Asianet Suvarna News Asianet Suvarna News

ತೈಲ ಉದ್ಯಮದಲ್ಲಿ ಬಿರುಗಾಳಿ ಎಬ್ಬಿಸುತ್ತಿರುವ ಹೆಸರೇ ಕೇಳಿರದ ಭಾರತೀಯ ಕಂಪನಿ ಗತಿಕ್!

ಕಳೆದ 18 ತಿಂಗಳುಗಳ ಅವಧಿಯಲ್ಲಿ, ಮುಂಬೈನ ನೆಪ್ಚೂನ್ ಮ್ಯಾಗ್ನೆಟ್ ಮಾಲ್ ಪ್ರದೇಶದಿಂದ ಒಂದು ಬೃಹತ್ ತೈಲ ಸಾಗಾಣಿಕಾ ಸಂಸ್ಥೆ ಹೊರಹೊಮ್ಮಿದೆ. ಈ ಮೊದಲು ಭಾರತೀಯ ಸಾಗಾಣಿಕಾ ಕ್ಷೇತ್ರದಲ್ಲಿ ಹೆಸರು ಕೇಳರಿಯದ ಈ ಸಂಸ್ಥೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಜಗತ್ತಿನ ಅತಿದೊಡ್ಡ ಹಡಗು ಮಾಲಿಕ ಸಂಸ್ಥೆಗಳಲ್ಲಿ ಒಂದೆನಿಸಿದೆ.

Gatik an unknown Indian company that is causing a storm in the oil industry akb
Author
First Published May 8, 2023, 4:06 PM IST

ಗಿರೀಶ್ ಲಿಂಗಣ್ಣ,  ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಬೆಂಗಳೂರು: ಕಳೆದ 18 ತಿಂಗಳುಗಳ ಅವಧಿಯಲ್ಲಿ, ಮುಂಬೈನ ನೆಪ್ಚೂನ್ ಮ್ಯಾಗ್ನೆಟ್ ಮಾಲ್ ಪ್ರದೇಶದಿಂದ ಒಂದು ಬೃಹತ್ ತೈಲ ಸಾಗಾಣಿಕಾ ಸಂಸ್ಥೆ ಹೊರಹೊಮ್ಮಿದೆ. ಈ ಮೊದಲು ಭಾರತೀಯ ಸಾಗಾಣಿಕಾ ಕ್ಷೇತ್ರದಲ್ಲಿ ಹೆಸರು ಕೇಳರಿಯದ ಈ ಸಂಸ್ಥೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಜಗತ್ತಿನ ಅತಿದೊಡ್ಡ ಹಡಗು ಮಾಲಿಕ ಸಂಸ್ಥೆಗಳಲ್ಲಿ ಒಂದೆನಿಸಿದೆ.  ಗತಿಕ್ ಶಿಪ್ ಮ್ಯಾನೇಜ್ಮೆಂಟ್ ಸಂಸ್ಥೆಯ ಬಳಿ 2021ರ ವೇಳೆಗೆ ಕೇವಲ ಎರಡು ರಾಸಾಯನಿಕ ಟ್ಯಾಂಕರ್‌ಗಳಿದ್ದವು. ನೌಕಾಯಾನ ತಜ್ಞ ಸಂಸ್ಥೆ ವೆಸೆಲ್ಸ್ ವ್ಯಾಲ್ಯೂ ಪ್ರಕಾರ, ಎಪ್ರಿಲ್ ತಿಂಗಳ ವೇಳೆಗೆ ಗತಿಕ್ ಸಂಸ್ಥೆ 1.6 ಬಿಲಿಯನ್ ಡಾಲರ್ ಮೌಲ್ಯದ 58 ಬೋಟ್‌ಗಳ ಬಳಗವನ್ನು ಖರೀದಿಸಿದೆ. 

ಆದರೆ ಈ ಕಂಪನಿಯ ಇತಿಹಾಸ ಮತ್ತು ಮಾಲಿಕತ್ವದ ವಿಚಾರಗಳು ಅಸ್ಪಷ್ಟವಾಗಿದ್ದು, ಈ ಕುರಿತು ಕೆಲವು ಕಾರ್ಪೋರೇಟ್ ದಾಖಲೆಗಳಷ್ಟೇ ಲಭ್ಯವಿವೆ. ಸಂಸ್ಥೆ ಈ ವರ್ಷ ಮಾರ್ಚ್ 31ರಂದು ಭಾರತದ ರಫ್ತುದಾರ ಸಂಸ್ಥೆ ಎಂದು ದಾಖಲಾಗಿದ್ದರೂ, ಭಾರತದ ಅಧಿಕೃತ ಕಾರ್ಪೋರೇಟ್ ದಾಖಲಾತಿಯಲ್ಲಿ ಕಾಣಿಸುತ್ತಿಲ್ಲ. ಇನ್ನೊಂದು ಮಹತ್ವದ ಸುಳಿವೆಂದರೆ, ಗತಿಕ್ ಸಂಸ್ಥೆಯ ವಿಳಾಸವೂ ಮುಂಬೈ ನೋಂದಾಯಿತ ಸಂಸ್ಥೆಯಾದ ಬುಯೆನಾ ವಿಸ್ತಾ ಶಿಪ್ಪಿಂಗ್ ಸಂಸ್ಥೆಯ ವಿಳಾಸವನ್ನೇ ಹೊಂದಿದೆ. ಈ ವಿಯೆನ್ನಾ ಸಂಸ್ಥೆಯ ಕಾರ್ಯಾಚರಣೆಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ಲಭ್ಯವಿಲ್ಲವಾದರೂ, ಕಳೆದ ಎರಡು ವರ್ಷಗಳ ಹಿಂದೆ ಅದು 100,000 ಡಾಲರ್‌ಗೂ ಹೆಚ್ಚಿನ ಆಸ್ತಿ ಹೊಂದಿತ್ತು.

