ನವದೆಹಲಿ[ಜು.24]: ಯಾವುದೇ ಫ್ಲ್ಯಾಟ್‌ ನಿವಾಸಿ ಮಾಸಿಕ 7500 ರು.ಗಿಂತ ಹೆಚ್ಚಿನ ನಿರ್ವಹಣಾ ಶುಲ್ಕವನ್ನು ಪಾವತಿಸುತ್ತಿದ್ದರೆ ಅವರು ಪೂರ್ಣ ಮೊತ್ತದ ಮೇಲೆ ಶೇ.18ರಷ್ಟುಜಿಎಸ್‌ಟಿ ಪಾವತಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಫ್ಲ್ಯಾಟ್‌ ಮಾಲೀಕರಿಂದ ಜಿಎಸ್‌ಟಿ ಸಂಗ್ರಹದ ಕುರಿತು ವಲಯ ತೆರಿಗೆ ಅಧಿಕಾರಿಗಳಿಗೆ ಹಣಕಾಸು ಸಚಿವಾಲಯ ರವಾನಿಸಿರುವ ಸುತ್ತೋಲೆಯಲ್ಲಿ ಈ ಮಾಹಿತಿ ನೀಡಲಾಗಿದೆ.

ಫ್ಲ್ಯಾಟ್‌ ಮಾಲೀಕ ಮಾಸಿಕ 7500ರು. ನಿರ್ವಹಣಾ ಶುಲ್ಕ ಪಾವತಿಸುತ್ತಿದ್ದರೆ, ನಿವಾಸಿಗಳ ಸಂಘವು ಮಾಸಿಕ ಶುಲ್ಕದ ಜೊತೆಜೊತೆಗೇ ಶೇ.18ರಷ್ಟುಜಿಎಸ್ಟಿಯನ್ನೂ ಸಂಗ್ರಹಿಸಬೇಕು ಮತ್ತು ಯಾವುದೇ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘ ತಾನು ನೀಡಿದ ಸೇವೆಗಳಿಗೆ ಸಂಗ್ರಹಿಸುವ ಹಣ ವಾರ್ಷಿಕ 20 ಲಕ್ಷ ರು. ಮೀರಿದರೆ ಅದಕ್ಕೂ ಶೇ.18 ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ನಿರ್ವಹಣಾ ಶುಲ್ಕಕ್ಕೆ ಜಿಎಸ್‌ಟಿ ವಿಧಿಸುವ ಕುರಿತು ಉದಾಹರಣೆ ಸಹಿತ ವಿವರ ನೀಡಿರುವ ಹಣಕಾಸು ಸಚಿವಾಲಯ, ಒಂದು ವೇಳೆ ಫ್ಲ್ಯಾಟ್‌ ಮಾಲೀಕ ಮಾಸಿಕ 9000 ರು. ನಿರ್ವಹಣಾ ಶುಲ್ಕ ಪಾವತಿ ಮಾಡುತ್ತಿದ್ದರೆ, ಆತ ಮೇಲೆ ಹೇಳಿದಂತೆ 7500 ರು.ಗಿಂತ (9000- 7500 = 1500 ರು.) ಮೇಲ್ಪಟ್ಟಮೊತ್ತವಾದ 1500 ರು.ಗೆ ಶೇ.18ರಷ್ಟುಜಿಎಸ್‌ಟಿ ಪಾವತಿ ಮಾಡುವುದಲ್ಲ. ಬದಲಾಗಿ ಪೂರ್ಣ 9000 ರು.ಗಳಿಗೂ ಶೇ.18ರಷ್ಟುಜಿಎಸ್‌ಟಿ ಪಾವತಿಸಬೇಕು ಎಂದು ಸ್ಪಷ್ಟಪಡಿಸಿದೆ.

ಒಂದು ವೇಳೆ ಒಬ್ಬನೇ ಮಾಲೀಕ 2 ಫ್ಲ್ಯಾಟ್‌ ಹೊಂದಿದ್ದು ಆತನಿಗೆ 15000 ರು. ನಿರ್ವಹಣಾ ಶುಲ್ಕ ಪಾವತಿ ಮಾಡುತ್ತಿದ್ದರೆ, ಎರಡೂ ಮನೆಯನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸಿ, ತಲಾ 7500 ರು.ವರೆಗೆ ಸಿಗುವ ವಿನಾಯಿಯನ್ನು ಆತನಿಗೆ ನೀಡಬಹುದು ಎಂದು ಹೇಳಿದೆ.