ಗೂಗಲ್ ಸಿಇಒ ಸ್ಥಾನದಿಂದ ಕೆಳಗಿಳಿಯುತ್ತಾರಾ ಸುಂದರ್ ಪಿಚೈ? ಚರ್ಚೆ ಹುಟ್ಟುಹಾಕಿದ ಹೂಡಿಕೆದಾರ ಸಮೀರ್ ಆರೋರ ಹೇಳಿಕೆ
ಗೂಗಲ್ ಜೆಮಿನಿ ವೈಫಲ್ಯ ಸಿಇಒ ಸುಂದರ್ ಪಿಚೈ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆಯಿದೆಯಾ? ಇಂಥದೊಂದು ಅನುಮಾನ ಈಗ ಹುಟ್ಟುಕೊಂಡಿದೆ.ಇದಕ್ಕೆ ಕಾರಣವಾಗಿರೋದು ಈ ಸಂಬಂಧ ಹೆಲಿಯೊಸ್ ಕ್ಯಾಪಿಟಲ್ ಸಂಸ್ಥಾಪಕ ಸಮೀರ್ ಆರೋರ ನೀಡಿರುವ ಹೇಳಿಕೆ.
ನವದೆಹಲಿ (ಫೆ.27): ಗೂಗಲ್ ಎಐ ಪ್ಲಾಟ್ ಫಾರ್ಮ್ ಜೆಮಿನಿ ವೈಫಲ್ಯ ಸಿಇಒ ಸುಂದರ್ ಪಿಚೈ ಸ್ಥಾನಕ್ಕೆ ಕುತ್ತು ತರಲಿದೆಯಾ ಎಂಬ ಅನುಮಾನ ಎಲ್ಲರನ್ನು ಕಾಡಲು ಪ್ರಾರಂಭಿಸಿದೆ. ಇದಕ್ಕೆ ಕಾರಣ ಹೂಡಿಕೆದಾರ, ಹೆಲಿಯೊಸ್ ಕ್ಯಾಪಿಟಲ್ ಸಂಸ್ಥಾಪಕ ಸಮೀರ್ ಆರೋರ ಅವರ ಹೇಳಿಕೆ. ಸೋಷಿಯಲ್ ಮೀಡಿಯಾ 'ಎಕ್ಸ್' ನಲ್ಲಿ (ಈ ಹಿಂದಿನ ಟ್ವಿಟ್ಟರ್) ಬಳಕೆದಾರರೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಆರೋರ, ಸುಂದರ್ ಪಿಚೈ ಅವರನ್ನು ಗೂಗಲ್ ಸಿಇಒ ಸ್ಥಾನದಿಂದ ವಜಾಗೊಳಿಸಲಾಗೋದು ಅಥವಾ ಅವರೇ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
'ನನ್ನ ಊಹೆ ಪ್ರಕಾರ ಸುಂದರ್ ಪಿಚೈ ಅವರನ್ನು ವಜಾಗೊಳಿಸಲಾಗುವುದು ಅಥವಾ ಅವರೇ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಅವರು ಹಾಗೇ ಮಾಡಬೇಕು ಕೂಡ. ಎಐ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಅವರು ಸಂಪೂರ್ಣವಾಗಿ ಸೋತಿದ್ದಾರೆ. ಹೀಗಾಗಿ ಅವರು ಬೇರೆಯವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಬೇಕು' ಎಂದು ಆರೋರ 'ಎಕ್ಸ್'ನಲ್ಲಿ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ಅರೋರ ಅವರ ಪೋಸ್ಟ್ ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ ಕೂಡ. ಒಬ್ಬರು ಅರೋರ ಅವರಿಗೆ 'ಸರ್ ಜೀ, ನೀವು ಗೂಗಲ್ ಜೆಮಿನಿ ನೋಡಿದ್ದೀರಾ? ಇದು ಬಿಳಿಯರ ಅಸ್ವಿತ್ವವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ. ಆದರೆ, ಸುಂದರ್ ಪಿಚೈ ಅದೃಷ್ಟವಂತರು, ಅವರು ಬಿಳಿ ಚರ್ಮ ಹೊಂದಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
ಏನಿದು ಜೆಮಿನಿ ಎಐ?
ಗೂಗಲ್ ಇತ್ತೀಚೆಗೆ ತನ್ನ ಎಐ ಚಾಟ್ ಬಾಟ್ 'ಬಾರ್ಡ್ ' ಅನ್ನು 'ಜೆಮಿನಿ' ಎಂದು ಮರುನಾಮಕರಣ ಮಾಡಿದೆ. ಈ ಮೂಲಕ ಕೃತಕ ಬುದ್ಧಿಮತ್ತೆ (AI) ಸಾಧನವನ್ನು ಜಾಗತಿಕವಾಗಿ ಬಳಸಲು ಅಧಿಕೃತವಾಗಿ ಅವಕಾಶ ಕಲ್ಪಿಸಿದೆ. ಗೂಗಲ್ ನೀಡಿರುವ ಮಾಹಿತಿ ಪ್ರಕಾರ ಇದು ಬಳಕೆದಾರರಿಗೆ ಜೆಮಿನಿ ಪ್ರೊ 1.0 ಮಾದರಿಯೊಂದಿಗೆ 230 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 40 ಭಾಷೆಗಳಲ್ಲಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ.