 

ಈಗ ತೈಲ ಮಾರುಕಟ್ಟೆ, ಬುಯೆನಾ ವಿಸ್ತಾ ಶಿಪ್ಪಿಂಗ್ ಸಂಸ್ಥೆಯ ಮಾಲಿಕತ್ವ ಯಾರು ಹೊಂದಿದ್ದಾರೆ ಮತ್ತು ಗತಿಕ್ ಸಂಸ್ಥೆ ಇಷ್ಟೊಂದು ವಿಸ್ತಾರ ಹೊಂದಲು ಹಣ ಹೂಡಿಕೆ ಯಾರು ಮಾಡಿದ್ದಾರೆ ಎಂದು ಆಶ್ಚರ್ಯ ಪಡುತ್ತಿದೆ. ಸರಕು ವಿತರಕರು, ತಜ್ಞರು, ಹಾಗೂ ಹಡಗು ಮಧ್ಯವರ್ತಿಗಳು ಈ ಅಭಿವೃದ್ಧಿಗೆ ಮತ್ತು ಸಂಸ್ಥೆಯ ಅತಿದೊಡ್ಡ ಗ್ರಾಹಕ, ರಷ್ಯಾದ ದೈತ್ಯ ತೈಲ ಸಂಸ್ಥೆ ರಾಸ್‌ನೆಫ್ಟ್ (Rosneft) ಮಧ್ಯೆ ಏನಾದರೂ ಸಂಬಂಧ ಇರಬಹುದೇ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.

ಟ್ಯಾಂಕರ್‌ಗಳ ಟ್ರ್ಯಾಕಿಂಗ್ ಮಾಹಿತಿಯನ್ವಯ, ಗತಿಕ್ (Gatik) ಹೊಸದಾಗಿ ಖರೀದಿಸಿರುವ ನೌಕೆಗಳನ್ನು ರಷ್ಯಾದಿಂದ ಭಾರತದ ಬಂದರುಗಳಿಗೆ ತೈಲ ಸಾಗಾಟ ನಡೆಸಲು ಬಳಸಲಾಗುತ್ತಿತ್ತು. ಕೆಪ್ಲರ್ (Kepler) ಎಂಬ ಮಾಹಿತಿ ವಿಶ್ಲೇಷಣಾ ಸಂಸ್ಥೆಯ ಪ್ರಕಾರ, ಈ ಭಾರತೀಯ ಸಮೂಹ ರಷ್ಯಾದಿಂದ ಕನಿಷ್ಠ 83 ಮಿಲಿಯನ್ ಬ್ಯಾರಲ್ ಕಚ್ಚಾತೈಲ ಹಾಗೂ ಉತ್ಪನ್ನಗಳನ್ನು ಸಾಗಿಸಿದೆ. ಇಷ್ಟು ಪ್ರಮಾಣದ ತೈಲ ಯುಕೆಯ ಎರಡು ತಿಂಗಳ ತೈಲದ ಅಗತ್ಯತೆಗೆ ಸಮನಾಗಿದೆ. ಇದರಲ್ಲಿನ ಅರ್ಧಕ್ಕೂ ಹೆಚ್ಚಿನ ಉತ್ಪನ್ನ ರಾಸ್‌ನೆಫ್ಟ್‌ಗೆ ಸೇರಿದೆ. ಒಂದು ಅಂದಾಜಿನ ಪ್ರಕಾರ, ಈ ಒಟ್ಟಾರೆ ಪ್ರಮಾಣ ಕೆಪ್ಲರ್ ಮಾಹಿತಿ ಪಟ್ಟಿಯಲ್ಲಿ ಇರುವುದಕ್ಕಿಂತಲೂ ಹೆಚ್ಚಿನದಾಗಿದೆ.

ಅಂಡರ್‌ಗ್ರೌಂಡ್‌ನಲ್ಲಿ 5 ಸಾವಿರ ಕೆಜಿ ಟಿಎನ್‌ಟಿ ಸ್ಫೋಟ ಮಾಡಿದ ಡಿಆರ್‌ಡಿಓ!

