ನವದೆಹಲಿ(ಆ.23): ಇಬ್ಬರು ಶಕ್ತಿಶಾಲಿಗಳ ನಡುವೆ ಯುದ್ಧವಾದರೆ ಏನಾಗುತ್ತೆ ಹೇಳಿ?. ಇಬ್ಬರ ಆರ್ಭಟ ಕಂಡು ಭೂಮಿ ಕೂಡ ಸಣ್ಣಗೆ ಕಂಪಿಸುತ್ತೆ. ಅದರಂತೆ ಭಾರತದ ಮಾರುಕಟ್ಟೆಯಲ್ಲಿ ವಾಣಿಜ್ಯ ಕ್ಷೇತ್ರದ ಇಬ್ಬರು ದಿಗ್ಗಜರು ಶೀಘ್ರದಲ್ಲೇ ಎದುರಾಗಲಿದ್ದಾರೆ. ಪರಿಣಾಮವಾಗಿ ಮಾರುಕಟ್ಟೆ ಕಂಪಿಸುವ ಸಮಯ ಬಂದಿದೆ.  

ರೀಟೇಲ್‌ ದಿಗ್ಗಜ ಕಂಪನಿಗಳಾದ ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ ಭಾರತೀಯರನ್ನು ಆಕರ್ಷಿಸಲು ಪೈಪೋಟಿಗೆ ಇಳಿದಿವೆ. ಇತ್ತೀಚಿಗಷ್ಟೇ ಫ್ಲಿಪ್ ಕಾರ್ಟ್ ನ ಶೇ. 77ರಷ್ಟು ಷೇರು ಖರೀದಿಸಿ ಬೀಗುತ್ತಿರುವ ವಾಲ್‌ಮಾರ್ಟ್‌, ಭಾರತದ ಮಾರುಕಟ್ಟೆ ಪ್ರವೇಶಿಸಲು ಸರಿಯಾದ ಸಮಯಕ್ಕೆ ಕಾದು ಕುಳಿತಿದೆ. ಅದರಂತೆ ಭಾರತದಲ್ಲಿ ಇನ್ನೇನು ಹಬ್ಬದ ಋತು ಪ್ರಾರಂಭವಾಗಲಿದ್ದು, ಭಾರಿ ದರ ಕಡಿತದ ಮೂಲಕ ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ ಪೈಪೋಟಿಗೆ ಸಜ್ಜಾಗಿವೆ.

ವರಮಹಾಲಕ್ಷ್ಮಿ ಹಬ್ಬದಿಂದ ಆರಂಭವಾಗುವ ಡಿಸ್ಕೌಂಟ್‌, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿವರೆಗೂ ಮುಂದುವರಿಯುವ ಸಾಧ್ಯತೆಗಳಿವೆ. ಭಾರತದಲ್ಲಿ ಈ ಅವಧಿಯಲ್ಲೇ ಶೇ.40ರಷ್ಟು ಶಾಪಿಂಗ್‌ ನಡೆಯುತ್ತದೆ ಎಂದು ಅಂದಾಜಿಸಲಾಗಿದ್ದು, ಈ ಕಾರಣಕ್ಕೆ ಎರಡೂ ಕಂಪನಿಗಳು ಈ ಹಬ್ಬಗಳಿಗಾಗಿ ಎದುರು ನೋಡುತ್ತಾ ಕುಳಿತಿವೆ.

ಗೃಹೋಪಯೋಗಿ ವಸ್ತುಗಳು, ಮೊಬೈಲ್, ಲ್ಯಾಪ್ ಟಾಪ್, ಕರು, ಬೈಕ್ ಗಳ ಮೇಲೆ ಭಾರೀ ಡಿಸ್ಕೌಂಟ್ ಘೋಷಣೆಯಾಗುವ ಸಾಧ್ಯತೆ ಇದ್ದು, ಭಾರತೀಯರನ್ನು ಸೆಳೆಯಲು ಈ ಎರಡೂ ದಿಗ್ಗಜ ಕಂಪನಿಗಳು ಯೋಜನೆ ಹಾಕಿಕೊಂಡು ಬರಲಿವೆ.