಗಳ ವಿರುದ್ಧ ಗ್ರಾಹಕರ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸುವ ಕುರಿತು 15 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಸೋಮವಾರ ನಿರ್ದೇಶಿಸಿದೆ.
ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚಗಳಲ್ಲಿ ಅಸಮಾನತೆ, ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣ ಹಾಗೂ ಬೆಲೆಯಲ್ಲಿ ವ್ಯತ್ಯಾಸ, ಬುಕ್ ಮಾಡಿದ ವೇಳೆ ತೋರಿಸುವ ಡೆಲಿವರಿ ಸಮಯ ಹಾಗೂ ಆಹಾರ ಪೂರೈಕೆ ಸಮಯದ ನಡುವಿನ ವ್ಯತ್ಯಾಸ ಮೊದಲಾದವುಗಳ ಕುರಿತು ಕಳೆದ 12 ತಿಂಗಳಲ್ಲೇ ಸ್ವಿಗ್ಗಿ ವಿರುದ್ಧ 3,631 ಹಾಗೂ ಝೋಮ್ಯಾಟೊ ವಿರುದ್ಧ 2,828 ದೂರುಗಳನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ದಾಖಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೇತೃತ್ವದ ಸಭೆಯು ಸ್ವಿಗ್ಗಿ, ಝೋಮ್ಯಾಟೊ ಮೊದಲಾದ ಆನ್‌ಲೈನ್ ಆಹಾರ ಉದ್ಯಮ ಕಂಪನಿಗಳಿಗೆ 15 ದಿನಗಳಲ್ಲೇ ಗ್ರಾಹಕರ ಕುಂದುಕೊರತೆ ಕಾರ್ಯವಿಧಾನ ಸುಧಾರಿಸುವ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದೆ. ಇದರೊಂದಿಗೆ ಎಲ್ಲ ಆನ್‌ಲೈನ್ ಆಹಾರ ಉದ್ಯಮಗಳು ಡೆಲಿವರಿ ವೆಚ್ಚ, ಪ್ಯಾಕೇಜಿಂಗ್ ವೆಚ್ಚ, ತೆರಿಗೆ ಮೊದಲಾದವುಗಳನ್ನು ಪ್ರತ್ಯೇಕವಾಗಿ ಬಿಲ್‌ನಲ್ಲಿ ನಮೂದಿಸಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ.
ದೂರುಗಳೇನು?
-ಡೆಲಿವರಿ, ಪ್ಯಾಕೆಜಿಂಗ್ ವೆಚ್ಚದಲ್ಲಿ ಅಸಮಾನತೆ
-ಆರ್ಡರ್ ಮಾಡಿದ ಹಾಗೂ ಪೂರೈಕೆಯಾದ ಆಹಾರದ ಪ್ರಮಾಣದಲ್ಲಿ ವ್ಯತ್ಯಾಸ
-ಬುಕ್ಕಿಂಗ್ ವೇಳೆಯ ಡೆಲಿವರಿ ಅವಧಿಯಲ್ಲಿ ಆಹಾರ ಪೂರೈಸದಿರುವುದು