ಪಾಶ್ಚಾತ್ಯ ಜಗತ್ತು ರಷ್ಯಾದ ತೈಲ ಸಂಸ್ಥೆಗಳ ಮೇಲೆ ನಿಷೇಧ ಹೇರಿದ ಬಳಿಕ, ಅವುಗಳಿಗೆ ಶಿಪ್ಪಿಂಗ್ ಉದ್ಯಮಕ್ಕೆ ಇಳಿಯುವುದು ಅನಿವಾರ್ಯವಾಗಿತ್ತು. ಅದಕ್ಕೆ ಗತಿಕ್ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎನ್ನುತ್ತಾರೆ ಕೆಪ್ಲರ್ ಸಂಸ್ಥೆಯ ಕ್ರೂಡ್ ಅನಾಲಿಸಿಸ್ ಮುಖ್ಯಸ್ಥ ವಿಕ್ಟರ್ ಕಟೋನಾ. ಇದ್ದಕ್ಕಿದ್ದ ಹಾಗೆ, ರಷ್ಯಾದ ಸರ್ಕಾರಕ್ಕೆ ಸ್ನೇಹಿತನಾಗಿರುವ ರಾಷ್ಟ್ರವೊಂದರಿಂದ ಕಂಪನಿಯೊಂದು ಕಾಣಿಸಿಕೊಳ್ಳುತ್ತದೆ. ಅದು ಒಂದು ವರ್ಷಕ್ಕಿಂತಲೂ ಕಡಿಮೆ ಸಮಯದಲ್ಲಿ ಬೃಹತ್ ಪ್ರಮಾಣದಲ್ಲಿ ಹಡಗುಗಳನ್ನು ಖರೀದಿಸುತ್ತದೆ. ಅವುಗಳು ಬಹುತೇಕ ರಷ್ಯಾಗೋಸ್ಕರವೇ ಕಾರ್ಯಾಚರಿಸುತ್ತವೆ ಎಂದು ಅವರು ವಿವರಿಸುತ್ತಾರೆ.

ವ್ಲಾಡಿಮಿರ್ ಪುಟಿನ್ (Vladimir Putin) ಅವರು ಫೆಬ್ರವರಿ 2022ರಲ್ಲಿ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ದಾಳಿ ಆರಂಭಿಸಿದಾಗ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾದ ತೈಲ ರಫ್ತಿನ ಮೇಲೆ ನಿರ್ಬಂಧ ಹೇರಿದವು. ಈ ನಿರ್ಬಂಧಗಳ ಪರಿಣಾಮವಾಗಿ ಜಗತ್ತಿನಾದ್ಯಂತ ತೈಲ ಮಾರುಕಟ್ಟೆಗಳು ಕಾರ್ಯಾಚರಿಸುವ ವಿಧಾನವೇ ಬದಲಾಗಿ ಹೋಯಿತು. ರಷ್ಯಾದ ಅತಿದೊಡ್ಡ ಹಾಗೂ ಸರ್ಕಾರಿ ಸ್ವಾಮ್ಯದ ತೈಲ ಉತ್ಪಾದಕ ಸಂಸ್ಥೆಯಾದ ರಾಸ್‌ನೆಫ್ಟ್ ಈ ಬಿರುಗಾಳಿಯ ಮಧ್ಯದಲ್ಲಿ ಸಿಲುಕಿತ್ತು. ಈ ಕಂಪನಿಯ ಸಿಇಓ ಹಾಗೂ ವ್ಲಾಡಿಮಿರ್ ಪುಟಿನ್ ಅವರ ಆತ್ಮೀಯ ಸ್ನೇಹಿತರಲ್ಲೊಬ್ಬರಾದ ಇಗೊರ್ ಸೆಶಿನ್ ಅವರು ಕ್ರೆಮ್ಲಿನ್‌ನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಯುದ್ಧೋನ್ಮಾದಿಯೂ ಆಗಿದ್ದಾರೆ. ಅದರ ಪರಿಣಾಮವಾಗಿ ಅವರಿಗೆ 'ಡಾರ್ತ್ ವೇಡರ್' ಎಂಬ ಅಡ್ಡ ಹೆಸರೂ ಬಂದಿದೆ.

ಸುಡಾನ್‌ನಲ್ಲಿ ಸಿಲುಕಿದ ಭಾರತೀಯರ ರಕ್ಷಣಾ ಕಾರ್ಯಾಚರಣೆ, ಐಎಎಫ್‌ನ ಏಕೈಕ C-17 ಮಹಿಳಾ ಪೈಲಟ್ ಭಾಗಿ