ಇನ್ನು ಜೆಮಿನಿ ಅಡ್ವಾನ್ಸ್ಡ್ ಗೂಗಲ್ ಒನ್ ಎಐ (Google One AI) ಪ್ರೀಮಿಯಂ ಪ್ಲ್ಯಾನ್ ಒಂದು ಭಾಗವಾಗಿದೆ. ಇದರ ಬೆಲೆ ತಿಂಗಳಿಗೆ 19.99 ಡಾಲರ್. ಎರಡು ತಿಂಗಳ ಪ್ರಾಯೋಗಿಕ ಅವಧಿಯೊಂದಿಗೆ ಈ ಪ್ಲ್ಯಾನ್ ಪಡೆಯಬಹುದು. ಇತ್ತೀಚಿನ ಗೂಗಲ್ ಬ್ಲಾಗ್ ಪೋಸ್ಟ್ ನಲ್ಲಿ ವಿವರಿಸಿರುವಂತೆ ಎಐ ಪ್ರೀಮಿಯಂ ಚಂದಾದಾರರು ಜೆಮಿನಿ ಅನ್ನು ವಿವಿಧ ಗೂಗಲ್ ಅಪ್ಲಿಕೇಷನ್ ಗಳಾದ ಜಿಮೇಲ್, ಡಾಕ್ಸ್, ಸ್ಲೈಡ್ಸ್, ಶೀಟ್ಸ್ ಹಾಗೂ ಇನ್ನೂ ಹೆಚ್ಚಿನವುಗಳ ಜೊತೆಗೆ ಸಂಯೋಜಿಸಲು ಎಐ ಪ್ರೀಮಿಯಂ ಚಂದಾದಾರರಿಗೆ ಅವಕಾಶ ನೀಡಲಾಗಿದೆ.
ಜೆಮಿನಿ ಅಡ್ವಾನ್ಸ್ಡ್ Google One AI ಪ್ರೀಮಿಯಂ ಪ್ಲಾನ್‌ನ ಒಂದು ಭಾಗವಾಗಿದೆ, ಆರಂಭಿಕ ಎರಡು ತಿಂಗಳ ಪ್ರಾಯೋಗಿಕ ಅವಧಿಯೊಂದಿಗೆ ತಿಂಗಳಿಗೆ $19.99 ಗೆ ಪ್ರವೇಶಿಸಬಹುದು. AI ಪ್ರೀಮಿಯಂ ಪ್ಲಾನ್‌ಗೆ ಚಂದಾದಾರರು ಇತ್ತೀಚಿನ Google ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದಂತೆ Gmail, ಡಾಕ್ಸ್, ಸ್ಲೈಡ್‌ಗಳು, ಶೀಟ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ Google ಅಪ್ಲಿಕೇಶನ್‌ಗಳಲ್ಲಿ ಜೆಮಿನಿಯ ಏಕೀಕರಣವನ್ನು ನಿರೀಕ್ಷಿಸಬಹುದು.
ಆಗಸ್ಟ್ 1 ರಿಂದ ಜೀಮೇಲ್ ಸ್ಥಗಿತ, ಗೂಗಲ್ ಕೊಟ್ಟ ಸ್ಪಷ್ಟನೆ ಇದು
ಜೆಮಿನಿ ವಿವಾದ
ಗೂಗಲ್ ಜೆಮಿನಿ ಪರಿಚಯಿಸಿದ ಒಂದೇ ವಾರದಲ್ಲಿ ವಿವಾದ ಸೃಷ್ಟಿಯಾಗಿದೆ. ಜೆಮಿನಿಗೆ ಲಿಂಕ್ ಮಾಡಲಾದ ದೋಷಯುಕ್ತ AI ಇಮೇಜ್-ಜನರೇಟರ್ ನಿಂದ ಸಮಸ್ಯೆ ಎದುರಾಗಿತ್ತು. ಈ ಸಂಬಂಧ ಗೂಗಲ್ ಫೆಬ್ರವರಿ 23 ರಂದು ಕ್ಷಮೆಯಾಚಿಸಿತ್ತು. ಈ ಜೆಮಿನಿ ವಿವಾದ ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಸ್ಥಾನಕ್ಕೆ ಕುತ್ತು ತರುತ್ತದೆ ಎಂಬ ತಜ್ಞರ ಹೇಳಿಕೆಗಳು ಸದ್ಯ ಸಾಕಷ್ಟು ಸದ್ದು ಮಾಡುತ್ತಿದೆ.