ಇಂದೋರ್‌ [ಸೆ.09]: 2018-19ನೇ ಸಾಲಿನಲ್ಲಿ ದೇಶದ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಒಟ್ಟಾರೆ ಸುಮಾರು 72 ಸಾವಿರ ಕೋಟಿ ರು. ವಂಚನೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ 18 ಬ್ಯಾಂಕ್‌ಗಳು ಒಟ್ಟಾರೆ ಸುಮಾರು 32 ಸಾವಿರ ಕೋಟಿ ರು. ವಂಚನೆಗೆ ತುತ್ತಾಗಿವೆ ಎಂಬ ಆತಂಕಕಾರಿ ಅಂಶ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ನಿಂದ ಬಯಲಾಗಿದೆ.

ಮಧ್ಯಪ್ರದೇಶದ ನೀಮುಚ್‌ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಅವರು ಕೋರಿದ್ದ ಮಾಹಿತಿಗೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನೀಡಿರುವ ಉತ್ತರದಲ್ಲಿ ಈ ಅಂಶವಿದೆ. ಈ ಹಣಕಾಸು ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಒಟ್ಟಾರೆ 2480 ವಂಚನೆ ಪ್ರಕರಣಗಳು 18 ಸರ್ಕಾರಿ ಬ್ಯಾಂಕುಗಳಲ್ಲಿ ವರದಿಯಾಗಿವೆ. ಅದರಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಪಾಲು ಶೇ.38ರಷ್ಟಿದೆ ಎಂದಿದ್ದಾರೆ.

1197 ಪ್ರಕರಣಗಳಿಂದ ಎಸ್‌ಬಿಐಗೆ 12,012.77 ಕೋಟಿ ರು. ವಂಚನೆಯಾಗಿದೆ. ಅಲಹಾಬಾದ್‌ ಬ್ಯಾಂಕ್‌ಗೆ 381 ಪ್ರಕರಣಗಳಿಂದ 2856.46 ಕೋಟಿ ರು., ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 99 ಕೇಸ್‌ಗಳಿಂದ 2526.55 ಕೋಟಿ ರು., ಬ್ಯಾಂಕ್‌ ಆಫ್‌ ಬರೋಡಾಗೆ 75 ಕೇಸ್‌ಗಳಿಂದ 2297.05 ಕೋಟಿ ರು., 45 ಪ್ರಕರಣಗಳಿಂದ ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ಗೆ 2133.08 ಕೋಟಿ ರು., ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 1982.27 ಕೋಟಿ ರು. ಹಾಗೂ ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾಕ್ಕೆ 1196.19 ಕೋಟಿ ರು. ವಂಚನೆಯಾಗಿದೆ ಎಂದು ಮಾಹಿತಿ ನೀಡಿದೆ.

ಇನ್ನು ಕರ್ನಾಟಕ ಮೂಲದ ಕೆನರಾ ಬ್ಯಾಂಕ್‌ಗೆ 2,035.81 ಕೋಟಿ ರು., ಸಿಂಡಿಕೇಟ್‌ ಬ್ಯಾಂಕ್‌ಗೆ 795.75 ಕೋಟಿ ರು, ಕಾರ್ಪೊರೇಷನ್‌ ಬ್ಯಾಂಕ್‌ಗಳಲ್ಲಿ 960.80 ಕೋಟಿ ರು. ವಂಚನೆ ದಾಖಲಾಗಿದೆ. ಇದಲ್ಲದೆ, ಯೂನಿಯನ್‌ ಬ್ಯಾಂಕ್‌ ಇಂಡಿಯಾಗೆ 753.37 ಕೋಟಿ ರು., ಬ್ಯಾಂಕ್‌ ಆಫ್‌ ಇಂಡಿಯಾಗೆ 517 ಕೋಟಿ ರು. ಹಾಗೂ ಯೂಕೋ ಬ್ಯಾಂಕ್‌ನಲ್ಲಿ 470.74 ಕೋಟಿ ರು. ಬ್ಯಾಂಕಿಂಗ್‌ ವಂಚನೆಗಳು ದಾಖಲಾಗಿವೆ ಎಂದು ಆರ್‌ಬಿಐ ಆರ್‌ಟಿಐ ಅರ್ಜಿಗೆ ಉತ್ತರಿಸಿದೆ.

ಆದರೆ, ಈ ಬ್ಯಾಂಕ್‌ಗಳ ವಂಚನೆ ಯಾವ ಸ್ವರೂಪದ್ದು ಹಾಗೂ ಈ ನಷ್ಟವನ್ನು ಬ್ಯಾಂಕ್‌ಗಳು ಸರಿದೂಗಿಸುತ್ತವೆಯೇ ಅಥವಾ ಗ್ರಾಹಕರ ಮೇಲೆ ಹೇರಲಾಗುತ್ತದೆಯೇ ಎಂಬುದರ ಮಾಹಿತಿಯನ್ನು ಆರ್‌ಬಿಐ ಬಹಿರಂಗಪಡಿಸಿಲ್ಲ.

ಬ್ಯಾಂಕ್‌ ಹೆಸರು ವಂಚನೆ ಪ್ರಕರಣ ಮೌಲ್ಯ ಕೋಟಿ ರು.ಗಳಲ್ಲಿ

ಎಸ್‌ಬಿಐ 1197 12012.77

ಅಲಹಾಬಾದ್‌ ಬ್ಯಾಂಕ್‌ 381 2855.46

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 99 2526.55

ಬ್ಯಾಂಕ್‌ ಆಫ್‌ ಬರೋಡಾ 75 2297.05

ಓರಿಯಂಟಲ್‌ ಬ್ಯಾಂಕ್‌ ಆಫ್‌ ಇಂಡಿಯಾ 45 2133.08

ಕೆನರಾ ಬ್ಯಾಂಕ್‌ 69 2035.81

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ 194 1982.27

ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ 31 1196.19

ಕಾರ್ಪೊರೇಷನ್‌ ಬ್ಯಾಂಕ್‌ 16 960.80

ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ 46 934.67

ಸಿಂಡಿಕೇಟ್‌ ಬ್ಯಾಂಕ್‌ 54 795.75 ಕೋಟಿ

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ 51 753.37

ಬ್ಯಾಂಕ್‌ ಆಫ್‌ ಇಂಡಿಯಾ 42 517

ಯೂಕೋ ಬ್ಯಾಂಕ್‌ 34 470.74