ಐರೋಪ್ಯ ಒಕ್ಕೂಟ ರಷ್ಯಾದ ಕಚ್ಚಾತೈಲದ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ಅವುಗಳಲ್ಲಿ ತೀರಾ ಇತ್ತೀಚಿನ ನಿರ್ಬಂಧವೆಂದರೆ ಐರೋಪ್ಯ ಒಕ್ಕೂಟ ನಿರ್ವಹಿಸುವ ತೈಲದ ಗರಿಷ್ಠ ದರದ ಮೇಲೆ ಮಿತಿ ನಿಗದಿಪಡಿಸಿದ್ದಾಗಿದೆ. ಕಳೆದ ವರ್ಷ ರಾಸ್‌ನೆಫ್ಟ್ ಸಂಸ್ಥೆಯ ಅತಿದೊಡ್ಡ ಗ್ರಾಹಕರಾದ ಟ್ರಾಫಿಗುರಾ ಹಾಗೂ ವಿಟಲ್ ಅದರೊಡನೆ ವ್ಯವಹಾರ ಸ್ಥಗಿತಗೊಳಿಸಿದವು. ಈ ನಿರ್ಬಂಧಗಳ ಬಳಿಕ, ನವದೆಹಲಿ ರಷ್ಯಾದ ಮೇಲೆ ತನ್ನದೇ ಆದ ನಿರ್ಬಂಧಗಳನ್ನು ಹೇರುವ ಅಥವಾ ಗರಿಷ್ಠ ಮಿತಿ ಹೇರುವ ಬದಲು, ರಷ್ಯಾದಿಂದ ಹೆಚ್ಚು ಹೆಚ್ಚು ತೈಲ ಖರೀದಿಸಲು ನಿರ್ಧರಿಸಿತು.

ಇಂತಹ ಪರಿಸ್ಥಿತಿಯಲ್ಲಿ, ಗತಿಕ್ ಸಂಸ್ಥೆ ಚಿತ್ರಣಕ್ಕೆ ಬಂದಿತು. ವೆಸೆಲ್ಸ್ ವ್ಯಾಲ್ಯೂ ಮಾಹಿತಿಯಲ್ಲಿ, ಗತಿಕ್ ಮಾರ್ಚ್ 2022ರ ಬಳಿಕ ಕನಿಷ್ಠ 56 ಹಡಗುಗಳನ್ನು ಖರೀದಿಸಿದೆ ಎನ್ನಲಾಗಿದೆ. ಅವುಗಳಲ್ಲಿ 13 ಹಡಗುಗಳನ್ನು ಡಿಸೆಂಬರ್ ತಿಂಗಳಲ್ಲಿ ಖರೀದಿಸಿದ್ದು, ಆ ಸಮಯದಲ್ಲಿ ರಷ್ಯಾದ ತೈಲದ ಮೇಲೆ ಐರೋಪ್ಯ ಒಕ್ಕೂಟ ನಿರ್ಬಂಧ ಹೇರಿತ್ತು.

ವೆಸೆಲ್ಸ್ ವ್ಯಾಲ್ಯೂನ ರೆಬೆಕ್ಕಾ ಗ್ಯಾಲನೊಪೊಲಸ್ ಅವರು ಈ ಖರೀದಿಯಿಂದಾಗಿ ಗತಿಕ್ ಈಗ ಜಗತ್ತಿನ ಅತಿದೊಡ್ಡ ಟ್ಯಾಂಕರ್ ಮಾಲಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, 1,361 ವಿವಿಧ ಸಂಸ್ಥೆಗಳು ಒಟ್ಟು 14,000 ಟ್ಯಾಂಕರ್‌ಗಳ ಮಾಲಿಕತ್ವ ಹೊಂದಿವೆ. ಅವುಗಳಲ್ಲಿ ಗತಿಕ್ ಸೇದಿದಂತೆ ಕೇವಲ 20 ಕಂಪನಿಗಳು ಮಾತ್ರವೇ 50 ಅಥವಾ ಹೆಚ್ಚು ಟ್ಯಾಂಕರ್ ಹೊಂದಿವೆ ಎಂದಿದ್ದಾರೆ.

ಈ ಹಡಗುಗಳೂ ನೆರಳಿನಲ್ಲಿ ಮರೆಯಾಗಿ ಕುಳಿತಿವೆ. ತೀರಾ ಇತ್ತೀಚೆಗೆ, ಅಂದರೆ ಮಾರ್ಚ್ ತಿಂಗಳಲ್ಲಿ, ಗತಿಕ್ ಸಂಸ್ಥೆಯ ಕನಿಷ್ಠ 35 ಹಡಗುಗಳಿಗೆ ಪಾಶ್ಚಾತ್ಯ ವಿಮೆ ಮಾಡಲಾಗಿದೆ. ಆದರೆ ಎಪ್ರಿಲ್ ತಿಂಗಳ ಆರಂಭದಲ್ಲಿ, ಗತಿಕ್ ಸಂಸ್ಥೆಯ ಯಾವ ಹಡಗಿಗೂ ಯಾವುದೇ ಪ್ರಮುಖ ವಿಮಾ ಸಂಸ್ಥೆಯ ವಿಮೆ ಇರಲಿಲ್ಲ.  ಸಾಗಾಣಿಕಾ ದಾಖಲೆಗಳ ಪ್ರಕಾರ, ಗತಿಕ್ ಸಂಸ್ಥೆಯ ಬೆಳೆಯುತ್ತಿರುವ ಸಂಖ್ಯಾಬಲದ ಹಡಗುಗಳು ಮೊದಲು ಜಗತ್ತಿನಾದ್ಯಂತ ತೈಲ ಸಾಗಾಣಿಕೆ ನಡೆಸುತ್ತಿದ್ದವು. ಭಾರತೀಯ ಸಂಸ್ಥೆಯ ಮಾಲಿಕತ್ವದಡಿ ಬಂದ ಬಳಿಕ ಈ ಹಡಗುಗಳು ಮುಖ್ಯವಾಗಿ ರಷ್ಯಾ - ಭಾರತ ಸಮುದ್ರ ಮಾರ್ಗದಲ್ಲಿ ಸಂಚರಿಸಲು ಆರಂಭಿಸಿದವು.

ಗತಿಕ್ ಎಂಬ ಹೆಸರು 'ವೇಗ' ಎಂಬ ಅರ್ಥ ಹೊಂದಿರುವ ಸಂಸ್ಕೃತ ಪದದಿಂದ ವ್ಯುತ್ಪತ್ತಿ ಹೊಂದಿದ್ದು, ದಶಕಗಳಲ್ಲೇ ತೀವ್ರವಾದ ತೈಲ ಸಾಗಾಣಿಕಾ ಬದಲಾವಣೆಯನ್ನು ತರಲು ಈ ಸಂಸ್ಥೆ ಕಾರಣವಾಗಿದೆ. ಉಕ್ರೇನ್ ಯುದ್ಧಕ್ಕೆ ಮೊದಲು, ಭಾರತದ ತೈಲ ಖರೀದಿಯಲ್ಲಿ 1%ಕ್ಕೂ ಕಡಿಮೆ ರಷ್ಯಾದಿಂದ ಲಭಿಸುತ್ತಿತ್ತು. ಅಧಿಕೃತ ವ್ಯಾಪಾರ ಅಂಕಿಅಂಶಗಳ ಪ್ರಕಾರ, ಈಗ ರಷ್ಯಾ ಭಾರತದ 30%ದಷ್ಟು ತೈಲವನ್ನು ಒದಗಿಸುತ್ತಿದೆ.

ರಷ್ಯಾ ಉಕ್ರೇನ್ ಮೇಲೆ ಅತಿಕ್ರಮಣ ನಡೆಸಿದರೂ, ಭಾರತ ಸರ್ಕಾರ ಈ ಕುರಿತು ಸಾರ್ವಜನಿಕವಾಗಿ ಏನೂ ಮಾತನಾಡಿರಲಿಲ್ಲ. ಇದರ ಪರಿಣಾಮವಾಗಿ, ರಷ್ಯಾ ಇತರ ಖರೀದಿದಾರರಿಂದ ಅತ್ಯಂತ ಕಡಿಮೆ ಬೆಲೆಗೆ ಭಾರತಕ್ಕೆ ಮಿಲಿಯನ್‌ಗಟ್ಟಲೆ ಬ್ಯಾರಲ್ ತೈಲವನ್ನು ಪೂರೈಸಿದೆ. ರಷ್ಯಾದ ತೈಲ ಮಾರಾಟ ದಾಖಲೆಗಳ ಆಧಾರದಲ್ಲಿ ಕ್ಯಿವ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಧ್ಯಯನದ ಪ್ರಕಾರ, ಪ್ರತಿ ಬ್ಯಾರಲ್ ರಷ್ಯನ್ ತೈಲಕ್ಕೆ 2023ರ ಮೊದಲ ತ್ರೈಮಾಸಿಕದಲ್ಲಿ 48.03 ಡಾಲರ್ ಪಾವತಿಸಿದೆ. ಇದು ಇತರ ರಾಷ್ಟ್ರಗಳು ಪಾವತಿಸಿದ ಮೊತ್ತಕ್ಕಿಂತ ಹತ್ತು ಡಾಲರ್ ಕಡಿಮೆಯಾಗಿದೆ.

ಈ ರೀತಿಯ ವ್ಯಾಪಾರದ ಕಾರಣದಿಂದ, ರಷ್ಯಾ ಐರೋಪ್ಯ ಒಕ್ಕೂಟದ ಮಾರುಕಟ್ಟೆಗೆ ಕಳುಹಿಸುತ್ತಿದ್ದ ಬಹುತೇಕ ಕಚ್ಚಾ ತೈಲವನ್ನು ಭಾರತ ಖರೀದಿಸುತ್ತಿದೆ. ಈ ಪರಿಸ್ಥಿತಿಯ ಕುರಿತು ಅರಿವಿರುವ ಒಂದಷ್ಟು ಜನರು, ರಷ್ಯಾದ ಬ್ಲೆಂಡ್ ತೈಲದ ಪರಿಣಾಮವಾಗಿ ಹಳೆಯ ತೈಲಾಗಾರದ ಉಪಕರಣಗಳು ಹಾಳಾಗಿವೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ರಾಸ್‌ನೆಫ್ಟ್ ಸಂಸ್ಥೆಯ ಸಿಇಓ ಸೆಚಿನ್ ಅವರು ಭಾರತದ ಅತಿದೊಡ್ಡ ತೈಲ ಸಂಸ್ಕರಣಾಗಾರ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಭಾರತಕ್ಕೆ ಇನ್ನೂ ಹೆಚ್ಚಿನ ತೈಲ ಒದಗಿಸುವ ಮತ್ತು "ವೈವಿಧ್ಯಮಯ ಬ್ಲೆಂಡ್" ತೈಲ ಒದಗಿಸುವ ಭರವಸೆ ನೀಡಿದ್ದಾರೆ. ಕೆಪ್ಲರ್ ವರದಿಯ ಪ್ರಕಾರ, ಯುದ್ಧಕ್ಕೆ ಮೊದಲು ಭಾರತದಲ್ಲಿ ತನ್ನ ಹೆಜ್ಜೆ ಗುರುತು ಹೊಂದಿದ್ದ ಏಕೈಕ ರಷ್ಯನ್ ತೈಲ ಸಂಸ್ಥೆ ರಾಸ್‌ನೆಫ್ಟ್ ಆಗಿತ್ತು. ಯಾಕೆಂದರೆ, ಸಂಸ್ಥೆ ಗುಜರಾತಿನ ನಯಾರಾ ತೈಲ ಸಂಸ್ಕರಣಾಗಾರದಲ್ಲಿ ಪಾಲು ಹೊಂದಿತ್ತು. "ಅವರು ಈಗಾಗಲೇ ಭಾರತದಲ್ಲಿ ತಮ್ಮ ಅಸ್ತಿತ್ವ ಹೊಂದಿದ್ದರು. ಅವರಿಗೆ ವ್ಯವಹಾರ ಹೇಗೆ ನಡೆಸಬೇಕು ಎಂಬುದೂ ಗೊತ್ತಿದೆ" ಎನ್ನುತ್ತದೆ ಕೆಪ್ಲರ್.

ಗತಿಕ್ ಮತ್ತು ರಾಸ್‌ನೆಫ್ಟ್ ನಡುವಿನ ಬಂಧ ಯಾವ ರೀತಿಯಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಬುಯೆನಾ ವಿಸ್ತಾದ ಓರ್ವ ಸದಸ್ಯನ ಪ್ರಕಾರ, ಗತಿಕ್ ಸಹ ಗುಂಪಿನ ಒಂದು ಭಾಗವಾಗಿದೆ. ಆದರೆ ಸಂಸ್ಥೆ ಈ ಕುರಿತು ಯಾವುದೇ ಉತ್ತರ ನೀಡಿಲ್ಲ.

ರಾಸ್‌ನೆಫ್ಟ್ ನಿಂದ ತೈಲ ಖರೀದಿಸುತ್ತಿದ್ದ ಭಾರತೀಯ ಸಂಸ್ಥೆಗಳು ಅದನ್ನು ನೇರವಾಗಿಯೇ ಖರೀದಿ ಮಾಡುತ್ತಿದ್ದವು. ಅವುಗಳು ಯಾವುದೇ ಮಧ್ಯವರ್ತಿಯನ್ನು ಬಳಸಿಕೊಂಡಿರಲಿಲ್ಲ. ಸರಕುಗಳನ್ನೂ ವೆಚ್ಚ, ವಿಮೆ ಮತ್ತು ಸರಕುಗಳ ಆಧಾರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಅಂದರೆ, ರಾಸ್‌ನೆಫ್ಟ್ ಕಚ್ಚಾತೈಲ ಉತ್ಪನ್ನಗಳನ್ನು ಭಾರತದ ಬಂದರುಗಳಿಗೆ ತಲುಪಿಸುವ ಜವಾಬ್ದಾರಿ ಹೊಂದಿದೆ. ಯುದ್ಧಕ್ಕೆ ಮುಂಚಿತವಾಗಿ, ರಾಸ್‌ನೆಫ್ಟ್ ಕಚ್ಚಾ ತೈಲವನ್ನು ಒದಗಿಸುತ್ತಿತ್ತು, ಆದರೆ ಸಾಗಾಣಿಕಾ ಜವಾಬ್ದಾರಿ ಖರೀದಿದಾರರದಾಗಿತ್ತು.

ವೈನ್, ಬೇಟೆ, ಹಾಗೂ ಜಾಜ಼್ ಇಷ್ಟಪಡುವ ಸೆಚಿನ್ ಅವರಿಗೆ ಮಾಸ್ಕೋದಲ್ಲಿ ಸುರಕ್ಷತಾ ಸಂಸ್ಥೆಗಳೊಡನೆ ಉತ್ತಮ ಸಂಬಂಧವಿದ್ದು, ಈ ಮೊದಲು ಮಿಲಿಟರಿಗೆ ಭಾಷಾಂತರಕಾರರಾಗಿದ್ದರು. ಆತ ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ಅತ್ಯಂತ ಸಮರ್ಥನಾಗಿದ್ದು, ರಾಸ್‌ನೆಫ್ಟ್ ಸಂಸ್ಥೆಯನ್ನು ರಷ್ಯಾದ ವಿದೇಶಾಂಗ ಸಚಿವಾಲಯಕ್ಕೆ ಸಮರ್ಥ ಉಪಕರಣವಾಗಿಸಿದ್ದ. ಆದರೆ ನಿರ್ಬಂಧಗಳ ಪರಿಣಾಮವಾಗಿ ರಷ್ಯಾದ ಪ್ರಮುಖ ತೈಲ ರಫ್ತುದಾರ ಎಂಬ ಸಂಸ್ಥೆಯ ಕೀರ್ತಿಗೆ ತೊಂದರೆ ಎದುರಾಯಿತು.

ರಾಸ್‌ನೆಫ್ಟ್ ಸಂಸ್ಥೆ ಈ ಯುದ್ಧಕ್ಕೆ ತನ್ನದೇ ಆದ ಹಡಗುಗಳ ಕೊರತೆಯೊಡನೆ ಪ್ರವೇಶಿಸಿತ್ತು. ರಾಸ್‌ನೆಫ್ಟ್ ತನ್ನ ತೈಲ ಖರೀದಿದಾರರೇ ಕಚ್ಚಾತೈಲ ಸಾಗಾಣಿಕೆ ನಡೆಸುವಂತೆ ಸೂಚಿಸಿತ್ತು. ರಷ್ಯಾದ ಹಡಗು ಉತ್ಪಾದಕ ಸಂಸ್ಥೆ ಜ್ವೆಜ್ದ ಜೊತೆ ಸೇರಿ 2014ರಲ್ಲಿ ಹಡಗುಗಳನ್ನು ನಿರ್ಮಿಸುವ ಪ್ರಯತ್ನ ಆರಂಭಿಸಿತ್ತು. ಆದರೆ ಪಾಶ್ಚಾತ್ಯ ಜಗತ್ತು ತೈಲ ಸಾಗಾಣಿಕೆಗೆ ಯಾವುದೇ ತೊಂದರೆ ಕೊಡುವುದಿಲ್ಲ ಎಂಬ ನಂಬಿಕೆಯಿಂದ ಈ ಯೋಜನೆಯನ್ನು ನಿಲುಗಡೆಗೊಳಿಸಿತು. ಪಾಶ್ಚಾತ್ಯ ಜಗತ್ತು ರಷ್ಯಾದ ಸಾಗಾಣಿಕೆಗೆ ನಿರ್ಬಂಧ ಹೇರಿ, ಜಾಗತಿಕ ತೈಲ ಪೂರೈಕೆಗೂ ಅಡ್ಡಿಯಾಗಬಹುದೆಂದು ರಾಸ್‌ನೆಫ್ಟ್ ಅಂದುಕೊಂಡಿರಲಿಲ್ಲ.

ಆದರೆ ಈ ನಿರ್ಬಂಧಗಳ ಪರಿಣಾಮವಾಗಿ, ರಾಸ್‌ನೆಫ್ಟ್ ಹಾಗೂ ಇತರ ತೈಲ ಉತ್ಪಾದಕರು ನೂತನ ಗ್ರಾಹಕರು ಮತ್ತು ಹಡಗುಗಳಿಗೆ ಹುಡುಕಾಟ ನಡೆಸಬೇಕಾಯಿತು. ರಷ್ಯಾದ ತೈಲ ಪೂರೈಕೆಯ ಬೆಲೆ ಹೆಚ್ಚಾಗುತ್ತಾ ಬಂದಂತೆ ಜಾಗತಿಕವಾಗಿ "ಘೋಸ್ಟ್ ಫ್ಲೀಟ್" ಎಂಬ ಗುರುತು ಬಹಿರಂಗಪಡಿಸದ ಹಡಗುಗಳು ನಿರ್ಬಂಧಗಳನ್ನೂ ಎದುರಿಸಿ, ಈ ಮಾರುಕಟ್ಟೆಯ ಲಾಭ ಪಡೆಯಲು ಆರಂಭಿಸಿದವು.

ಮುಂಬೈಯಲ್ಲಿರುವ ಭಾರತೀಯ ತೈಲ ಸಂಸ್ಥೆಗಳ ಕಛೇರಿಗಳಲ್ಲಿ ಮಾಹಿತಿ ಕೇಳಿದರೂ, ಗತಿಕ್ ಬಗ್ಗೆಯಾಗಲಿ, ಬುಯೆನಾ ವಿಸ್ತಾ ಬಗ್ಗೆಯಾಗಲಿ ಏನೂ ತಿಳಿದು ಬರುವುದಿಲ್ಲ. ಈ ಎರಡು ಕಂಪನಿಗಳ ವಿಳಾಸವನ್ನು ಗಮನಿಸಿದರೆ, ಆ ವಿಳಾಸಕ್ಕೆ ಬಂದ ಪತ್ರಗಳೆಲ್ಲವೂ ಬಾಗಿಲ ಮುಂದೆ ರಾಶಿ ಬಿದ್ದಿರುವುದು ಕಾಣುತ್ತದೆ. ಈ ನೆಪ್ಚೂನ್ ಮ್ಯಾಗ್ನೆಟ್ ಮಾಲ್ ಪ್ರದೇಶದಲ್ಲಿ ಹಲವು ಶಿಪ್ಪಿಂಗ್ ಕಂಪನಿಗಳು ನೆಲೆಯಾಗಿವೆ. ಗತಿಕ್ ಶಿಪ್ ಮ್ಯಾನೇಜ್ಮೆಂಟ್ ಸಂಸ್ಥೆ ಭಾರತದ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ ಬಳಿ ವಾಣಿಜ್ಯಿಕ ರಫ್ತುದಾರ ಎಂದು ಈ ಮಾಲ್ ವಿಳಾಸ ನೀಡಿ, ಮಾರ್ಚ್ 31ರಂದು ನಮೂದಿಸಿಕೊಂಡಿದೆ.

ಬುಯೆನಾ ವಿಸ್ತಾ ಸಂಸ್ಥೆ ಮುಂಬೈಯ ಶ್ರೀಮಂತ ಉಪನಗರ ಪ್ರದೇಶ ಒಂದಕ್ಕೆ ತನ್ನ ವಿಳಾಸವನ್ನು ಬದಲಾಯಿಸಿಕೊಂಡಿದ್ದು, ಕೆರೆಯೊಂದರ ಬಳಿ ಕಚೇರಿಯನ್ನು ಹೊಂದಿದೆ. ಓರ್ವ ಉದ್ಯೋಗಿ ಗತಿಕ್ ಸಹ ಈ ಸಮೂಹದ ಭಾಗವಾಗಿತ್ತು ಎಂದಿದ್ದು, ಅದರಿಂದ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಅವರ ಪ್ರಕಾರ, ಸಂಸ್ಥೆಯ ನಿರ್ವಾಹಕರು ತಮ್ಮ ಕುರಿತು ಹೆಚ್ಚು ಮಾಹಿತಿ ಒದಗಿಸಲು ಇಷ್ಟಪಡುತ್ತಿಲ್ಲ.

ಇಬ್ಬರು ಭಾರತೀಯರಾದ ಉಮೇಶ್ ಸುವರ್ಣ ವಾಸು ಹಾಗೂ ಜಾನ್ ಪಿಂಟೋ ಆ್ಯಗ್ನೆಲೋ ಅವರನ್ನು ಸಂಸ್ಥೆಯ ನಿರ್ದೇಶಕರಾಗಿ ಪಟ್ಟಿಮಾಡಲಾಗಿದೆ. ಈ ಕಂಪನಿ ದುಬೈಯಲ್ಲೂ ಒಂದು ಕಚೇರಿಯನ್ನು ಹೊಂದಿದ್ದು, ಅಡಿಗೆಯವರು ಮತ್ತು ಇತರ ನೌಕಾ ಉದ್ಯೋಗಿಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ನಾಟಿಕಲ್ ಜಾಬ್ ಬೋರ್ಡ್ಸ್ ವರದಿ ಮಾಡಿದೆ. ಬುಯೆನಾ ವಿಸ್ತಾದ ಹಳೆಯ ಕಚೇರಿಯ ಬಳಿ ಇರುವ ಜನರು ಸಂಸ್ಥೆ ಅಲ್ಲಿಂದ ಬೇರೆಡೆ ತೆರಳುವ ಮುನ್ನ ಸಾಕಷ್ಟು ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದೆ ಎಂದಿದ್ದಾರೆ.

ಗತಿಕ್ ಸಂಸ್ಥೆಯ ಎರಡು ಹಡಗುಗಳನ್ನು ಮಾರ್ಷಲ್ ದ್ವೀಪದ ಹಡಗು ಕಂಪನಿಗಳಿಂದ ಪಡೆಯಲಾಗಿದ್ದು, ಅವುಗಳ ಮಾಲಕರು ಯಾರು ಎನ್ನುವುದು ತಿಳಿದುಬಂದಿಲ್ಲ. 2016ರಲ್ಲಿ ರಷ್ಯನ್ ಪಯನೀರ್ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ತನ್ನ ಜಾಜ಼್ ಸಂಗೀತದ ಆಸಕ್ತಿಯ ಕುರಿತು ಮಾತನಾಡಿದ ಸೆಚಿನ್, ಬುಯೆನಾ ವಿಸ್ತಾ ಸೋಷಿಯಲ್ ಕ್ಲಬ್‌ನ ಮ್ಯಾಗ್ನಿಫಿಶಿಯೆಂಟ್ ಕ್ಯೂಬನ್‌ ಸನ್ ಆರ್ಕೆಸ್ಟ್ರಾ ತನ್ನ ಪ್ರೀತಿಯ ಬ್ಯಾಂಡ್‌ಗಳಲ್ಲಿ ಒಂದಾಗಿದೆ ಎಂದಿದ್ದರು. ಗತಿಕ್ ಹಡಗುಗಳ ಬಳಗದ ಒಂದು ಹಡಗನ್ನು ಬುಯೆನಾ ವಿಸ್ತಾ ಎಂದು ಕರೆಯಲಾಗುತ್ತದೆ. ಇದು ಆಕಸ್ಮಿಕವೂ ಆಗಿರಬಹುದು, ಅಥವಾ ಉದ್ದೇಶಪೂರ್ವಕವೂ ಆಗಿರಬಹುದು. ಮಾರ್ಷಲ್ ದ್ವೀಪದಲ್ಲಿ ಇದನ್ನು ಸೋಷಿಯಲ್ ಕ್ಲಬ್ ಇಂಕ್ ಎಂಬ ಸಂಸ್ಥೆ ಮಾಲಿಕತ್ವ ಹೊಂದಿದೆ.

Follow Us:
Download App:
  • android
  • ios